ಸಾರಾಂಶ
ಹುಬ್ಬಳ್ಳಿ: ಮನುಷ್ಯ ತನ್ನ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ, ಶಾಂತಿ, ನೆಮ್ಮದಿಗಳು ಪ್ರಾಪ್ತವಾಗಬೇಕಾದರೆ ಯಾರಾದರೂ ಒಬ್ಬ ಶ್ರೇಷ್ಠ ಪುರುಷನನ್ನು ಆದರ್ಶವಾಗಿ ಸ್ವೀಕರಿಸಿ ಅನುಸರಿಸಬೇಕು. ಆಧುನಿಕ ಕಾಲದಲ್ಲಿ ಶಂಕರಾಚಾರ್ಯರ ಅವತಾರವೇ ಆಗಿರುವ ಸಿದ್ಧಾರೂಢರೇ ಸದ್ಭಕ್ತರಿಗೆ ಆದರ್ಶ ಪುರುಷರು ಎಂದು ಋಷಿಕೇಶ ಸನ್ಯಾಸಾಶ್ರಮದ ಮಹಾಮಂಡಲೇಶ್ವರ ಅಭಿಷೇಕ ಚೈತನ್ಯ ಶ್ರೀಗಳು ಹೇಳಿದರು.
ಇಲ್ಲಿನ ಸಿದ್ಧಾರೂಢ ಮಠದಲ್ಲಿ ಶಿವರಾತ್ರಿ ಅಂಗವಾಗಿ ನಡೆಯುತ್ತಿರುವ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್‌ನ ಮಂಗಳವಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನುಡಿದ ಯದ್ಯದಾಚರತಿ ಶ್ರೇಷ್ಠಃ ತತ್ತ ದೇವೇತರೋ ಜನಃ (ದೊಡ್ಡವರೆನಿಸಿಕೊಂಡವರು ಏನೇನು ಮಾಡುತ್ತಾರೋ ಉಳಿದವರೂ ಅದನ್ನೇ ಮಾಡುತ್ತಾರೆ.) ಎಂಬುದರ ಕುರಿತು ವ್ಯಾಖ್ಯಾನ ನೀಡಿದರು.ತಮ್ಮ ಜೀವನದಲ್ಲಿ ಬಹು ದೊಡ್ಡ ಗುರಿಯನ್ನು ಇಟ್ಟುಕೊಂಡ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು ಎಂದು ಕೃಷ್ಣನು ಗೀತೆಯಲ್ಲಿ ಹೇಳಿರುವುದು ಮಹತ್ವದ್ದಾಗಿದೆ. ಹಾಗಾಗಿ ನೀವೆಲ್ಲ ಬದುಕಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು.
ಸಿದ್ಧಾರೂಢರಂತಹ ಮಹಾಪುರುಷರನ್ನು ಬದುಕಿನ ಆದರ್ಶ ಪುರುಷರನ್ನಾಗಿ ಪರಿಗಣಿಸಿದರೆ ಜೀವನ ಉಜ್ವಲವಾಗುವುದು ಎಂದರು.ಹೈದರಾಬಾದ್ ಪರಾಶರ ಆಶ್ರಮದ ಆಚಾರ್ಯ ಪರಿಶುದ್ಧಾನಂದಗಿರಿ, ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು, ಹರಳಿಕಟ್ಟಿಯ ನಿಜಗುಣಾನಂದ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬ್ರಹ್ಮಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ ಮಾತನಾಡಿದರು. ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಸ್ವಾಗತಿಸಿದರು. ಗಣೇಶಾನಂದ ಮಹಾರಾಜರು ನಿರೂಪಿಸಿದರು.
ರಜತ ಕವಚ ಆನೆಗೆ ಬೆಳ್ಳಿ ಅಂಬಾರಿ
ಈ ಮೊದಲೇ ತಯಾರಾಗಿದ್ದ ಕಾಷ್ಠಗಜ ಶಿಲ್ಪಕ್ಕೆ ಕಲ್ಪಿಸಲಾದ ರಜತ ಕವಚ ಹಾಗೂ 105 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಮಿಟ್ಟಿಮಲ್ಕಾಪುರದ ನಿಜಾನಂದ ಸ್ವಾಮೀಜಿ ಅವರಿಂದ ನಡೆದ ರಜತ ಆನೆ ಅಂಬಾರಿ ಅನಾವರಣ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರು, ರಮೇಶ ಬೆಳಗಾವಿ, ಗೀತಾ ಕಲಬುರ್ಗಿ, ವಿನಾಯಕ ಘೋಡಕೆ, ಉದಯ ಕುಮಾರ ನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವೇದಾಂತ ಪರಿಷತ್ ಕಾರ್ಯಕ್ರಮಕ್ಕೆ ₹51 ಲಕ್ಷ ಸಂಗ್ರಹಿಸಿ ಕೊಟ್ಟ ಮಿಟ್ಟಿಮಲ್ಕಾಪುರದ ನಿಜಾನಂದ ಸ್ವಾಮೀಜಿ, ಅಂಬಾರಿಯ ಶಿಲ್ಪಿ ಅಶೋಕ ಬೆಳ್ಳಿಗಟ್ಟಿ ಹಾಗೂ ಕೆಜಿ ಹಳ್ಳಿ ದಂಪತಿಯನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ವಿಪ ಸಭಾಪತಿ ಬಸವರಾಜ ಹೊರಟ್ಟಿ ದಂಪತಿ, ಮುಖಂಡರಾದ ಶರಣಪ್ಪ ಕೊಟಗಿ, ವಿ.ಜಿ. ಪಾಟೀಲ ಹಾಗೂ ಮುತ್ತಣ್ಣ ಶಿವಳ್ಳಿ ಅವರನ್ನು ಟ್ರಸ್ಟ್ ಕಮಿಟಿಯಿಂದ ಗೌರವಿಸಲಾಯಿತುಸೇವಾರತ್ನ ಪ್ರಶಸ್ತಿ
ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಅವರಿಗೆ ಶ್ರೀ ಸಿದ್ಧಾರೂಢರ ಸರ್ವ ಭಕ್ತರ ಪರವಾಗಿ ಚಳಕಾಪುರದ ಶಂಕರಾನಂದ ಸ್ವಾಮೀಜಿ ಆರೂಢ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.