20ನೇ ಶತಮಾನದ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ಜ್ಞಾನಸಂಪತ್ತು ಅಪಾರವಾಗಿದ್ದು, ಅವರ ಸರಳ ಬದುಕಿನ ಸೂತ್ರ, ಶಿಸ್ತು, ನಿಷ್ಠೆ ನಮ್ಮೆಲ್ಲರ ಬದುಕಿಗೆ ಆದರ್ಶವಾಗಿವೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

20ನೇ ಶತಮಾನದ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀಗಳ ಜ್ಞಾನಸಂಪತ್ತು ಅಪಾರವಾಗಿದ್ದು, ಅವರ ಸರಳ ಬದುಕಿನ ಸೂತ್ರ, ಶಿಸ್ತು, ನಿಷ್ಠೆ ನಮ್ಮೆಲ್ಲರ ಬದುಕಿಗೆ ಆದರ್ಶವಾಗಿವೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಬಾಗಲಕೋಟೆ ವಿದ್ಯಾಗಿರಿಯ ವಚನ ರಕ್ಷಕ ಗೆಳೆಯರ ಬಳಗದಿಂದ ಭಾನುವಾರ ಕುದರಿಕನ್ನೂರ ಬಡಾವಣೆಯಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಾಗಲಕೋಟೆಗೂ ಸಿದ್ದೇಶ್ವರ ಶ್ರೀಗಳಿಗೂ ಅಪಾರ ನಂಟಿತ್ತು. ಅವರ ಪ್ರವಚನಕ್ಕೆ ಸಾವಿರ, ಸಾವಿರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು. ನಾವು ಸ್ವಾಮಿ ವಿವೇಕಾನಂದರನ್ನು ನೋಡಿಲ್ಲ. ಆದರೆ ಅವರ ಎಲ್ಲ ಆದರ್ಶಗಳನ್ನು ಶ್ರೀಗಳಲ್ಲಿ ಕಂಡೆವು. 20ನೇ ಶತಮಾನದ ಶ್ರೇಷ್ಠ ಸಂತರಾಗಿ ನಮಗೆಲ್ಲ ಜ್ಞಾನದ ಮಾರ್ಗ ತೋರಿಸಿದ್ದಾರೆ, ಅವರ ಮಾರ್ಗದರ್ಶನದಲ್ಲ ಎಲ್ಲರೂ ಜೀವನ ಸಾಗಿಸೋಣ ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಡಾ.ಜಿ.ಜಿ. ಹಿರೇಮಠ ಉಪನ್ಯಾಸ ನೀಡಿ, ಶ್ರೀಗಳು ಪದ್ಮ ಪ್ರಶಸ್ತಿ ವಿನಮ್ರವಾಗಿ ನಿರಾಕರಿಸಿದ, ಶತಮಾನ ಕಂಡ ಜೇಬಿಲ್ಲದ ಸಂತರು. ಅವರು ಪ್ರಪಂಚಕ್ಕೇ ಆದರ್ಶಪ್ರಾಯ, ಹೊಟ್ಟೆ, ನೆತ್ತಿ, ಮತ್ತು ನಾಲಿಗೆ ಶುದ್ಧವಾಗಿರಿಸಿಕೊಂಡ ಸಾಧಕರಾಗಿದ್ದ ಅವರು, ಪ್ರಕೃತಿಯಲ್ಲೇ ದೈವಕಂಡವರು. ಗುರುಗಳಾದವರು ಹೀಗೆಯೇ ಇರಬೇಕು ಎಂದು ತೋರಿಸಿಕೊಟ್ಟವರು ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.

