ಸಾರಾಂಶ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢರ ಮಹಾರಥೋತ್ಸವ ಗುರುವಾರ ಸಂಜೆ ಸಡಗರ, ಸಂಭ್ರಮ, ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ಸಿದ್ಧಾರೂಢರ ಕಥಾಮೃತಕ್ಕೆ ಶತಮಾನೋತ್ಸವ ಆದ ಹಿನ್ನೆಲೆಯಲ್ಲಿ ಅಜ್ಜನ ರಥೋತ್ಸವಕ್ಕೆ ಹೆಚ್ಚಿನ ಮೆರುಗು ಬಂದಿತ್ತು. ಭಕ್ತಗಣದ ಸಂಖ್ಯೆಯೂ ಹೆಚ್ಚಾಗಿತ್ತು. ಮಠಕ್ಕೆ ಬರುವ ಎಲ್ಲ ರಸ್ತೆಗಳು ತುಂಬಿ ತುಳುಕುತ್ತಿದ್ದವು. ಮಠದ ಸುತ್ತಮುತ್ತಲಿನ ಪ್ರದೇಶ ಕಾಲಿಡಲೂ ತೆರಪಿಲ್ಲದಂತಾಗಿತ್ತು. ರಥಬೀದಿಯ ಇಕ್ಕೆಲದಲ್ಲಿನ ಕಟ್ಟಡಗಳ ಮೇಲೂ ಜನವೇ ಜನ. ಸರಿ ಸುಮಾರ 6 ಲಕ್ಷಕ್ಕೂ ಹೆಚ್ಚು ಭಕ್ತರು ಇಂದಿನ ರಥೋತ್ಸವದಲ್ಲಿ ಭಾಗಿಯಾಗಿದ್ದರಿಂದ ಎಲ್ಲಿ ನೋಡಿದರಲ್ಲಿ ಜನಸಾಗರ ನೆರೆದಿತ್ತು.‘ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ, ಜೈ ಜೈ ಸಿದ್ಧಾರೂಢ, ಹುಬ್ಬಳ್ಳಿ ಎಂಬುದು ಕಲ್ಯಾಣ; ಸಿದ್ಧಾರೂಢ ಬಸವಣ್ಣ, ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ " ಸೇರಿದಂತೆ ಹಲವಾರು ಜಯಘೋಷಗಳು ಪ್ರತಿಧ್ವನಿಸಿದವು.
ಹೆಚ್ಚಿದ ಭಕ್ತಗಣ: ಪ್ರತಿವರ್ಷ 4.5 ಲಕ್ಷದಿಂದ 5 ಲಕ್ಷವರೆಗೂ ಸೇರುತ್ತಿದ್ದ ಭಕ್ತಗಣ, ಈ ವರ್ಷ 6 ಲಕ್ಷಕ್ಕೂ ಅಧಿಕ ಜನಸ್ತೋಮ ಜಮೆಯಾಗಿತ್ತು. ಇದಕ್ಕೆ ಕಾರಣ ಕಥಾಮೃತದ ಶತಮಾನೋತ್ಸವ. ಶ್ರೀಸಿದ್ಧಾರೂಢ ಕಥಾಮೃತ ಈ ವರ್ಷ ಶತಮಾನ ಪೂರೈಸಿತು. ಈ ಹಿನ್ನೆಲೆಯಲ್ಲಿ ವಿಶ್ವ ವೇದಾಂತ ಪರಿಷತ್ ಏರ್ಪಡಿಸಲಾಗಿತ್ತು. ಕಥಾಮೃತವನ್ನು 10 ಸಾವಿರಕ್ಕೂ ಅಧಿಕ ಭಕ್ತರು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದರು. ಇದರಿಂದ ಕಳೆದ ಹತ್ತು ದಿನಗಳಿಂದ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಇದರ ಪರಿಣಾಮವಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು.ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣ, ತಮಿಳನಾಡು ಸೇರಿದಂತೆ ಕರ್ನಾಟಕದ ಕಲಬುರಗಿ, ಬೀದರ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಅಜ್ಜನ ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು.
ಅಜ್ಜನ ರಥ ಮಠದಿಂದ ರಥಬೀದಿಯ ಮೂಲಕ ಮಹಾದ್ವಾರ ತಲುಪುತ್ತಿದ್ದಂತೆ ಲಕ್ಷಾಂತರ ಭಕ್ತರು ಭಾವಪರವಶರಾಗಿ ದೈವ ಸ್ವರೂಪಿ ಸಿದ್ಧಾರೂಢರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಮಠದಿಂದ ಸ್ವಲ್ಪ ದೂರ ಬರುತ್ತಿದ್ದಂತೆ ತೇರಿಗೆ ಮೇಲಿಂದ ಪುಷ್ಪಾರ್ಚನೆ ಮಾಡಿದ್ದು ಗಮನ ಸೆಳೆಯಿತು.ರಥಕ್ಕೆ ಚಾಲನೆ:ಸಂಜೆ ಮಠದ ಆವರಣದಲ್ಲಿ ಸಿದ್ಧಾರೂಢರ ರಥೋತ್ಸವಕ್ಕೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಜಿ. ರಮಾ ಚಾಲನೆ ನೀಡಿದರು. ವೇದಾಂತ ಪರಿಷತ್ತಿನಲ್ಲಿ ಭಾಗಿಯಾಗಿದ್ದ ಮತ್ತು ನಾಡಿನ ವಿವಿಧ ಮಠಗಳ ಅಪಾರ ಸಮಖ್ಯೆಯ ಶ್ರೀಗಳು ರಥದ ಹಿಂದೆ ಹೆಜ್ಜೆ ಹಾಕಿದರು.
