ಸಿದ್ದು ಬಜೆಟ್: ನಿರಾಸೆ ನಡುವೆ ಭರವಸೆಯ ಕೋಲ್ಮಿಂಚು!

| Published : Feb 17 2024, 01:16 AM IST

ಸಿದ್ದು ಬಜೆಟ್: ನಿರಾಸೆ ನಡುವೆ ಭರವಸೆಯ ಕೋಲ್ಮಿಂಚು!
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಸಿದ್ದರಾಮಯ್ಯ ನೇತೃತ್ವದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್‌ನಲ್ಲಿ ಹತ್ತಾರು ನಿರೀಕ್ಷೆಗಳು ಕೈಗೂಡಲಿವೆ ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಬಜೆಟ್ ಮಿಶ್ರಫಲ ನೀಡಿದೆ.

ದೊಡ್ಡಬಳ್ಳಾಪುರ: ಸಿದ್ದರಾಮಯ್ಯ ನೇತೃತ್ವದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್‌ನಲ್ಲಿ ಹತ್ತಾರು ನಿರೀಕ್ಷೆಗಳು ಕೈಗೂಡಲಿವೆ ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಬಜೆಟ್ ಮಿಶ್ರಫಲ ನೀಡಿದೆ. ಜಿಲ್ಲೆಯ ಬಹುನಿರೀಕ್ಷಿತ ಯೋಜನೆಗಳ ಪ್ರಸ್ತಾಪ ಇಲ್ಲದ ನಿರಾಸೆ ಒಂದೆಡೆಯಾದರೆ, ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ಪಟ್ಟಣಗಳನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸುವ ಜೊತೆಗೆ ಸುಸಜ್ಜಿತ ರಸ್ತೆ-ರೈಲು ಸಂಪರ್ಕ, ಮೂಲಸೌಕರ್‍ಯಗಳಿಗೆ ಒತ್ತು ನೀಡುವ ಬಗ್ಗೆ ಸ್ಪಷ್ಟ ಭರವಸೆ ದೊರೆತಿರುವುದು ಜಿಲ್ಲೆಯ ಪಾಲಿಗೆ ಕೊಂಚ ಆಶಾಭಾವನೆ ಮೂಡಿಸಿದೆ.

2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿಗೆ ಕೆಲ ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದರೆ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ, ಉನ್ನತ ಶಿಕ್ಷಣ ಕೇಂದ್ರಗಳು, ಜಿಲ್ಲಾ ಕೇಂದ್ರ, ನೇಕಾರರ ಮಾರುಕಟ್ಟೆ ಸಂಕೀರ್ಣ, ಪುಷ್ಪಕೃಷಿ ಸಂಸ್ಥೆಗಳ ಸ್ಥಾಪನೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಆಶೋತ್ತರಗಳು ಪೂರ್ಣವಾಗಿ ಈಡೇರಿಲ್ಲ.

ಬೆಂ.ಗ್ರಾ. ಜಿಲ್ಲೆಗೆ ಘೋಷಣೆಯಾದ ಯೋಜನೆಗಳು:

1.ಬೆಂಗಳೂರು ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ ಅಭಿವೃದ್ದಿ ಪಡಿಸಲಾಗುವುದು.

2.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆಯನ್ನು ಪ್ರಾರಂಭಿಸಲು ಕಾರ್‍ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು.

3.ತಾಲೂಕು ಆಸ್ಪತ್ರೆಗಳಿಲ್ಲದ ಅನೇಕಲ್, ನೆಲಮಂಗಲ, ಹೊಸಕೋಟೆ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳನ್ನು ತಲಾ 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

4.ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಅಭಿವೃದ್ದಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ.

5.ನೆಲಮಂಗಲದಲ್ಲಿ 6 ಕೋಟಿ ರುಪಾಯಿ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪಥ ನಿರ್ಮಾಣ(ರಾಜ್ಯದ ವಿವಿಧ ಜಿಲ್ಲೆಗಳ 6 ಸ್ಥಳಗಳಲ್ಲಿ ಚಾಲನಾ ಪಥ ನಿರ್ಮಾಣಕ್ಕೆ 36 ಕೋಟಿ ರು.ಮೀಸಲು).

6.ದೇವನಹಳ್ಳಿಯಲ್ಲಿ 5 ಕೋಟಿ ರುಪಾಯಿ ವೆಚ್ಚದಲ್ಲಿ ಸೀಜಿಂಗ್ ಯಾಡ್ ನಿರ್ಮಾಣ ಮಾಡುವುದು (ತುಮಕೂರು ಮತ್ತು ದೇವನಹಳ್ಳಿಗಳಿಗೆ ಯೋಜನೆ ಜಾರಿಗೆ ಒಟ್ಟು 10 ಕೋಟಿ ರುಪಾಯಿ ಮೀಸಲು.)

7.ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪೂಜನಹಳ್ಳಿಯಲ್ಲಿ ಆಹಾರ ಪಾರ್ಕ್ ಸ್ಥಾಪನೆ.

