ಲಕ್ಷ್ಮೇಶ್ವರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಸಿದ್ದೇಶ್ವರ ಸ್ವಾಮಿಗಳ ಗುರು ನಮನ ಕಾರ್ಯಕ್ರಮದ ಅಂಗವಾಗಿ ಮಹಾ ಬಯಲಲ್ಲಿ ಬಯಲಾದ ಸಿದ್ದೇಶ್ವರ ಸ್ವಾಮೀಜಿಗಳು ಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಲಕ್ಷ್ಮೇಶ್ವರ: ಸರಳವಾದ ಬದುಕಿಗೆ ಸಿದ್ದೇಶ್ವರ ಸ್ವಾಮೀಜಿಗಳು ನಮಗೆಲ್ಲ ಮಾದರಿಯಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಜ್ಞಾನದ ಬೆಳಕು ನೀಡುವ ಆಧ್ಯಾತ್ಮಿಕ ಗುರುವಾಗಿದ್ದರು ಎಂದು ನ್ಯಾಯವಾದಿ ಮಹೇಶ ಹಾರೂಗೇರಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಸಿದ್ದೇಶ್ವರ ಶ್ರೀಗಳ ಸತ್ಸಂಗ ಬಳಗ, ಶರಣ ಸಾಹಿತ್ಯ ಪರಿಷತ್‌, ಕದಳಿ ಮಹಿಳಾ ವೇದಿಕೆ, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ, ಸಂಸ್ಕೃತಿ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕ ಅಭಿಮಾನಿ ಬಳಗ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂಜೆ ಸಿದ್ದೇಶ್ವರ ಸ್ವಾಮಿಗಳ ಗುರು ನಮನ ಕಾರ್ಯಕ್ರಮದ ಅಂಗವಾಗಿ ನಡೆದ ಮಹಾ ಬಯಲಲ್ಲಿ ಬಯಲಾದ ಸಿದ್ದೇಶ್ವರ ಸ್ವಾಮೀಜಿಗಳು ಎನ್ನುವ ವಿಷಯದ ಕುರಿತು ಮಾತನಾಡಿದರು.

ವಿಜಯಪುರದ ಜ್ಞಾನ ಯೋಗಾಶ್ರಮದ ಮೂಲಕ ನಾಡಿನ ತುಂಬ ಆಧ್ಯಾತ್ಮಿಕ ಹಾಗೂ ಜ್ಞಾನ ಉಣಬಡಿಸಿದ ಮಹಾನ್ ಸಂತರಾಗಿದ್ದಾರೆ. ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳು ಇಂದಿಗೂ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆಧ್ಯಾತ್ಮಿಕ ಸಾಧನೆಯ ಮೂಲಕ ಜ್ಞಾನದ ಬೀಜ ಬಿತ್ತಿ ಶಾಂತಿ ನೆಮ್ಮದಿಯ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಜೇಬು ಇಲ್ಲದ ಅಂಗಿಯ ತೊಟ್ಟು ಧಾರ್ಮಿಕ ಸಂತರಾಗಿದ್ದರು. ಜಾತಿ, ಮತ, ಪಂಥವ ಮೀರಿ ಎಲ್ಲರೂ ನಮ್ಮವರೇ ಎನ್ನುವ ಉದಾತ್ತ ಮೌಲ್ಯಗಳನ್ನು ಎತ್ತಿ ತೋರಿಸಿದರು. ಜಗತ್ತಿನ ದಾರ್ಶನಿಕರ ಸಾಲಿನಲ್ಲಿ ನಿಂತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು. ಬಯಲು ಆಲಯದೊಳು ಮನೆ ಮಾಡಿ ಜಗತ್ತಿನ ಸರ್ವರ ಹಿತ ಬಯಸಿದ ಸಂತರು. ನಡೆ-ನುಡಿ ಎರಡರಲ್ಲೂ ಭೇದವಿಲ್ಲದೆ ಬದುಕಿದವರು ಸಿದ್ದೇಶ್ವರ ಸ್ವಾಮೀಜಿಗಳು. ತಮಗಾಗಿ ಏನನ್ನೂ ಬಯಸದೆ ಎಲ್ಲವೂ ಸಮಾಜದ ಉದ್ಧಾರಕ್ಕಾಗಿ ಎನ್ನುವ ಸದಾಶಯ ಅವರದ್ದು ಎಂದು ಅವರು ಹೇಳಿದರು.

ಈ ವೇಳೆ ದೇವಣ್ಣ ಬಳಿಗಾರ, ಚಂದ್ರಣ್ಣ ಮಹಾಜನಶೆಟ್ಟರ ಸಿದ್ದೇಶ್ವರ ಸ್ವಾಮಿಗಳ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕ ಎಲ್.ಎಸ್. ಅರಳಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲಾ ಅರಳಿ, ಪೂರ್ಣಾಜಿ ಕರಾಟೆ, ಬಸಣ್ಣ ಬೆಂಡಿಗೇರಿ, ಮಹಾಬಳೇಶ್ವರಪ್ಪ ಬೇವಿನಮರದ, ಎಂ.ಕೆ. ಕಳ್ಳಿಮಠ, ಸಿ.ಜಿ. ಹಿರೇಮಠ, ಎನ್.ಆರ್. ಸಾತಪೂತೆ, ನಾಗರಾಜ ಕುಲಕರ್ಣಿ. ಸುಭಾಷ್ ಓದುವವರು, ರೇಖಾ ವಡಕಣ್ಣವರ, ಪ್ರತಿಮಾ ಮಹಾಜನಶೆಟ್ಟರ್, ಗೀತಾ ಮಾನ್ವಿ, ತಟ್ಟಿ ಸೇರಿದಂತೆ ಅನೇಕರು ಇದ್ದರು. ರತ್ನಾ ಕರ್ಕಿ ಕಾರ್ಯಕ್ರಮ ನಿರ್ವಹಿಸಿದರು.