ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೆಸರಿನಲ್ಲಿ ಆಚರಿಸಿದ್ದು ಜನ್ಮದಿನವೇ ಅಥವಾ ಅತೃಪ್ತ ಆತ್ಮಗಳ ಕಾರ್ಯಕ್ರಮವೇ? ಅದೇ ವೇದಿಕೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬಗ್ಗೆ ಹಗುರವಾಗಿ ಮಾತನಾಡಿದ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಇದೇ ರೀತಿ ಮಾತನಾಡಿದರೆ ಮುಂದೆ ಇಲ್ಲಿಗೆ ಕಾಲಿಡುವುದೂ ಕಷ್ಟವಾದೀತು ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಎಚ್ಚರಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವ ಪುರುಷಾರ್ಥಕ್ಕೆ ಇಂತಹ ಕಾರ್ಯಕ್ರಮ ಮಾಡಿದ್ದರೋ ಗೊತ್ತಿಲ್ಲ. ಜನ್ಮದಿನದ ಹೆಸರಲ್ಲಿ ಅತೃಪ್ತ ಆತ್ಮಗಳು ಸೇರಿ, ಬಿಜೆಪಿ ಹೈಕಮಾಂಡ್‌ಗೆ ರೆಬಲ್ ಆಗಿ ಕಾರ್ಯಕ್ರಮ ನಡೆಸಿದ್ದು, ಬಿ.ವೈ.ವಿಜಯೇಂದ್ರ, ಎಂ.ಪಿ.ರೇಣುಕಾಚಾರ್ಯಗೆ ಪಕ್ಷದಿಂದ ತೆಗೆಸುವ ಉದ್ದೇಶದಿಂದಲೇ ಮಾಡಿದ ಕಾರ್ಯಕ್ರಮದಂತಿತ್ತು ಎಂದು ಅಣಕವಾಡಿದರು.
ಕೆಲ ಅತೃಪ್ತ ಆತ್ಮಗಳು ಪಕ್ಷದೊಳಗಿನ ಸಮಸ್ಯೆ ಹೇಳಿಕೊಳ್ಳದೇ, ದಾವಣಗೆರೆ ಅಭಿವೃದ್ಧಿಗೆ ಪಣಕೊಟ್ಟ ಶಾಮನೂರು ಕುಟುಂಬದ ಬಗ್ಗೆ ಮಾತನಾಡಿದ್ದನ್ನು ಖಂಡಿಸುತ್ತೇವೆ. ಇಲ್ಲಿನ ಪ್ರಥಮ ಮಹಿಳಾ ಸಂಸದೆ ಡಾ.ಪ್ರಭಾರವರ ಬಗ್ಗೆ ಪ್ರತಾಪ್ ಸಿಂಹ ಹಗುರ ಮಾತನಾಡಿ ದಾವಣಗೆರೆ ಮಹಿಳೆಯರನ್ನು ಅವಮಾನಿಸಿದ್ದಾರೆ. ಸಿಂಹ ಎಂದು ಹೆಸರಿಟ್ಟುಕೊಂಡು, ನರಿ ಬುದ್ಧಿ ತೋರಿಸಿದ್ದರಿಂದಲೇ ಮೈಸೂರಿನ ಟಿಕೆಟ್ ಇಂತಹ ವ್ಯಕ್ತಿಗೆ ಸಿಕ್ಕಿಲ್ಲ ಎಂದು ಟೀಕಿಸಿದರು.ಸಿದ್ದೇಶ್ವರ್ ಆಗಲಿ, ಸಿದ್ದೇಶ್ವರರ ತಂದೆಯಾಗಲೀ ಸಂಸದರಾಗಿ ದಾವಣಗೆರೆಗೆ ನೀಡಿದ ಕೊಡುಗೆ ಏನು? 20 ವರ್ಷ ಸಂಸದನಾಗಿ ಕೈಗಾರಿಕೆ ತರಲಿಲ್ಲ. 3.4 ಕೋಟಿ ರು.ನಲ್ಲಿ ನಿರ್ಮಿಸಿದ್ದ ಕುಂದುವಾಡ ಕೆರೆಗೆ 16 ಕೋಟಿ ರು. ಖರ್ಚು ಮಾಡಿ, ಹೂಳು ತೆಗೆಸಿದ್ದೇ ಸಿದ್ದೇಶ್ವರರ ದೊಡ್ಡ ಸಾಧನೆ. ವಿಮಾನಯಾನ ಸಚಿವರಾಗಿದ್ದರೂ ವಿಮಾನ ನಿಲ್ದಾಣ ತರಲಿಲ್ಲ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಮುಖಂಡ, ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಜನ ಸಾಮಾನ್ಯರಿಗೆ ಏನೂ ಒಳಿತನ್ನು ಮಾಡದ ಜಿ.