ಮಹತ್ತರ ಯೋಜನೆಗಳ ನಿರೀಕ್ಷೆ ಹುಸಿ:

ರಾಜಧಾನಿಯ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈಗಾರಿಕಾಭಿವೃದ್ದಿ, ನಗರೀಕರಣ ಮತ್ತು ಕೃಷಿ, ನೇಕಾರಿಕೆಯ ಅಸ್ಥಿರತೆಯ ನಡುವೆ ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದೆ. ಬೆಂಗಳೂರಿಗೆ ಪರ್‍ಯಾಯವಾಗಿ ಬೆಳೆಯುತ್ತಿರುವ ಗ್ರಾಮಾಂತರ ಜಿಲ್ಲೆಗೆ ಅಗತ್ಯ ಮೂಲಸೌಕರ್‍ಯಗಳನ್ನು ಹೊಂದುವುದು ಸವಾಲಿನ ಕೆಲಸವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮಹತ್ತರ ಯೋಜನೆಗಳನ್ನು ನಿರೀಕ್ಷಿಸಿತ್ತು. ಆದರೆ ಕೆಲ ವಿಚಾರಗಳಲ್ಲಿ ನಿರಾಶೆಯಾಗಿದೆ.

ಬೆಂಗಳೂರು ಕೇಂದ್ರಿತವಾಗಿದ್ದ ಜಿಲ್ಲಾಡಳಿತ, ಜಿಲ್ಲೆಯ ಭೌಗೋಳಿಕ ವ್ಯಾಪ್ತಿಗೆ ಸ್ಥಳಾಂತರಗೊಂಡು 7 ವರ್ಷಗಳಾಗುತ್ತಾ ಬಂದರೂ ಜಿಲ್ಲಾಡಳಿತ ಕೇಂದ್ರದಿಂದ ಜಿಲ್ಲೆಯ ತಾಲೂಕುಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮರೀಚಿಕೆಯಾಗಿಯೇ ಉಳಿದಿದೆ. ಅದರಲ್ಲೂ ಮುಖ್ಯವಾಗಿ ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳ ಜನರಿಗೆ ಜಿಲ್ಲಾಡಳಿತ ಭವನ ತಲುಪಲು ಸರ್ಕಾರಿ ನೇರ ಸಾರಿಗೆ ಸಂಪರ್ಕ ಅತ್ಯಂತ ವಿರಳವಾಗಿದೆ. ಕಳೆದ ಹಲವು ವರ್ಷಗಳಿಂದ ಬಜೆಟ್‌ನಲ್ಲಿ ಜಿಲ್ಲೆಯ ಜನರು ನಿರೀಕ್ಷಿಸಿದ ಹಲವು ಮಹತ್ವದ ಯೋಜನೆಗಳು ಮಂಜೂರಾಗದೆ ನಿರಾಸೆಯಾಗಿದ್ದರೂ, ಕೆಲ ಅನಿರೀಕ್ಷಿತ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿವೆ.ಬಾಕ್ಸ್...........

ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ಮರೀಚಿಕೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ನಿರೀಕ್ಷೆ ಹುಸಿಯಾಗಿದೆ. ೬ ವರ್ಷಗಳ ಹಿಂದೆಯೇ ಮಂಜೂರಾದ ಜಿಲ್ಲಾಸ್ಪತ್ರೆ ಪ್ರಸ್ತಾವನೆಗೆ ಅಗತ್ಯ ಅನುದಾನ ಈ ಬಾರಿಯೂ ದೊರೆತಿಲ್ಲ. ಕುಡಿಯುವ ನೀರಿನ ಬವಣೆ ನಿವಾರಣೆಗೆ ಶಾಶ್ವತ ಯೋಜನೆ ಪ್ರಕಟಿಸಬೇಕು. ದಕ್ಷಿಣ ಕಾಶಿ ಶಿವಗಂಗೆ, ಮಾಕಳಿ ದುರ್ಗ ನಿಸರ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು. ಗ್ರಾಮಾಂತರ ಜಿಲ್ಲಾ ಪ್ರವಾಸಿ ಹಬ್ ನಿರ್ಮಾಣಕ್ಕೆ ಯೋಜನೆ ಜಾರಿಯಾಗಬೇಕು ಎಂಬುದೂ ಸೇರಿದಂತೆ ಹಲವು ನಿರೀಕ್ಷೆಗಳೂ ಹುಸಿಯಾಗಿವೆ.

ಸಬ್ ಅರ್ಬನ್ ರೈಲು ಯೋಜನೆಯನ್ನು ದೊಡ್ಡಬಳ್ಳಾಪುರದವರೆಗೆ ವಿಸ್ತರಣೆ ಮಾಡುವುದು, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಪಟ್ಟಣಗಳಿಗೆ ಮೆಮು ರೈಲು ಸಂಪರ್ಕ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲ.

ಬಾಕ್ಸ್.............

ಜವಳಿ ಕ್ಷೇತ್ರಕ್ಕೆ ಸಮಾಧಾನ ತಂದ ಬಜೆಟ್

ದೊಡ್ಡಬಳ್ಳಾಪುರ ಸೇರಿದಂತೆ ಬೆಂ.ಗ್ರಾ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯುತ್ ಮಗ್ಗ ನೇಕಾರರಿಗೆ ಬಜೆಟ್ ಅಲ್ಪ ಸಮಾಧಾನ ತಂದಿದೆ. ರಾಜ್ಯದಲ್ಲಿ ಜವಳಿ ಮತ್ತು ನೇಕಾರಿಕೆ ಅಭಿವೃದ್ದಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು 2024-29ರ ಅವಧಿಗೆ 10 ಸಾವಿರ ಕೋಟಿ ರುಪಾಯಿಗಳ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲು ಪ್ರಸ್ತಾವನೆಯನ್ನು ಬಜೆಟ್ ನೀಡಿದೆ.

16ಕೆಡಿಬಿಪಿ1-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ.