ಜನರ ಜೀವಕ್ಕೆ ಗ್ಯಾರಂಟಿ ಇಲ್ಲದ ಸಿದ್ದು ಸರ್ಕಾರ: ಪ್ರಹ್ಲಾದ ಜೋಶಿ

| Published : May 20 2024, 01:36 AM IST / Updated: May 20 2024, 10:11 AM IST

ಜನರ ಜೀವಕ್ಕೆ ಗ್ಯಾರಂಟಿ ಇಲ್ಲದ ಸಿದ್ದು ಸರ್ಕಾರ: ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ, 692 ರೈತರ ಆತ್ಮಹತ್ಯೆ ನಡೆದಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ ಎಂದು ಜೋಶಿ ಹೇಳಿದರು.

 ಹುಬ್ಬಳ್ಳಿ :  ಸಿದ್ದರಾಮಯ್ಯ ನೇತೃತ್ವದ ಸರ್ಕಾರದ್ದು ಅಭಿವೃದ್ಧಿಯ ಸಮಾಧಿ, ಹತ್ಯೆ ಹಾಗೂ ಆತ್ಮಹತ್ಯೆ ಟ್ರೇಡ್ ಮಾರ್ಕ್ ಆಗಿದೆ. ಇದೊಂದು ಜನರ ಜೀವಕ್ಕೆ ಗ್ಯಾರಂಟಿಯಿಲ್ಲದ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ನಗರದ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ, 692 ರೈತರ ಆತ್ಮಹತ್ಯೆ ನಡೆದಿವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ನೇಹಾ ಹತ್ಯೆ ಪ್ರಕರಣದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೀಳುಮಟ್ಟದ ಹೇಳಿಕೆ ನೀಡಿದ್ದರು. 

ಇದರಿಂದಾಗಿ ಕೊಲೆಗಡುಕರಿಗೆ ಹೆದರಿಕೆ ಇಲ್ಲದಂತಾಗಿ, ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆಯಾಗಿದೆ. ನೇಹಾ ಪ್ರಕರಣದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ವರ್ತಿಸಬೇಕಿತ್ತು. ಜನಾಂದೋಲನದ ಮೂಲಕ ಹೋರಾಟ ನಡೆದ ಮೇಲೆ ಸಿದ್ದರಾಮಯ್ಯ ಎಚ್ಚರಗೊಂಡು ಪ್ರಕರಣದ ಗಂಭೀರತೆ ಅರಿತು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಮೊದಲೇ ಅಂಜಲಿ ಕುಟುಂಬಸ್ಥರು ಜೀವ ಬೆದರಿಕೆ ಇದೆ ಎಂದು ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ರಾಜಿ ಸಂಧಾನ ಏಕೆ ಮಾಡಬೇಕಿತ್ತು? ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ತಗೆದುಕೊಂಡ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ದೂರಿದರು.

ಏಕಕಾಲಕ್ಕೆ ಶಿಕ್ಷೆ ವಿಧಿಸಿ:

ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣವನ್ನು ತ್ವರಿತ ನ್ಯಾಯಾಲಯ ಮೂಲಕ ವಿಚಾರಣೆ ಮಾಡಿ ಆರೋಪಿಗಳಿಗೆ ಏಕಕಾಲಕ್ಕೆ ಉಗ್ರವಾದ ಶಿಕ್ಷೆ ನೀಡಬೇಕು. ಹು-ಧಾ ಮಹಾನಗರದಲ್ಲಿ ಗಾಂಜಾ, ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದ್ದು, ಇಂತಹ ಪ್ರಕರಣಗಳು ಹೆಚ್ಚಾಗಿರುವಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಬೇಕು. ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ತಿಳಿಸಿದವರ ಹೆಸರನ್ನು ಗೌಪ್ಯವಾಗಿ ಇಡಬೇಕು. ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು. ಈ ಎರಡು ಘಟನೆಗಳು ಸರ್ಕಾರದ ವೈಫಲ್ಯದಿಂದಲೇ ಆಗಿದೆ ಎಂಬುದನ್ನು ಗೃಹ ಸಚಿವರು ಈಗಲಾದರೂ ಒಪ್ಪಿಕೊಳ್ಳಬೇಕು ಎಂದರು.

ಕಣ್ಣೊರೆಸುವ ತಂತ್ರ ಬಿಡಿ:

ಈ ಹಿಂದೆ ದೂರು ಕೊಡಲು ಹೋದಾಗ ಕ್ರಮ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಹೊಸ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಕೆಲ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಕಣ್ಣು ಒರೆಸುವ ತಂತ್ರವನ್ನು ರಾಜ್ಯ ಸರ್ಕಾರ ಮಾಡಬಾರದು. ಕಮೀಷನರೇಟ್ ಅನ್ನು ಎಸ್‌ಪಿ ಮಟ್ಟಕ್ಕೆ ಇಳಿಸಿರುವ ಉದ್ದೇಶವೇನು? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಜೋಶಿ ಒತ್ತಾಯಿಸಿದರು.

ಸಿಬಿಐಗೆ ವಹಿಸಲಿ:

ಸ್ಥಳೀಯ ಶಾಸಕರ ಫೋಟೋ ಫೋಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವಾಗಲಿ, ಅವರಾಗಲಿ ಇಂತಹ ಘಟನೆಗಳು ನಡೆದಾಗ ಸಂವೇದನಾಶೀಲರಾಗಿ ವರ್ತಿಸಬೇಕು. ಈ ಹಿಂದೆ ನಡೆದ ನೇಹಾ ಹತ್ಯೆ ಪ್ರಕರಣವನ್ನು ಸರ್ಕಾರ ತುಷ್ಟೀಕರಣಕ್ಕಾಗಿ ಬಳಕೆ ಮಾಡಿಕೊಂಡಿತ್ತು. ಈ ಎರಡು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಗೃಹ ಸಚಿವರಿಗೆ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ಸರ್ಕಾರ ಕೂಡಲೇ ಅಂಜಲಿ ಕುಟುಂಬಕ್ಕೆ ಕನಿಷ್ಠ ₹25 ಲಕ್ಷ ಪರಿಹಾರವನ್ನು ಘೋಷಣೆ ಮಾಡಬೇಕು. ಮನೆ ನೀಡಬೇಕು. ಒಂದು ವೇಳೆ ₹25 ಲಕ್ಷಗಿಂತ ಕಡಿಮೆ ಪರಿಹಾರ ನೀಡಿದರೆ ಅವರ ಕುಟುಂಬಕ್ಕೆ ಅನ್ಯಾಯ ಮಾಡಿದಂತೆ ಎಂಬುದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಲಿ ಎಂದರು.