ಸಾರಾಂಶ
ಶಿರಸಿ: ಮನುಷ್ಯನಿಗೆ ದೊಡ್ಡ ಸಿದ್ಧಿಗಳು ಧರ್ಮಾಚರಣೆ ಫಲವಾಗಿ ಲಭಿಸುತ್ತವೆ. ನಮ್ಮ ಎಲ್ಲ ಧರ್ಮಾಚರಣೆಗಳು ನಮ್ಮ ಅನೇಕ ಶಕ್ತಿಯನ್ನು ಉಳಿತಾಯ ಮಾಡುತ್ತವೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.
ಅವರು ಭರತನಳ್ಳಿ ಸೀಮಾದ ಶಿಷ್ಯರು ಚಾತುರ್ಮಾಸ್ಯ ವೇಳೆ ಸಲ್ಲಿಸಿದ ಪಾದಪೂಜಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಪೂಜೆ, ಜಪ, ಯಜ್ಞ, ದಾನ, ವೃತ ಹೀಗೆ ಹಲವು ಧರ್ಮಾಚರಣೆಗಳನ್ನು ಮಾಡುತ್ತೇವೆ. ಹೀಗೆ ದೀರ್ಘ ಕಾಲದವರೆಗೆ ಮಾಡಿದರೆ ಮುಂದೆ ನಮಗೆ ಅದ್ಬುತ ಶಕ್ತಿಗಳು ಉಳಿತಾಯವಾಗುತ್ತವೆ. ನಮ್ಮ ಶರೀರಗಳಲ್ಲಿ ಅನೇಕ ನಾಡಿಗಳು ಇರುತ್ತವೆ. ಮನುಷ್ಯನು ಪೂಜೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಅನೇಕ ನಾಡಿಗಳು, ಶರೀರ ಮನಸ್ಸುಗಳು ವಿಶ್ರಾಂತಿಯನ್ನು ಪಡೆಯುತ್ತವೆ ಎಂದರು.
ಸ್ವಸ್ಥ ಮನಸ್ಸಿನಿಂದ ಪೂಜೆ, ಜಪಗಳನ್ನು ಮಾಡಿದಾಗ ಅನೇಕ ಶಕ್ತಿಗಳ ಉಳಿತಾಯ ಆಗುತ್ತವೆ. ಇದರಿಂದ ಆರೋಗ್ಯಕರವಾದ ಹಾರ್ಮೋನುಗಳು ಬಿಡುಗಡೆಯಾಗಿ ಆರೋಗ್ಯದಿಂದ ಇರುವ ಹಾಗೆ ಮಾಡುತ್ತವೆ. ಎಲ್ಲ ಆಚರಣೆಗಳ ಮೊದಲು ಬ್ರಹ್ಮಚರ್ಯದ ವ್ರತ ಇದೆ. ಬ್ರಹ್ಮಚರ್ಯದಿಂದ ಹಲವು ಶಕ್ತಿಗಳ ಉಳಿತಾಯವಾಗುತ್ತವೆ. ಬ್ರಹ್ಮಚರ್ಯದ ರಕ್ಷಣೆ ಆದರೆ ದೀರ್ಘಕಾಲದ ಪ್ರಯೋಜನ ಆಗುತ್ತದೆ. ಉಸಿರಾಟ ಎನ್ನುವುದು ನಮ್ಮ ಒಳಗೆ ಇರುವ ಪ್ರಾಣವಾಯು ಬರೀ ವಾಯು ಅಲ್ಲ. ಜೀವತುಂಬಿದ ಶಕ್ತಿ. ನಾವು ಸಹಜವಾಗಿ ಉಸಿರಾಟ ಮಾಡುವಾಗ ಗಾಳಿ ಒಳಗೆ ಹೊರಗೆ ಹೋಗಿ ಬಂದು ಮಾಡುತ್ತಾ ಇರುತ್ತದೆ. ಆದರೆ ಪ್ರಾಣಾಯಾಮ ಮಾಡುವುದರಿಂದ ಅನೇಕ ಶಕ್ತಿಗಳು ಮೆದುಳಿನತ್ತ ಸಾಗುತ್ತವೆ. ಆ ಮೂಲಕ ಅದ್ಭುತವಾದ ಪರಿಣಾಮವಾಗುತ್ತದೆ ಎಂದರು.ಆರೋಗ್ಯ, ಪಾಪಕ್ಷಯ, ಮನಸ್ಸು ಏಕಾಗ್ರತೆಗೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಯಾರಿಗೆ ಮನಸ್ಸು ಬಹಳ ಚಂಚಲ ಇದೆ ಎಂದು ಅನಿಸಿದರೆ ಅಂಥವರು ಪ್ರಾಣಾಯಾಮಕ್ಕೆ ಶರಣು ಹೋಗಬೇಕು. ನಮ್ಮ ಪ್ರಾಣದ ಶಕ್ತಿ ಉಳಿತಾಯವಾಗುತ್ತದೆ ಎಂದರು.
