ಬರ ಪರಿಹಾರ ಇಲ್ಲದೆ ಬರಿಗೈಲಿ ಬಂದ ಶಾ: ಸಿದ್ದರಾಮಯ್ಯ

| Published : Feb 12 2024, 01:31 AM IST / Updated: Feb 12 2024, 12:54 PM IST

Siddaramaiah

ಸಾರಾಂಶ

ಕೇಂದ್ರ ಸರ್ಕಾರದ ಬರ ಪರಿಹಾರ ಸಮಿತಿಯ ಅಧ್ಯಕ್ಷರಾದ  ಅಮಿತ್‌ ಶಾ ಇದುವರೆಗೆ ಈ ಸಂಬಂಧ ಒಂದು ಸಭೆ ನಡೆಸಿಲ್ಲ. ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಲು ಪತ್ರ ಬರೆದರೂ ಪರಿಗಣಿಸಿಲ್ಲ. ಈಗ ಕರ್ನಾಟಕಕ್ಕೆ ಬರುವಾಗಲೂ ಬರ ಪರಿಹಾರ ಘೋಷಿಸದೆ ಬರಿಗೈಲಿ ಬಂದಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರದ ಬರ ಪರಿಹಾರ ಸಮಿತಿಯ ಅಧ್ಯಕ್ಷರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದುವರೆಗೆ ಈ ಸಂಬಂಧ ಒಂದು ಸಭೆ ನಡೆಸಿಲ್ಲ. 

ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಲು ಪತ್ರ ಬರೆದರೂ ಪರಿಗಣಿಸಿಲ್ಲ. ಈಗ ಕರ್ನಾಟಕಕ್ಕೆ ಬರುವಾಗಲೂ ಬರ ಪರಿಹಾರ ಘೋಷಿಸದೆ ಬರಿಗೈಲಿ ಬಂದಿದ್ದಾರೆ. 

ಹಾಗಾಗಿ ಅವರಿಗೆ ಬಡವರು, ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಭಾನುವಾರ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರೊಂದಿಗೆ ಬಜೆಟ್‌ ಪೂರ್ವಭಾವಿ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಮಿತ್ ಶಾ ಅವರು ಐದು ತಿಂಗಳಾದರೂ ಬರಗಾಲದ ಬಗ್ಗೆ ಒಂದು ಸಭೆ ಕರೆದಿಲ್ಲ. ಬರ ಪರಿಹಾರ ಕೊಡಲು ಇರುವ ಸಮಿತಿಗೆ ಅವರೇ ಅಧ್ಯಕ್ಷರು ರೈತರು ಬರಗಾಲದಲ್ಲಿ ಕಷ್ಟಪಡುತ್ತಿದ್ದಾರೆ. 

ಬರಗಾಲ ಬಂದಾಗ ನರೇಗಾ ಯೋಜನೆಯಡಿ 150 ಮಾನವ ದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ ಇಂದಿನವರೆಗೆ ಕೇಂದ್ರ ಸರ್ಕಾರದವರು ಇದಕ್ಕೆ ಅನುಮತಿ ನೀಡಿಲ್ಲ.

 2-3 ಪತ್ರ ಬರೆದಿದ್ದರೂ ಉತ್ತರ ನೀಡಿಲ್ಲ. ದೇಶದ ಬಗ್ಗೆ, ಬಡವರು, ರೈತರ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದರು.

ಅಮಿತ್‌ ಶಾ ಅವರು ನಿಮ್ಮ ತವರು ಜಿಲ್ಲೆ ಮೈಸೂರಿನಿಂದಲೇ ಲೋಕಸಭಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಮಿಸ್ಟರ್‌ ಅಮಿತ್‌ ಶಾ ಏನೇ ಕಹಳೆ ಮೊಳಗಿಸಿದರೂ ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನ್ಯಾಯವನ್ನೆಲ್ಲ ಗೌಡರು ಸರಿ ಎನ್ನಬಾರದು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬಿಜೆಪಿಯವರೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ಅವರು ಮಾಡುವ ಅನ್ಯಾಯಗಳನ್ನೆಲ್ಲಾ ಸರಿ ಎಂದು ಹೇಳಬಾರದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದರು. 

ಕೇಂದ್ರದಿಂದ ಕರ್ನಾಟಕಕ್ಕೆ ಭಾರೀ ಆರ್ಥಿಕ ಅನ್ಯಾಯವಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಉತ್ತರ ನೀಡಿದ್ದಾರೆ ಎಂದು ದೇವೇಗೌಡರು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈಗ ಅವರು (ಜೆಡಿಎಸ್‌) ಅವರ (ಬಿಜೆಪಿ) ಜೊತೆ ಸೇರಿದ್ದಾರೆ. ಅದಕ್ಕೆ ಹಾಗೆ ಹೇಳಿದ್ದಾರೆ. 

ಇದೇ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರಲ್ಲ ಅದರ ಬಗ್ಗೆ ಈಗೇನು ಹೇಳುತ್ತಿದ್ದಾರೆ? ಅವರು ಯಜಮಾನರು, ಮಾಜಿ ಪ್ರಧಾನಿಗಳಾಗಿದ್ದವರು, ಹೀಗೆ ಹೇಳಬಾರದು. 

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ಅವರು ಮಾಡಿದ ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು ಎಂದರು.