ಜನಮನ ಸೆಳೆದ ಸಿದ್ದಯ್ಯನಕೋಟೆ ಜನಪರ ಉತ್ಸವ

| Published : Feb 25 2024, 01:50 AM IST

ಸಾರಾಂಶ

ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ‘ಜನಪರ ಉತ್ಸವ’ವನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ತಳಸಮುದಾಯದಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಕಲಾವಿದರಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷವೂ ಜನಪರ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಹೇಳಿದರು.ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ನಡೆದ ಜನಪರ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳಿದ್ದು, ಗಿರಿಜನ ಉತ್ಸವ, ಚಿಗುರು, ಸಾಂಸ್ಕೃತಿಕ ಸೌರಭ, ಯುವ ಸೌರಭ, ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಪ್ರಾಯೋಜಿತ ಕಾರ್ಯಕ್ರಮ, ಅಂಬೇಡ್ಕರ್ ಓದು ಬರಹ ಹಾಗೂ ಕಲಾವಿದರಿಗೆ ಮಾಸಾಶನ ನೀಡುವುದು ಇತ್ಯಾದಿ ಯೋಜನೆಗಳಿದ್ದು, ಕಲಾವಿದರು ಇವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇನ್ನೂ ಹೆಚ್ಚಿನದಾಗಿ ಕಲೆಗಳನ್ನು ಬೆಳೆಸುವ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಬಾಲ್ಕಿಯ ಹಿರೇಸಂಸ್ಥಾನ ಮಠದ ನಾಡೋಜ ಶ್ರೀ ಬಸವಲಿಂಗ ಪಟ್ಟಾಧ್ಯಕ್ಷರು, ಇಳಕಲ್ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ, ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರ ಶಾಖಾಮಠದ ಬಸವಲಿಂಗ ಮಹಾಸ್ವಾಮೀಜಿ, ಚಿತ್ರದುರ್ಗದ ಬಸವಮುರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ಕಾರ್ಯದರ್ಶಿ ಪಿ.ಆರ್.ಕಾಂತರಾಜ್, ಜಾನಪದ ಕಲಾವಿದರು ಹಾಗೂ ರಾಜ್ಯ ಮಾಶಾಸನ ಸಮಿತಿ ಸದಸ್ಯ ಡಿ.ಓ.ಮುರಾರ್ಜಿ, ಜಾನಪದ ಕಲಾವಿದ ಪ್ರಕಾಶ್ ಮಲ್ಲಿಗೆವಾಡ ಸೇರಿದಂತೆ ಮತ್ತಿತರರು ಇದ್ದರು.ಇನ್ನು, ಜನಪರ ಉತ್ಸವದಲ್ಲಿ ಹೊಸದುರ್ಗದ ಕಂಠೇಶ್ ಮತ್ತು ತಂಡದವರ ಕ್ರಾಂತಿಗೀತೆಗಳು, ಚಿಕ್ಕೋಬನಹಳ್ಳಿಯ ಮಾರಕ್ಕ ಮತ್ತು ತಂಡದವರ ತತ್ವಪದಗಳು, ಸಿದ್ದಯ್ಯನ ಕೋಟೆ ನುಂಕೇಶ್ ಮತ್ತು ತಂಡದವರ ವಚನ ಗಾಯನ, ಕೋನಸಾಗರದ ಶಿವಣ್ಣ ಮತ್ತು ಸಂಗಡಿಗರ ಕನ್ನಡ ಗೀತೆ ಗಾಯನ, ಮೊಳಕಾಲ್ಮೂರಿನ ಲೋಕೇಶ್ ಮತ್ತು ತಂಡದ ವರಿಂದ ಜಾನಪದ ಗೀತೆ, ಚಳ್ಳಕೆರೆ ಮುತ್ತುರಾಜ್ ಮತ್ತು ತಂಡದವರ ಭಾವಗೀತೆ, ಚಿಕ್ಕೋನಹಳ್ಳಿಯ ಸಿ.ಎಂ.ಬಾಬು ಮತ್ತು ತಂಡದವರ ಜಾನಪದ ಸಂಗೀತ, ಚಿತ್ರದುರ್ಗದ ನಿರ್ಮಲ ಮತ್ತು ತಂಡದವರ ಸಮೂಹ ನೃತ್ಯ, ಕೆ.ಗಂಗಾಧರ್ ಮತ್ತು ತಂಡದಿಂದ ವಚನ ಸಂಗೀತ, ಮಲ್ಲೂರಹಳ್ಳಿ ರಾಜಣ್ಣ ಮತ್ತು ತಂಡದಿಂದ ರಂಗಗೀತೆಗಳು, ಓಬೇನಹಳ್ಳಿ ಹಿಮಂತರಾಜ್ ಮತ್ತು ತಂಡದಿಂದ ಸುಗಮ ಸಂಗೀತ ಪ್ರಸ್ತುತಪಡಿಸಲಾಯಿತು.ಜಾನಪದ ಕಲಾ ತಂಡಗಳ ಮೆರವಣಿಗೆ

ಸಿದ್ದಯ್ಯನಕೋಟೆ ಗ್ರಾಮದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಹುಲ್ಲೂರಿನ ಕೃಷ್ಣಪ್ಪ ಮತ್ತು ತಂಡದವರ ತಮಟೆ, ಹುಲ್ಲೇಹಾಳ್ ಡಿ.ನಾಗರಾಜ್ ಮತ್ತು ತಂಡದವರ ಕಹಳೆ, ಧಾರವಾಡದ ಪ್ರಕಾಶ್ ಮಲ್ಲಿಗೆವಾಡ ಮತ್ತು ತಂಡದ ಜಾನಪದ ನೃತ್ಯ, ವೆಂಕಟೇಶ್ ನಾಯ್ಕ್ ಮತ್ತು ತಂಡದ ನಗಾರಿ, ಚೀಳಂಗಿಯ ಶಿವಕುಮಾರ್ ಮತ್ತು ತಂಡದ ತ್ರಾಷ್, ಹುಲ್ಲೂರು ನಿಂಗಪ್ಪ ಮತ್ತು ತಂಡದವರ ಗಾರುಡಿಗೊಂಬೆ, ಚೀರನಹಳ್ಳಿಯ ದಿನೇಶ್ ಅವರ ನಾಸಿಕ್ ಡೋಲು, ಹಿರಿಯೂರು ಗುರುಮೂರ್ತಿಯವರ ಹಗಲುವೇಷ, ಮುತ್ತಿಗಾರಹಳ್ಳಿಯ ಗಂಗಣ್ಣನವರ ತಮಟೆ ವಾದ್ಯ ಚರ್ಮ, ನೆಲ್ಲೆಕಟ್ಟೆ ತಿಪ್ಪೇಸ್ವಾಮಿ ಅವರ ಅರೆವಾದ್ಯ ಜಾನಪದ ಕಲಾತಂಡಗಳ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಿತು.