ಸಾರಾಂಶ
ಬೆಳಗ್ಗೆಯಿಂದಲೇ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆ ಶ್ರಾವಣ ಮಾಸದ ಕೊನೆಯ ಸೋಮವಾರ ಸ್ಥಳೀಯ ಆರಾಧ್ಯ ದೈವ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಗಾರ ಮಧ್ಯೆ ವೈಭವದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಬೀಳಗಿ
ಬೆಳಗ್ಗೆಯಿಂದಲೇ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆ ಶ್ರಾವಣ ಮಾಸದ ಕೊನೆಯ ಸೋಮವಾರ ಸ್ಥಳೀಯ ಆರಾಧ್ಯ ದೈವ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಗಾರ ಮಧ್ಯೆ ವೈಭವದಿಂದ ಜರುಗಿತು.ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಪೂಜೆ, ಎಲೆಪೂಜೆ ನಡೆಯಿತು. ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಕಳಸದ ಮೆರವಣಿಗೆ ಸಂಜೆ 7.30ಕ್ಕೆ ಸಿದ್ಧೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ಮೆರವಣಿಗೆಯುದ್ದಕ್ಕೂ ಸಾರವಾಡದ ಗೊಂಬೆ ಕುಣಿತ, ಕರಡಿ ಮೇಳ ವಾದ್ಯಮೇಳಗಳ ಕಲರವ ಎಲ್ಲೆಡೆ ಕೇಳಿಬಂದವು.
ಮಳೆ ಸಹ ಲೆಕ್ಕಿಸದೆ ಅಪಾರ ಭಕ್ತಸಮೂಹ ರಥೋತ್ಸವ ಕಡೆಗೆ ಹರಿದು ಬಂದಿತ್ತು. ರಥೋತ್ಸವ ಉದ್ದಕ್ಕೂ ಭಕ್ತರು ಬೆಂಡು ಬೆತ್ತಾಸು ,ಖಾರೀಕ್, ಬಾಳೆ ಹಣ್ಣುಗಳನ್ನು ಹಾರಿಸಿ ಹರಕೆ ತೀರಿಸಿ ರಥ ಎಳೆದು ದರ್ಶನ ಪಡೆದರು.ದೇವಸ್ಥಾನ ಜಾತ್ರಾ ಸಮಿತಿಯ ಶರತ ದೇಸಾಯಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಸೇರಿದಂತೆ ಪಟ್ಟಣದ ಗುರುಹಿರಿಯರು ಹಾಗೂ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿದ್ದರು.
ಜಾತ್ರೆಗಳಿಂದ ಸಾಮಾಜಿಕ ಸೌಹಾರ್ದತೆ: ಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಬೆಳಗ್ಗೆ ಚಾಲನೆ ನೀಡಿದ ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಜಾತ್ರೆಗಳಿಂದ ಗ್ರಾಮದಲ್ಲಿ ಪರಸ್ಪರ ಸಹೋದರತೆ ಮತ್ತು ಸೌಹಾರ್ದತೆ ಬೆಳೆಯುತ್ತದೆ. ಗ್ರಾಮದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ಸಾಗಿಸಬೇಕು ಎಂದರು. ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.