ಎಂ.ಸಿದ್ದೇಶ್ವರರ ಸಹವಾಸ ಮಾಡಿದರೆ ನಿಮ್ಮ ರಾಜಕೀಯ ಜೀವನವನ್ನೇ ಹಾಳು ಮಾಡಿಕೊಂಡಂತೆ ಎಂದು ಕಿವಿಮಾತು ಹೇಳಿದರು.ಸೋತಾಗೆಲ್ಲಾ ಯಶವಂತರಾವ್ ಹೊಸ ಕಾಂಪ್ಲೆಕ್ಸ್!:
ಶ್ರೀರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದ, ರಾಮ ಮಂದಿರಕ್ಕೆ ಕಳಿಸಲು ತಯಾರಿಸಿದ ಬೆಳ್ಳಿ ಇಟ್ಟಿಗೆಯನ್ನೂ ತಮ್ಮ ಮನೆಯಲ್ಲೇ ಇಟ್ಟುಕೊಂಡಿರುವ ಬಿಜೆಪಿಯ ಯಶವಂತರಾವ್ ಜಾಧವ್ ಚುನಾವಣೆಗಳಲ್ಲಿ ಸೋತಾಗಲೆಲ್ಲಾ ಒಂದೊಂದು ಕಾಂಪ್ಲೆಕ್ಸ್ ಕಟ್ಟಿಕೊಂಡಿದ್ದು ಹೇಗೆ ಎಂದು ದಿನೇಶ ಕೆ.ಶೆಟ್ಟಿ ಪ್ರಶ್ನಿಸಿದರು.ವಿಧಾನಸಭೆ ಚುನಾವಣೆಗೆ ಬಂದ ಫಂಡನ್ನೆಲ್ಲಾ ಉಳಿಸಿಕೊಂಡು, ಯಶವಂತರಾವ್ ಚುನಾವಣೆಯಲ್ಲಿ ಸೋತಾಗಲೆಲ್ಲಾ ಒಂದೊಂದು ಕಾಂಪ್ಲೆಕ್ಸ್ ಮಾಡಿಕೊಂಡಿದ್ದು, ನನ್ನ ಬಗ್ಗೆ ಹಗುರವಾಗಿ ಮಾತನಾಡಿದ ಯಶವಂತರಾವ್ ಸಂಸ್ಕೃತಿ ಏನೆಂಬುದನ್ನು ಆ ಮಾತುಗಳೇ ಹೇಳುತ್ತವೆ ಎಂದರು.
ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ಕೆ.ಚಮನ್ ಸಾಬ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಎ.ನಾಗರಾಜ, ವರುಣ ಗೌಡ, ಮಂಗಳಮ್ಮ, ಮಂಜುಳಮ್ಮ, ಶ್ರೀಕಾಂತ ಬಗರೆ, ಸುರೇಶ ಜಾಧವ್, ಯುವರಾಜ, ವೆಂಕಟೇಶ ನಾಯ್ಕ ಇತರರು ಇದ್ದರು.ದಾವಣಗೆರೆ ಮಂಡಕ್ಕಿ ಭಟ್ಟಿ ಸ್ಥಳಾಂತರ, ಹಳೆ ಭಾಗದ ಅಭಿವೃದ್ಧಿಗೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್ ಸ್ಮಾರ್ಟ್ ಸಿಟಿ ಅನುದಾನದಲ್ಲಿ 370 ಕೋಟಿ ರು. ಅನುದಾನವನ್ನು ಹಿಂದೆ ಮೀಸಲಿಟ್ಟಿದ್ದರು. ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಅದನ್ನು ಬೇರೆಡೆ ಡೈವರ್ಟ್ ಮಾಡಿದರು. ಅದೇ ಹಣವನ್ನು ಉತ್ತರ ಭಾಗದ ಹೊಸ ಊರಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಬಳಸಿದ್ದು ಬಿಜೆಪಿಯವರು.
ಕೆ.ಚಮನ್ ಸಾಬ್, ಮಾಜಿ ಮೇಯರ್.