ಸಿದ್ಧಾರ್ಥ ಸಂಪದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಬಿಡುಗಡೆ

| Published : May 22 2025, 01:03 AM IST

ಸಿದ್ಧಾರ್ಥ ಸಂಪದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಅದರ ವಿಮರ್ಶೆ ಮಾಡುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಪದ ಪ್ರಯೋಗ, ವಾಕ್ಯ ರಚನೆ ಮಾಡಲು ಪೂರಕವಾಗುತ್ತದೆ. ಜನಪ್ರಿಯ ಲೇಖಕರ ಪುಸ್ತಕಗಳನ್ನು ಓದುವುದರಿಂದ ಅದರಂತೆ ಬರವಣಿಗೆಯನ್ನು ಅಳವಡಿಸಿಕೊಳ್ಳಲು ಸಹಾಯಕಾರಿಯಾಗಲಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಶ್ರೀ ಸಿದ್ಧಾರ್ಥ ಮಾಧ್ಯಮ ಕೇಂದ್ರದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಪ್ರಕಟಿಸುತ್ತಿರುವ ‘ಸಿದ್ಧಾರ್ಥ ಸಂಪದ’ ಸಂಚಿಕೆ 24, ಸಂಪುಟ 20ರ ಪತ್ರಿಕೆಯನ್ನು ಪತ್ರಕರ್ತ ಚಂದನ್ ಬಿಡುಗಡೆಗೊಳಿಸಿದರು.

ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಚಂದನ್ ಅವರು, ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಿ ಅಗತ್ಯವಿರುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ವಿಭಿನ್ನ ಆಲೋಚನಾಶಕ್ತಿ ಬೆಳೆಸಿಕೊಂಡರೆ, ಅವಕಾಶಗಳು ಒದಗಿಬರುತ್ತವೆ. ವಿದ್ಯಾರ್ಥಿಗಳು ಬರಹ ಮತ್ತು ಓದಿನ ಕಡೆ ಗಮನ ಹರಿಸಬೇಕು. ಪ್ರತಿ ದಿನ ಹೊಸ ಹೊಸ ವಿಚಾರಗಳನ್ನು ಕಲಿತುಕೊಳ್ಳಬೇಕು. ಅದನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದರು.

ಹೊಸ ವಿಚಾರಗಳೊಂದಿಗೆ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಸುದ್ದಿ, ಲೇಖನ ಮತ್ತು ಬರಹಗಳನ್ನು ಹೊರತರಲು ಸಾಧ್ಯವಾಗುತ್ತದೆ. ಇದರ ಜತೆಗೆ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ನವ ಮಾಧ್ಯಮಕ್ಕೆ ಅತಿ ಹೆಚ್ಚಾಗಿ ವಿಚಾರ ಅಥವಾ ವಿಷಯ ಆಯ್ಕೆ ಬಹಳ ಮುಖ್ಯವಾಗಿರುತ್ತದೆ. ಅದರ ಜತೆಗೆ ಮಾಧ್ಯಮವನ್ನು ಬಳಸಿಕೊಂಡು ಜನರಿಗೆ ಆ ವಿಚಾರಗಳನ್ನು ತಲುಪಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಅದರ ವಿಮರ್ಶೆ ಮಾಡುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಪದ ಪ್ರಯೋಗ, ವಾಕ್ಯ ರಚನೆ ಮಾಡಲು ಪೂರಕವಾಗುತ್ತದೆ. ಜನಪ್ರಿಯ ಲೇಖಕರ ಪುಸ್ತಕಗಳನ್ನು ಓದುವುದರಿಂದ ಅದರಂತೆ ಬರವಣಿಗೆಯನ್ನು ಅಳವಡಿಸಿಕೊಳ್ಳಲು ಸಹಾಯಕಾರಿಯಾಗಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನದ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ, ಶ್ರೀಮತಿ ಶ್ವೇತಾ ಎಂ.ಪಿ., ಕಿರಣ್ ಸಿ. ಎನ್., ನವೀನ್ ಎನ್. ಜಿ., ರೇಡಿಯೋ ಸಿದ್ಧಾರ್ಥ 90.8 ಎಫ್ ಎಂ ನ ಕಾರ್ಯಕ್ರಮ ನಿರ್ಮಾಣ ಸಹಾಯಕರಾದ ಗೌತಮ್ ಎ. ವಿ., ವಿಶಾಲ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಶ್ರೀಮತಿ ಮಣಿ ಎಚ್., ಮನೋವಿಜ್ಞಾನ ವಿಭಾಗದ ಅಧ್ಯಾಪಕರಾದ ಶಿಲ್ಪಶ್ರೀ ಜಿ. ಸಿ., ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮಾಧ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಪ್ರಥಮ ವರ್ಷದ ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಕುಮಾರಿ ವರ್ಷಿತ ಎಂ.ಎನ್., ಕಾರ್ಯಕ್ರಮ ನಿರೂಪಿಸುವುದರ ಜತೆಗೆ ಸಿದ್ಧಾರ್ಥ ಸಂಪದ ಸಂಚಿಕೆಯ ಸಂಪೂರ್ಣ ಬರಹಗಳು ಮತ್ತು ಪುಟ ವಿನ್ಯಾಸವನ್ನು ವಿದ್ಯಾರ್ಥಿ ಸಂಪಾದಕರಾಗಿ ನಿರ್ವಹಿಸಿದರು.