ಮಠದ ಗಣ್ಯರು, ಭಕ್ತಸಮೂಹ ರಥವನ್ನು ಎಳೆಯಲು ಪ್ರಾರಂಭಿಸುತ್ತಿದ್ದಂತೆ ಭಕ್ತರು ಉತ್ತತ್ತಿ, ಲಿಂಬೆ, ಬಾಳೆಹಣ್ಣು, ಪೇರಲ ಸೇರಿ ಚಿಕ್ಕ ಹಣ್ಣುಗಳನ್ನು ರಥದ ಮೇಲೆ ತೂರಿ ಭಕ್ತಿ ಮೆರೆದರು.ವಿವಿಧ ಮೇಳ:ಜಗ್ಗಲಗಿ ಮೇಳ, ಕರಡಿ ಮಜಲು, ಡೊಳ್ಳು ಕುಣಿತ ಸೇರಿದಂತೆ ಭಜನಾ ತಂಡಗಳು ರಥದ ಮುಂದೆ ಮುಂದೆ ಸಾಗುತ್ತಿದ್ದವು. ಇವುಗಳೊಟ್ಟಿಗೆ ಜನ ನೃತ್ಯದ ಮೂಲಕ ಭಕ್ತಿ ತೋರಿಸಿದರು. ಅದರ ಹಿಂದೆಯೇ ಸಿದ್ಧಾರೂಢ ಅಜ್ಜ ರಥದಲ್ಲಿ ವಿರಾಜಮಾನವಾಗಿ ಕುಳಿತು ರಥ ಬೀದಿಯಲ್ಲಿ ಸಾವಧಾನವಾಗಿ ಆಗಮಿಸುತ್ತಿದ್ದ ಈ ವೈಭವ ಕಣ್ತುಂಬಿಕೊಂಡ ಭಕ್ತಸಮೂಹ ಅಜ್ಜನಿಗೆ ಜೈಕಾರ ಹಾಕುತ್ತ ಕೈ ಮುಗಿಯುತ್ತ ನಿಂತಿತ್ತು. ಮಠದಿಂದ ಮಹಾದ್ವಾರದ ವರೆಗಿನ ರಥಬೀದಿಯ ಇಕ್ಕೆಲಗಳು ಭರ್ತಿಯಾಗಿದ್ದವು. ರಥಬೀದಿಯಂತೂ ಕಾಲಿಡಲೂ ಆಗದಷ್ಟು ಕಿಕ್ಕಿರಿದು ಭಕ್ತರಿಂದ ತುಂಬಿ ಹೋಗಿತ್ತು. ರಥಬೀದಿ ಅಕ್ಕಪಕ್ಕದ ಕಟ್ಟಡಗಳು, ಗಿಡಮರಗಳ ಮೇಲೆ ನಿಂತು ಜನ ರಥೋತ್ಸವ ವೀಕ್ಷಿಸಿದರು.
ಯುವಕರು ತಮ್ಮ ಹತ್ತಿರ ರಥ ಬರುತ್ತಿದ್ದಂತೆ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. ಇನ್ನು ಸ್ಥಳೀಯ ಭಕ್ತರು ಅಲ್ಲಲ್ಲಿ ರಥಕ್ಕೆ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಸಂಜೆ 7 ಗಂಟೆಗೆ ರಥ ಮಹಾದ್ವಾರ ತಲುಪುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಅಲ್ಲಿ ಧಾರ್ಮಿಕ ಕೈಂಕರ್ಯ ಕೈಗೊಂಡ ಬಳಿಕ ರಥ ತಿರುಗಿ ಮಠದತ್ತ ಸಾಗಿತು.ಟ್ರಾಫಿಕ್ ಜಾಮ್: ರಥೋತ್ಸವದ ವೇಳೆ ಇಡೀ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಆನಂದನಗರ, ಇಂಡಿಪಂಪ್ ಸರ್ಕಲ್, ಎಂಟಿಮಿಲ್, ಅಕ್ಷಯ ಪಾರ್ಕ್ ಸೇರಿದಂತೆ ಎಲ್ಲೆಡೆಯೂ ಮೂರ್‍ನಾಲ್ಕು ಕಿಮೀಗಟ್ಟಲೇ ವಾಹನಗಳು ಸರತಿ ಸಾಲಲ್ಲಿ ನಿಂತಿದ್ದವು. ರಥೋತ್ಸವ ಮುಗಿದು ಅರ್ಧಗಂಟೆ ನಂತರ ವಾಹನಗಳ ಸುಗಮ ಸಂಚಾರ ಶುರುವಾಯಿತು.
ಕಮಿಷನರ್‌ಗೆ ಟ್ರಾಫಿಕ್ ಬಿಸಿ !: ರಥೋತ್ಸವದ ವೇಳೆಯೇ ತಮ್ಮ ವಾಹನದಲ್ಲಿ ಮಠಕ್ಕೆ ಆಗಮಿಸಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡರು. ರಥಬೀದಿಯಲ್ಲೇ ಸಾರ್ವಜನಿಕರ ಮಧ್ಯೆಯೇ ನಿಂತು ರಥೋತ್ಸವ ವೀಕ್ಷಿಸಿದರು.