ಸಾರಾಂಶ
ಷಟ್‌ಸ್ಥಲ ಬ್ರಹ್ಮೋಪದೇಶ ಬೋಧಿಸಿದ ಪ್ರಣವಸ್ವರೂಪ ಸಿದ್ದಲಿಂಗ ಮಹಾಸ್ವಾಮಿಗಳುಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಸೋಮವಾರ ಕೊಟ್ಟೂರು ಸ್ವಾಮಿ ಶಾಖಾ ಮಠದಲ್ಲಿ ನೂತನ ಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ನೂತನ ಶ್ರೀಗಳಿಗೆ ಷಟ್‌ಸ್ಥಲ ಬ್ರಹ್ಮೋಪದೇಶ ಬೋಧಿಸಿದರು. ಇದೇ ಸಂದರ್ಭದಲ್ಲಿ ಸಿದ್ದೇಶ್ವರ ದೇಸಿಕರ ನಿರಂಜನರ ಹೆಸರನ್ನು ನಿರಂಜನ ಪ್ರಣವ ಸ್ವರೂಪ ಸಿದ್ದೇಶ್ವರ ಮಹಾಸ್ವಾಮಿ ಎಂದು ಅಭಿದಾನಿಸಿ ನಿರಂಜನ ದೀಕ್ಷೆ ಅನುಗ್ರಹಿಸಿದರು.
ಸುವರ್ಣಗಿರಿ ವಿರಕ್ತಮಠ, ವಳಬಳ್ಳಾರಿ- ನದಿಚಾಗಿಯ ಸಿದ್ದಲಿಂಗ ಮಹಾಸ್ವಾಮಿಗಳು, ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ-ಹಾಲಕೆರೆ ಹಂಪಿ ಹೇಮಕೂಟ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಆನಂತರ ನೂತನ ಪೀಠಾಪತಿಗಳು ಮಾತನಾಡಿ, ನನಗೆ ನಿಮ್ಮಿಂದ ಬಂಗಾರ, ಬೆಳ್ಳಿ, ಹಣಕ್ಕಿಂತ ನಿಮ್ಮ ಹೃದಯದೊಳಗೆ ಪ್ರೀತಿಯಿಂದ ಜಾಗ ನೀಡಿದರೆ ಅದೇ ನೀವು ನನಗೆ ಕೊಡಬಹುದಾದ ದೊಡ್ಡ ಕಾಣಿಕೆ ಎಂದರು.
ಹಂಪಿ ಹೇಮಕೂಟ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಆಶೀರ್ವಾದ ನನ್ನ ಮೇಲಿರಬೇಕು. ನಾನು ಸಣ್ಣವನು, ನನ್ನ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ, ಮುನ್ನಡೆಸಬೇಕು. ಸ್ವಾಮಿಯೆಂದರೆ ಮಠದ ಒಡೆಯನಲ್ಲ, ಸಮಾಜದ ಸೇವಕನಾಗಿ ಕೆಲಸ ಮಾಡುತ್ತೇನೆ. ಅಧಿಕಾರ ಹಾಗೂ ಸ್ಥಾನಮಾನಗಳು ಶಾಶ್ವತವಲ್ಲ. ಮಠದ ಏಳ್ಗೆಗೆ ನಮ್ಮೆಲ್ಲ ಭಕ್ತರ ಸಹಕಾರ ಮುಖ್ಯ ಎಂದರು.ಅಂಬಲಿ, ಕಂಬಳಿ ಆಸ್ತಿ:
ಶ್ರೀಗಳು ನನಗೆ ಬೆತ್ತ, ಜೋಳಿಗೆ, ಕಂಬಳಿ ಯಾಕೆ ಕೊಟ್ಟಿದ್ದಾರೆ? ಸ್ವಾಮೀಜಿಯ ನಿಜವಾದ ಆಸ್ತಿ ಏನೆಂದರೆ ಅಂಬಲಿ ಮತ್ತು ತಲೆ ಮೇಲೆ ಒಂದಿಷ್ಟು ಕಂಬಳಿ. ಮಿಕ್ಕಿದ ಆಸೆ ಸ್ವಾಮೀಜಿಗೆ ಇರಬಾರದು ಎಂದು ಕೊಟ್ಟಿದ್ದಾರೆ. ಜೋಳಿಗೆಯನ್ನು ಶ್ರೀಗಳು ಏಕೆ ಕೊಟ್ಟಿದ್ದಾರೆಂದರೆ ಅದರಲ್ಲಿ ಬಂಗಾರ, ಹಣ, ದವಸ-ಧಾನ್ಯ ಸಂಗ್ರಹಿಸಬೇಡ, ದುಶ್ಚಟಗಳನ್ನು ಅದರಲ್ಲಿ ಹಾಕಿಸಿಕೊಳ್ಳಿ, ದೀಕ್ಷೆ ನೀಡಲು ಜೋಳಿಗೆ ಕೊಟ್ಟಿದ್ದಾರೆ ಎಂದರು.ಬಳಿಕ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಠ ಸಮಾಜಕ್ಕೆ ಮಾದರಿಯಾಗಲಿ. ಶ್ರೀಗಳಿಂದ ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹಾರೈಸಿದರು.
ಹಂಪಿ ಹೇಮಕೂಟ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ವಳಬಳ್ಳಾರಿ- ನದಿಚಾಗಿಯ ಸುವರ್ಣ ವಿರಕ್ತ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ವಿವಿಧ ಮಠಾಧೀಶರು ಭಾಗವಹಿಸಿದ್ದರು.ರೋಣಾ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಇತಿಹಾಸ ತಜ್ಞ ಶರಣಬಸಪ್ಪ ಕೋಲ್ಕಾರ್, ವೈದ್ಯ ಬಸವರಾಜ ಕ್ಯಾವಟರ್ ಮಾತನಾಡಿದರು.
ಶ್ರೀಗಳ ಪಟ್ಟಾಧಿಕಾರದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಕಳಕನಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷೆ ದೇವಮ್ಮ ಸುರೇಶ ಬೆಳ್ಳಿಕಟ್ಟಿ, ಉಪಾಧ್ಯಕ್ಷ ಭೀಮನಗೌಡ ಜುಟ್ಲದ್, ಗುರುಸಿದ್ದಪ್ಪ ಯರಕಲ್, ಶರಣೇಗೌಡ ಮಾ.ಪಾ., ಅಮರಗುಂಡಪ್ಪ ಕೋರಿ, ಶರಣೇಗೌಡ ಕೊಂತನೂರು ಪಟೇಲ್, ಬಸವರಾಜಪ್ಪ ಚಳ್ಳೂರು, ಪರಮೇಶ್ವರಪ್ಪ ಕೊಂತನೂರು ಪೊ.ಪಾ., ಮಹೇಶಸ್ವಾಮಿ ಕುಲಕರ್ಣಿ ಇನ್ನಿತರರು ಇದ್ದರು.ಗ್ರಾಮದಲ್ಲಿ ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.