ಸಿದ್ದೇಶ್ವರ ಶ್ರೀಗಳ ಒಡನಾಡಿ, ಶಿಷ್ಯ ಜ್ಞಾನಯೋಗಾಶ್ರಮದ ಹರ್ಷಾನಂದ ಸ್ವಾಮೀಜಿ ಉಪನ್ಯಾಸ ನೀಡಿ, ಶ್ರೀಗಳು ಕರುಣಾ ಸಾಗರವಾಗಿದ್ದರು. ಬಡವರ ಮೇಲೆ, ಪರಿಸರ, ಪ್ರಾಣಿಗಳ ಮೇಲೆ ಅಪಾರ ಕರುಣೆ ತೋರುತ್ತಿದ್ದರು. ಅವರ ಮೊದಲ ಆದ್ಯತೆ ಜ್ಞಾನ ದಾಸೋಹ, ಅನ್ನ ದಾಸೋಹವಾಗಿತ್ತು ಎಂದು ನುಡಿದರು.

ಮೈಗೂರು ಶಿವಾನಂದ ಮಠದ ಗುರುಪ್ರಸಾದ ಸ್ವಾಮೀಜಿ ಹಾಗೂ ಸಾನ್ನಿಧ್ಯ ವಹಿಸಿದ್ದ ವಿದ್ಯಾಗಿರಿಯ ಕನ್ನೂರ ಹಿರೇಮಠದ ವಿಶ್ವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಜಗತ್ತು ಕಂಡ ಶ್ರೇಷ್ಠ ಸಂತ, ತತ್ವಜ್ಞಾನಿಯಾಗಿದ್ದ ಸಿದ್ದೇಶ್ವರ ಶ್ರೀಗಳು ಹಿತನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗಲಿದೆ. ಸಿದ್ದೇಶ್ವರ ಶ್ರೀಗಳು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ ಎಂದು ಹೇಳಿದರು.

ಶಾಸ್ತ್ರೀಯ ಸಂಗೀತ ಪಂಡಿತರಾದ ಜಯತೀರ್ಥ ತಾಸಗಾಂವಕರ ವಚನ ಗಾಯನ ನಮನ ನಡೆಸಿಕೊಟ್ಟರು. ಅವರಿಗೆ ಚಂದ್ರಶೇಖರ ಆಲೂರ ತಬಲಾ ಹಾಗೂ ಪ್ರಕಾಶ ರುದ್ರಸ್ವಾಮಿಮಠ ಹಾರ್ಮೋನಿಯಂ ಸಾಥ್‌ ನೀಡಿದರು.

ಇದೇ ವೇಳೆ ಸಾಧಕರಿಗೆ, ಭಾರತೀಯ ರಕ್ಷಣಾ ಪಡೆಯ ನಿವೃತ್ತ ಯೋಧರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ. ವೃದ್ಧಾಶ್ರಮಕ್ಕೆ ಆಹಾರ ವಿತರಣೆ, ಅನಾಥ ಮಕ್ಕಳಿಗೆ ಸಹಾಯ ಧನ ವಿತರಣೆ ಹಾಗೂ ಶಾಲಾ ಬಡ ಮಕ್ಕಳಿಗೆ ನೋಟಬುಕ್, ಕಂಪಾಸ್‌ಗಳನ್ನು ವಿತರಿಸಲಾಯಿತು

ಸಾಹಿತಿ ರಾಜು ಗಡ್ಡಿಯವರು ರಚಿತ ಖಾಲಿ ಕೊಡಗಳು ಹಾಗೂ ಜಿ.ಎಂ. ಸಿಂಧೂರ ಅವರ ಕವನ ಸಂಕಲನ ಬಿಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ವೇದಿಕೆ ಮೇಲೆ ಹಿರಿಯರಾದ ಶ್ರೀಶೈಲ ಡೆಂಗಿ ಇದ್ದರು. ವಚನ ರಕ್ಷಕ ಗೆಳೆಯರ ಬಳಗದ ಸಂಚಾಲಕ ಮುತ್ತು ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕುಂಬಾರ ಸ್ವಾಗತಿಸಿದರು. ಎಸ್.ಎಸ್.ತೆಗ್ಗಿ ವಂದಿಸಿದರು. ಡಾ.ರವಿ ಕೋಟೆಣ್ಣವರ ಪರಿಚಯಿಸಿದರು. ಮೋಹನ ದೇಶಪಾಂಡೆ ನಿರೂಪಿಸಿದರು.