ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿ ಮಹಾ ರಥೋತ್ಸವ

| Published : Mar 17 2025, 12:33 AM IST

ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿ ಮಹಾ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜಯಚಾಮರಾಜಪುರ ಗ್ರಾಮದ ಶ್ರೀ ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯವರ ಮಹಾ ರಥೋತ್ಸವ ಗೋಧೂಳಿ ಲಗ್ನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಸಿದ್ದೇಶ ಸಿದ್ದೇಶ ಎಂಬ ಘೋಷದೊಂದಿಗೆ ಹರ್ಷೋದ್ಗಾರದಿಂದ ರಥವನ್ನು ಎಳೆದು ಸಂಭ್ರಮಿಸಿದರು ಹಾಗೂ ರಥಕ್ಕೆ ಬಾಳೆಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಗ್ರಾಮದ ಚೌಡೇಶ್ವರಿ ದೇವಿಯವರ ಕುಣಿತವು ನೋಡುಗರ ಮನಸೂರೆಗೊಂಡಿತ್ತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಣಕಟ್ಟೆ ಹೋಬಳಿಯ ಜಯಚಾಮರಾಜಪುರ ಗ್ರಾಮದ ಶ್ರೀ ಹಿರೇಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯವರ ಮಹಾ ರಥೋತ್ಸವ ಗೋಧೂಳಿ ಲಗ್ನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಜೆ.ಸಿ.ಪುರದಲ್ಲಿ ಕಳೆದ ೧೫ ದಿನಗಳಿಂದ ಗ್ರಾಮದಲ್ಲಿ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಯವರ ವೃಷಭೋತ್ಸವ, ವ್ಯಾರ್ಘಣೋತ್ಸವ, ಸರ್ಪೋತ್ಸವ, ಸೂರ್ಯಮಂಡಲೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಬಿಲ್ವಪತ್ರೆ ಉತ್ಸವ ಹೀಗೆ ನಾನಾ ಉತ್ಸವಗಳು ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ವೈಭವದಿಂದ ಸಾಗಿದವು.

ಅಪಾರ ಭಕ್ತರ ಸಮ್ಮುಖದಲ್ಲಿ ಧ್ವಜಾರೋಹಣ, ರಥಕ್ಕೆ ಕಳಸ ಹಾಕುವುದು ಹಾಗೂ ಅಗ್ನಿ ಕುಂಡಾರ್ಚನೆ ನೆರವೇರಿತು. ಸತತ ೧೫ ದಿನಗಳಿಂದ ಮಹಾರಥೋತ್ಸವದ ಅಂಗವಾಗಿ ಜೆ.ಸಿ.ಪುರ ಗ್ರಾಮವು ಬಂಧುಬಳಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ತುಂಬಿದ್ದು ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ರಥೋತ್ಸವದ ಅಂಗವಾಗಿ ಶ್ರೀ ಹಿರೇಕಲ್ಲು ಸಿದ್ದೇಶ್ವರ ಸ್ವಾಮಿಯವರಿಗೆ ಬೃಹತ್‌ ಗಾತ್ರದ ಹೂವಿನ ಹಾರ, ಕಮಲದ ಹಾರ ಸೇರಿದಂತೆ ವಿಶೇಷ ಅಲಂಕಾರ ಆಕರ್ಷಕವಾಗಿತ್ತು. ರಥೋತ್ಸವಕ್ಕೆ ಹಿರೇಕಲ್ಲು ಸಿದ್ದೇಶ್ವರ ನಾಮಾಂಕಿತದ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು. ನಂತರ ಸ್ವಾಮಿಯವರನ್ನು ರಥದ ಮೇಲೆ ಪ್ರತಿಸ್ಥಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಭಕ್ತರು ಸಿದ್ದೇಶ ಸಿದ್ದೇಶ ಎಂಬ ಘೋಷದೊಂದಿಗೆ ಹರ್ಷೋದ್ಗಾರದಿಂದ ರಥವನ್ನು ಎಳೆದು ಸಂಭ್ರಮಿಸಿದರು ಹಾಗೂ ರಥಕ್ಕೆ ಬಾಳೆಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಗ್ರಾಮದ ಚೌಡೇಶ್ವರಿ ದೇವಿಯವರ ಕುಣಿತವು ನೋಡುಗರ ಮನಸೂರೆಗೊಂಡಿತ್ತು.

ರಥೋತ್ಸವದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಜೆ.ಸಿ.ಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.