ಮನಸ್ಸು ಕೂಡ ಒಂದು ಶಕ್ತಿಯ ಕೇಂದ್ರ. ಲೋಕದ ವಾಸನೆಗೆ ಸಿಕ್ಕಿ ಇಂದ್ರಿಯಗಳು ಹೊರ ಮುಖವಾಗಿ ಹೋಗುತ್ತಿರುತ್ತದೆ. ಇಂದ್ರಿಯಗಳನ್ನು ಅಂತರ್ಮುಖವಾಗಿಸುವತ್ತ ಪ್ರಯತ್ನ ಮಾಡಿದರೆ ಮನಸ್ಸಿನ ಶಕ್ತಿಯು ಉಳಿತಾಯವಾಗುತ್ತದೆ. ಹೀಗೆ ಇಂದ್ರಿಯಗಳ ಮೂಲಕ ಹೊರ ಹೋಗುವ ಪ್ರಜ್ಞಾ ಶಕ್ತಿಯನ್ನು ಧ್ಯಾನದ ಮೂಲಕ ಯಾರು ರಕ್ಷಿಸಿ ಕೊಳ್ಳುತ್ತಾರೆ. ಅವರು ಉತ್ತಮ ಪ್ರಜ್ಞಾವಂತರಾಗುತ್ತಾರೆ. ಹೀಗೆ ಆರೋಗ್ಯ, ಬ್ರಹ್ಮಚರ್ಯ, ಪ್ರಾಣವಾಯು, ಪ್ರಜ್ಞಾಶಕ್ತಿಗಳು ಇವೆಲ್ಲವೂ ನಮ್ಮ ಧರ್ಮಾಚರಣೆಯ ಮೂಲಕ ಸಿದ್ಧಿಸುತ್ತವೆ. ನಮ್ಮ ಎಲ್ಲ ಧರ್ಮಾಚರಣೆಗಳು ನಮ್ಮ ಒಳಗೆ ಇರುವ ಸಹಜವಾದ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.ಹರಿ ಭಕ್ತಿಯು ಮನುಷ್ಯನಿಗೆ ಅತ್ಯಂತ ದುರ್ಲಭ. ಅಂತಹ ದುರ್ಲಭವಾದ ಹರಿ ಭಕ್ತಿಯು ಇಂತಹ ನಮ್ಮ ಎಲ್ಲ ಧರ್ಮಾಚರಣೆಗಳಿಂದ ದೊರಕುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಇದರಿಂದ ದೀರ್ಘವಾದ ಆಯಸ್ಸು ಆರೋಗ್ಯ ಲಭಿಸುತ್ತದೆ ಎಂದರು.
ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.ಪ್ರಮುಖರಾದ ಶ್ರೀಪಾದ ಹೆಗಡೆ, ಜಿ.ಎಸ್.ಹೆಗಡೆ, ಸುರೇಶ ಹೆಗಡೆ, ಎನ್.ಜಿ.ಹೆಗಡೆ ಇತರರು ಇದ್ದರು. ಮಾತೆಯರು ಕುಂಕುಮಾರ್ಚನೆ, ಶಂಕರ ಸ್ತೋತ್ರ ಪಠಣ, ಗೀತಾ ಪಠಣವನ್ನು ಮಾಡಿದರು. ಮಹನೀಯರು ಗಾಯತ್ರಿ ಅನುಷ್ಠಾನ ಮಾಡಿದರು.