ಸಾರಾಂಶ
ಮುಂಡಗೋಡ: ಸಿದ್ದಿ ಸಮುದಾಯದ ಶ್ರೀಮಂತ ಪಾರಂಪರಿಕ ಜ್ಞಾನದ ಜೊತೆಗೆ ಅಪಾರ ದೈಹಿಕ ಸಾಮರ್ಥ್ಯ, ಇಂದಿನ ಪೀಳಿಗೆಯ ಮಕ್ಕಳಲ್ಲಿಯ ಶಿಕ್ಷಣ ಪ್ರೇಮ ಹಾಗೂ ಕ್ರೀಡಾ ಸ್ಫೂರ್ತಿ ಇವೆಲ್ಲವೂ ಸಿದ್ದಿ ಸಮುದಾಯ ಮುಖ್ಯವಾಹಿನಿಗೆ ಬರುವ ಲಕ್ಷಣಗಳನ್ನು ಹೊಂದಿವೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಇಲ್ಲಿಯ ಲೊಯೋಲ ವಿಕಾಸ ಕೇಂದ್ರ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯ ಸಿದ್ದಿ ಸಂಘಟನೆಗಳು ಹಾಗೂ ಲೊಯೋಲ ವಿಕಾಸ ಕೇಂದ್ರ, ಮುಂಡಗೋಡ ಇವುಗಳ ಸಂಯುಕ್ತಾಶ್ರಯದಲ್ಲಿ ಜಂಟಿಯಾಗಿ ಜರುಗಿದ ಸಿದ್ದಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಿದ್ದಿ ಸಮುದಾಯದ ಶ್ರೀಮಂತ ಪಾರಂಪರಿಕ ಜ್ಞಾನ, ಕಲೆ, ಸಂಸ್ಕೃತಿಯನ್ನು ಮೆಚ್ಚುವ ವ್ಯವಸ್ಥೆ ಅವರ ಬದುಕಿನ ಧಾರುಣ ಪರಿಸ್ಥಿತಿ ಉತ್ತಮಗೊಳಿಸುವತ್ತ ರಚನಾತ್ಮಕ ಕ್ರಮ ಕೈಗೊಳ್ಳದಿರುವುದು ವಿಷಾದಕರ ಸಂಗತಿಯಾಗಿದೆ. ಸರ್ಕಾರದ ಸೌಲಭ್ಯ- ಸೌಕರ್ಯಗಳನ್ನು ಪಡೆದುಕೊಳ್ಳುವ ಛಲ ಮತ್ತು ಸಾಧಿಸುವ ಮನೋಭಾವ ಸಿದ್ದಿ ಸಮುದಾಯಕ್ಕೆ ಅಗತ್ಯವಿದೆ ಎಂದರು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದಿ ಸಮುದಾಯ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ವಿಭಜನೆಗೊಂಡರೂ ಕೊಂಕಣಿ ಭಾಷೆ ಬಳಸುವುದರ ಮೂಲಕ ತಮ್ಮ ಸಮಸ್ಯೆ-ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ, ಸಿದ್ದಿ ಸಮುದಾಯದ ಬೇಡಿಕೆಯನ್ನು ಎದುರಿಸಲು ವೇದಿಕೆ ಕಲ್ಪ್ಪಿಸಿಕೊಟ್ಟಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಸಿದ್ದಿ ಸಮುದಾಯಕ್ಕೆ ಹಲವಾರು ಅವಕಾಶಗಳು ಮತ್ತು ಸೌಲಭ್ಯಗಳು ಸರಕಾರದಿಂದ, ಸಂಘ-ಸಂಸ್ಥೆಗಳಿಂದ ದೊರೆಯುತ್ತಿದ್ದರೂ ಸರಿಯಾದ ಮಾಹಿತಿ, ಮಾರ್ಗದರ್ಶನದ ಕೊರತೆ, ಕೀಳರಿಮೆ, ನಕಾರಾತ್ಮಕ ಮನೋಭಾವ ಸಿದ್ದಿಗಳ ಅಭಿವೃದ್ಧಿಗೆ ತೊಡಕಾಗಿದೆ. ಸಿದ್ದಿ ಸಮಾವೇಶ, ಸಿದ್ದಿ ಸಮುದಾಯದ ಪ್ರತಿಭೆಗಳಿಗೆ ಸನ್ಮಾನ, ಪ್ರೋತ್ಸಾಹ, ಗುರುತಿಸುವಿಕೆ ಮಹತ್ವದ ಹೆಜ್ಜೆಗಳಾಗಿವೆ ಎಂದರು.ಪುಸ್ತಕ ಮಳಿಗೆ, ಆರ್ಯುವೇದಿಕೆ ಗಿಡಮೂಲಿಕೆ ಹಾಗೂ ಸಿದ್ದಿ ಸಮುದಾಯದ ಮ್ಯೂಸಿಯಂನ್ನು ಅನುಕ್ರಮವಾಗಿ ಲಕ್ಷ್ಮಿ ಸಿದ್ದಿ, ಹಸನ್ ಸಾಬ್, ಜೋಕಿಂ ಅಲ್ವಾರಿಸ್ ಉದ್ಘಾಟಿಸಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಕಾವ್ಯರಾಣಿ, ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾ.ಅನಿಲ್ ಡಿಸೋಜಾ, ಜುಲಿಯಾನ್ ಫರ್ನಾಡಿಸ್, ರಾಮನಾಥ ಸಿದ್ದಿ, ಜಾನಪದ ಪ್ರಶಸ್ತಿ ವಿಜೇತೆ ಸೋಬಿನ್ ಕಾಂಬ್ರೇಕರ್, ವಾಲ್ಮಿಕಿ ಪ್ರಶಸ್ತಿ ಪುರಷ್ಕೃತರಾದ ಲಕ್ಷ್ಮಿ ಸಿದ್ದಿ, ಗೌರಿ ಸಿದ್ದಿ, ಸಿದ್ದಿ ಹಸನಸಾಬ್, ಮೋದಿನಸಾಬ್ ಹುಲಕೊಪ್ಪ, ಅಲ್ಲಾಬಕ್ಸ್ ಸಿದ್ದಿ, ಯಾಕೂಬ್ ನಾಯ್ಕ್, ಮನು ದೊಡ್ಡಮನಿ, ನವೀನ್ ಲೊಬೊ, ಮೇರಿ ಗರಿಬಾಚೆ ಉಪಸ್ಥಿತರಿದ್ದರು.ಮೋಜೆಸ್ ಮಂಗಳವಾಡಕರ ಹಾಗೂ ಅಂಜಲಿನ್ ಫ್ರಾನ್ಸಿಸ್ ಸಿದ್ದಿ ನಿರೂಪಿಸಿದರು. ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಕಾರ್ಯದರ್ಶಿ ಸಂತೋಷ ಬಿಳ್ಕಿಕರ್ ವಂದಿಸಿದರು.