ಸಾರಾಂಶ
ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ನಡೆದ ಸಿದ್ದಿ ಯುವಕನ ಕೊಲೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡ ಆರೋಪಿ ಬಂಧಿಸುವಂತೆ ಸೋಮವಾರ ಸಿದ್ದಿ ಸಮುದಾಯದ ಸಾವಿರಾರು ಜನ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಯಲ್ಲಾಪುರ:
ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ನಡೆದ ಸಿದ್ದಿ ಯುವಕನ ಕೊಲೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡ ಆರೋಪಿ ಬಂಧಿಸುವಂತೆ ಸೋಮವಾರ ಸಿದ್ದಿ ಸಮುದಾಯದ ಸಾವಿರಾರು ಜನ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು. ಅಧಿಕಾರಿಗಳ ಮನವೊಲಿಕೆಯ ನಂತರ ಹತ್ಯೇಗೀಡಾದ ಯುವಕನ ಶವ ಪಡೆದು ಅಂತ್ಯಕ್ರಿಯೆ ನಡೆಸಲು ತಂದೆ ಸಮ್ಮತಿ ಸೂಚಿಸಿದರು.ಮೆರವಣಿಗೆ ನಡೆಸುವುದಕ್ಕಿಂತ ಮುನ್ನ ಶಿರಸಿ ಡಿಎಸ್ಪಿ ಎಂ.ಎಸ್. ಪಾಟೀಲ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳ ಜತೆ ಸಿದ್ದಿ ಮುಖಂಡರು ಮಾತುಕತೆ ನಡೆಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಮೂರು ತಂಡ ರಚಿಸಲಾಗಿದೆ ಎಂದು ಮನವೊಲಿಸುವ ಪ್ರಯತ್ನ ಮಾಡಿ, ಮೃತ ಪ್ರಜ್ವಲ್ ಕೆಕ್ಕೆರಿಕರ್ ಸಿದ್ದಿಯ ಮೃತ ದೇಹ ತೆಗೆದುಕೊಂಡು ಹೋಗಿ ಅಂತಿಮ ವಿಧಿ-ವಿಧಾನ ಪೂರೈಸುವಂತೆ ಮನವಿ ಮಾಡಿದರು. ಆನಂತರ, ಪೊಲೀಸ್ ಠಾಣೆಯ ಎದುರು ನೆರೆದ ಸಾವಿರಾರು ಜನರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸುವ ನಿರ್ಣಯಕ್ಕೆ ಬಂದರು.ಪ್ರತಿಭಟನಾಕಾರರು ಪೊಲೀಸ್ ಠಾಣೆಯ ಕಾಂಪೌಂಡ್ ಒಳಗೆ ಪ್ರವೇಶಿಸದಂತೆ ಮುಖ್ಯ ದ್ವಾರಕ್ಕೆ ಬ್ಯಾರಿಕೇಡ್ ಹಾಕಿ ಕಾವಲು ಕಾಯ್ದರು. ತಹಸೀಲ್ದಾರ್ ಕಚೇರಿಯ ಕಾಂಪೌಂಡ್ ಒಳಗೆ ಬಿಟ್ಟುಕೊಡಲಿಲ್ಲ. ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿಂತು ಪ್ರತಿಭಟಿಸುತ್ತಿರುವ ಕಾರಣಕ್ಕೆ ವಾಹನ ಸಂಚಾರಕ್ಕೆ ಕೆಲಸಮಯ ಅಡಚಣೆಯಾಯಿತು. ಆಗ ಪ್ರತಿಭಟನಾಕಾರರನ್ನು ತಾಲೂಕಾಡಳಿತ ಸೌಧದ ಕಾಂಪೌಂಡ್ ಒಳಗೆ ಸೇರಿಸಿಕೊಳ್ಳಲಾಯಿತು. ಆಡಳಿತ ಸೌಧದ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನಿತ್ ಸಿದ್ದಿ, ಕಳೆದ ಹಲವಾರು ವರ್ಷಗಳಿಂದ ಸಿದ್ದಿ ಜನರ ಮೇಲೆ ನಿರಂತರವಾಗಿ ಹಲ್ಲೆ, ಕೊಲೆಯ ಪ್ರಯತ್ನ ನಡೆಯುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಸಿದ್ದಿ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಬಂಧನವಾಗಿಲ್ಲ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ ಆರೋಪಿ ಬಂಧಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬೇಕು ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ್, ಶಿರಸಿ ಡಿಎಸ್ಪಿ ಎಂ.ಎಸ್. ಪಾಟೀಲ್ ಇದ್ದರು. ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಗೌರವಾಧ್ಯಕ್ಷ ಜೊನ್ ಸಿದ್ದಿ, ಸಿದ್ದಿ ಸಮುದಾಯದ ಪ್ರಮುಖರಾದ ಲಾರೆನ್ಸ್ ಸಿದ್ದಿ, ಡಿಎಸ್ಎಸ್ ಅಧ್ಯಕ್ಷ ಶೇಖರ ಸಿದ್ದಿ, ಜೂಲಿಯಾನಾ ಸಿದ್ದಿ, ಬಾಬು ಸಿದ್ದಿ, ಅಂಥೋನ್ ಸಿದ್ದಿ, ಮೇರಿ ಗರೀಬಾಚೆ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.ತಹಸೀಲ್ದಾರ್ ಎಂ. ಗುರುರಾಜ್ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು,50 ಸಾವಿರ ಪರಿಹಾರ:
ಕೊಲೆಯಾದ ಪ್ರಜ್ವಲ ಕೆಕ್ಕೇರಿಕರ ಮೃತದೇಹ ಪಡೆಯಲು ಆತನ ತಂದೆ, ಸಹೋದರರು ಮತ್ತು ಸಿದ್ದಿ ಸಮುದಾಯದ ಮುಖಂಡರು ಅಧಿಕಾರಿಗಳ ಮನವೊಲಿಕೆಯ ನಂತರ ಸೋಮವಾರ ಸಂಜೆ ಒಪ್ಪಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಯ್ಯ ಸೊಗಲದ, ತಹಸೀಲ್ದಾರ್ ಎಂ. ಗುರುರಾಜ ಹಾಗೂ ಡಿಎಸ್‌ಪಿ ಎಂ.ಎಸ್. ಪಾಟೀಲ್ ಸಿದ್ದಿ ಸಮುದಾಯದವರ ಮನವೊಲಿಸಿ ಶವವನ್ನು ಅಂತ್ಯಕ್ರಿಯೆ ನಡೆಸದಿದ್ದರೇ ದೇಹ ಕೆಡುತ್ತದೆ. ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದೇಹ ಕಾಯ್ದಿಡಲು ಯಾವುದೇ ರೀತಿಯ ವ್ಯವಸ್ಥೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಎಲ್ಲರ ಒತ್ತಾಯಕ್ಕೆ ಮಣಿದ ಬಳಿಕ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲು ಒಪ್ಪಿಕೊಂಡರು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೃತನ ತಂದೆಗೆ ₹ 50 ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಪ್ರಶಾಂತ ಸಭಾಹಿತ, ಸ್ಥಳೀಯ ಪ್ರಮುಖರಾದ ಅನಿಲ ನಾಯ್ಕ, ಆಯೇಶಾ ಗೊಜನೂರು, ಮುಸ್ರತ್ ಖಾನ್, ಸಿದ್ದಿ ಸಮುದಾಯದ ಪ್ರಮುಖರಾದ ಬೆನಿತ್ ಸಿದ್ದಿ, ಜಾನ್ ಸಿದ್ದಿ, ವಿಜಯ ಸಿದ್ದಿ ಸೇರಿದಂತೆ ಹಲವಾರು ಜನ ಇದ್ದರು.