ಸಾರಾಂಶ
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ: ಕೇವಲ ಒಂದು ದಶಕದಲ್ಲಿ ನಾಲ್ಕು ಬಾರಿ ತಮ್ಮ ಬದುಕನ್ನೇ ಅತಂತ್ರಗೊಳಿಸಿದ ನೆರೆ ಪರಿಸ್ಥಿತಿ, ಅನುಗಾಲವೂ ಕಾಡುವ ಬರಗಾಲ ಹಾಗೂ ಉದ್ಯೋಗ ಅರಸಿ ಗುಳೇ ಹೋಗುವ ವಲಸೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಯಾವುದೇ ಚಕಾರವೆತ್ತದೇ ಬರೀ ಗ್ಯಾರಂಟಿಗಳನ್ನು ಜಪಿಸಿದ್ದು ನೆರೆ ಸಂತ್ರಸ್ತರಲ್ಲಿ ಭಾರೀ ನಿರಾಸೆ ಹುಟ್ಟಿಸಿದೆ.ಡಾ.ಡಿ.ಎಂ.ನಂಜುಂಡಪ್ಪ ಆಯೋಗದ ಶಿಪಾರಸ್ಸಿನಂತೆ ಕಳೆದ 22 ವರ್ಷಗಳಿಂದ ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮಾನತೆ ನೀಗಿಸುವ ಕೆಲಸಗಳು ತಕ್ಕಮಟ್ಟಿಗೆ ನಡೆಯುತ್ತಿದ್ದರೂ ಕರ್ನಾಟಕದ ಉತ್ತರ ಭಾಗವನ್ನು ನೆರೆ, ಬರ, ಗುಳೆಗಳು ಅತಿಯಾಗಿ ಬಾಧಿಸುತ್ತಲೇ ಇವೆ.
ಹೀಗೆ ನೆರೆ ಉಕ್ಕಿದಾಗ, ಬರಗಾಲ ಆವರಿಸಿದಾಗ ಸರ್ಕಾರಗಳು ಶಾಶ್ವತ ಪರಿಹಾರದ ಮಾತುಗಳನ್ನು ಆಡುತ್ತ ಬಂದಿವೆಯೇ ಹೊರತು, ಆ ದಿಸೆಯಲ್ಲಿ ಯಾವುದೇ ಗಟ್ಟಿ ನಿರ್ಧಾರ ಕೈಕೊಳ್ಳುವುದಿಲ್ಲ ಎನ್ನುವುದನ್ನು ಪ್ರಸಕ್ತ ಬಜೆಟ್ ಮತ್ತೊಮ್ಮೆ ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರು ಈ ಯಾವುದೇ ಸಮಸ್ಯೆಗಳು ನೆನಪೇ ಇಲ್ಲದವರಂತೆ ಬಜೆಟ್ ಮಂಡಿಸಿದರು. ಸಂತ್ರಸ್ತರು, ಸಂಕಟಪಡುವವರ ಸಮಾಧಾನಕ್ಕಾದರೂ ಈ ವಿಷಯ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ.ನದಿಗಳ ಅತಿಕ್ರಮಣ ತೆರವು
ತುಂಗಭದ್ರಾ, ವರದಾ, ಮಲಪ್ರಭೆ, ಘಟಪ್ರಭ, ಕೃಷ್ಣಾ, ದೋಣಿ, ಭೀಮಾ ಉತ್ತರದ ಜೀವನದಿಗಳು ಹೇಗೋ ಹಾಗೆಯೇ ಪ್ರಾಣ ಕಂಟಕವೂ ಹೌದು! ಅತಿಯಾದ ಒತ್ತುವರಿಯಿಂದ ಮಳೆಗಾಲದಲ್ಲಿ ಪ್ರವಾಹ ಸೃಷ್ಟಿಸಿ ಅಲ್ಲೋಲ ಕಲ್ಲೋಲ ಮಾಡುತ್ತವೆ. ಅದೇ ಚಳಿಗಾಲ, ಬೇಸಿಗೆಯಲ್ಲಿ ಒಡಲು ಬರಿದು ಮಾಡಿಕೊಂಡು ಬರಗಾಲದ ನಿಶಾನೆಯಾಗುತ್ತವೆ.ಇದೇ ಕಾರಣಕ್ಕೆ ಈ ಎಲ್ಲ ನದಿಗಳ ಸರ್ವೇ ಮಾಡಿ, ಮುಲಾಜಿಲ್ಲದೇ ಅತಿಕ್ರಮಣ ತೆರವುಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ಮತ್ತು ಹೆಚ್ಚು ಅವಧಿ ನಿರಂತರವಾಗಿ ಹರಿಯುವಂತೆ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆ.
ಹಿಂದಿನ ಬಿಜೆಪಿ ಸರ್ಕಾರ ಮಲಪ್ರಭಾ, ಘಟಪ್ರಭಾ ನದಿಗಳ ಸರ್ವೇ ಕಾರ್ಯಕ್ಕೆ ಚಾಲನೆ ನೀಡಿತ್ತು. ಈ ಸರ್ವೇ ವರದಿ ಈಗಿನ ಕಾಂಗ್ರೆಸ್ ಸರ್ಕಾರದ ಕೈಸೇರಿತ್ತು. ಹಾಗಾಗಿ ಈ ಎರಡೂ ನದಿಗಳಿಂದ ಮೇಲಿಂದ ಮೆಲೆ ನೆರೆ ಸಂತ್ರಸ್ತರಾಗುತ್ತ ಬಂದ ಲಕ್ಷೋಪ ಲಕ್ಷ ಜನರು ಪ್ರಸಕ್ತ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ನದಿಗಳ ಅತಿಕ್ರಮಣ ತೆರವಿಗೆ ಪ್ಯಾಕೇಜ್ ಘೋಷಿಸುತ್ತಾರೆ ಎನ್ನುವ ದೊಡ್ಡ ನಿರೀಕ್ಷೆ ಹೊಂದಿದ್ದರು. ಆದರೆ ಅದೀಗ ಹುಸಿಯಾಗಿದೆ.ಬರ, ಗುಳೆಗೆ ಔಷಧಿ
ಮಳೆಗಾಲದಲ್ಲಿ ತುಂಬಿ ಹರಿದು ನೆರೆ ಸಮಸ್ಯೆ ಸೃಷ್ಟಿಸುವ ಹೊಳೆ, ಹಳ್ಳಗಳ ನೀರನ್ನು ಹಿಡಿದಿಟ್ಟುಕೊಂಡು ನೀರಾವರಿ ಮತ್ತು ಕುಡಿಯುವ ನೀರಿಗೆ ಬಳಕೆ ಮಾಡಿಕೊಂಡರೆ ಉತ್ತರ ಕರ್ನಾಟಕವನ್ನು ಶಾಪವಾಗಿ ಕಾಡುತ್ತ ಬಂದಿರುವ ಭೀಕರ ಬರಗಾಲ ಪರಿಸ್ಥಿತಿ ಮತ್ತು ಗುಳೇ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರ ಆಗುತ್ತವೆ ಎಂದು ಜಲತಜ್ಞ ಎಂ.ಪರಮಶಿವಯ್ಯ ಅವರು "ಬೆಣ್ಣಿಹಳ್ಳ ಪರಿಹಾರ ವರದಿ " ಸಲ್ಲಿಸುವ ವೇಳೆ ಒತ್ತಿ ಹೇಳಿದ್ದರು.ಪ್ರಸಕ್ತ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಮೆಳ್ಳಿಗೇರಿ- ಹಲಗಲಿ, ಸಸಾಲಟ್ಟಿ-ಶಿವಲಿಂಗೇಶ್ವರ, ಸತ್ತಿಗೇರಿ, ಮಾರ್ಕಂಡೇಯ, ಸಂತಿ ಬಸ್ತವಾಡ, ಯಲ್ಲಾಪುರ, ಕಿರವತ್ತಿ, ಕೆರೂರು, ಹೊರ್ತಿ, ಚಿಮ್ಮಲಗಿ, ಮುಳವಾಡ ಸೇರಿದಂತೆ ಪ್ರಮುಖ ಏತನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಮತ್ತು ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 38 ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೇಳಿರುವುದು ಆಶಾದಾಯಕ ಎನಿಸಿದ್ದರೂ ಪ್ರಮುಖ ನೀರಾವರೀ ಯೋಜನೆಗಳಾದ ತುಂಗಾ ಮೇಲ್ದಂಡೆ, ಮಹದಾಯಿ ವಿಷಯವಾಗಿ ಕೇಂದ್ರದೆಡೆ ಹಾಗೂ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ತೆಲಂಗಾಣ, ಆಂದ್ರಪ್ರದೇಶದೆಡೆ ಬೊಟ್ಟು ಮಾಡಿರುವುದು ಜನತೆಯಲ್ಲಿ ನಿರಾಸೆ ಹುಟ್ಟಿಸಿದೆ.
ರಾಯರಡ್ಡಿ ಸಲಹೆ ನೀಡಲಿಲ್ಲವೇ?ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರಡ್ಡಿ ಅವರಿಗೆ ನೀರು ಬಳಕೆಯ ಸರಿಯಾದ ಯೋಜನೆಗಳಿಲ್ಲದೇ ಬರಗಾಲ ಹಾಗೂ ಭೂಮಿ, ನೀರು ಇದ್ದಾಗ್ಯೂ ಉತ್ತರದ ಗುಳೇ ಪಿಡುಗು ತಪ್ಪಿತ್ತಿಲ್ಲ ಎನ್ನುವ ವಾಸ್ತವ ಈ ಬಾಗದ ಜನಪರ ಕಳಕಳಿಯ ನಾಯಕ ಬಸವರಾಜ ರಾಯರಡ್ಡಿ ಅವರಿಗೆ ಗೊತ್ತು. ಅವರೇ ಈಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು. ಮೇಲಾಗಿ ಈ ಬಜೆಟ್ ರೂಪಿಸುವಲ್ಲಿ ಹಗಲಿರುಳು ಶ್ರಮಿಸಿದವರು. ಹೀಗಿರುವಾಗ ಉತ್ತರದ ನೆರೆ, ಬರ, ಗುಳೆ ಮರೆತು ಮುಖ್ಯಮಂತ್ರಿಗಳು ಬರೀ ಗ್ಯಾರಂಟಿ ಜಪಿಸಿದ್ದು ಏಕೆ? ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಮುಂಬೈ- ಬೆಂಗಳೂರು ಎಕನಾಮಿಕ್ ಕಾರಿಡಾರ್ ವ್ಯಾಪ್ತಿಗೆ ಬರುವ ಧಾರವಾಡ ಜಿಲ್ಲೆಯಲ್ಲಿ 6 ಸಾವಿರ ಎಕರೆ ಪ್ರದೇಶದ ಕೈಗಾರಿಕಾ ನೋಡ್ ಮಾಡುವ ಚಿಂತನೆ ಒಂದಷ್ಟು ಉದ್ಯೋಗ ಸೃಷ್ಟಿಯ ಭರವಸೆ ಹುಟ್ಟಿಸಿದೆ.