ಸಾರಾಂಶ
ಕನ್ನಡಪ್ರಭ ವಾರ್ತೆ ನವದೆಹಲಿ
ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಸಿದ್ದರಾಮಯ್ಯನವರ ಆಡಳಿತದ ಕ್ಷಣಗಣನೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.ದೆಹಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇವತ್ತಲ್ಲ ನಾಳೆ ಸಿಎಂ ಅವರು ರಾಜೀನಾಮೆ ಕೊಡಲೇಬೇಕು. ಹೈಕೋರ್ಟ್ ತೀರ್ಪು ಬಂದ ಬಳಿಕವಾದರೂ ಅವರು ರಾಜೀನಾಮೆ ನೀಡಲೇ ಬೇಕು. ಹೀಗಾಗಿ, ಹೈಕೋರ್ಟ್ ಆದೇಶಕ್ಕೆ ಕಾಯದೆ, ವಾಲ್ಮೀಕಿ, ಮುಡಾ ಪ್ರಕರಣಗಳಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಈಗಲೇ ರಾಜೀನಾಮೆ ಕೊಟ್ಟರೆ ಒಳ್ಳೆಯದು ಎಂದರು.ಸರ್ಕಾರದ ಬಗ್ಗೆ ಸಚಿವರಿಗೆ ಈಗ ವಿಶ್ವಾಸವೇ ಉಳಿದಿಲ್ಲ. ವಿಧಾನಸೌಧಕ್ಕೂ ಸಚಿವರು ಹೋಗುತ್ತಿಲ್ಲ. ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ವಿಶ್ಲೇಷಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೈಷ್ಣೋದೇವಿಗೆ ಹೋಗಿ ಬಂದಿದ್ದಾರೆ. ತಾಯಿಯಲ್ಲಿ ಆಶೀರ್ವಾದ ಬೇಡಿಕೊಂಡು ಬಂದಂತಿದೆ. ಅದು ಬೇರೆ ವಿಚಾರ ಎಂದು ನಕ್ಕರು.ಕಳೆದ ಎರಡು ಮೂರು ತಿಂಗಳಿಂದ ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ವಾಲ್ಮೀಕಿ ಹಗರಣದಲ್ಲಿ ಎಸ್ ಐಟಿಯವರು ನಾಗೇಂದ್ರ ಹಾಗೂ ದದ್ದಲ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಒಂದು ವೇಳೆ, ಎಸ್ ಐಟಿಯವರು ಇವರಿಬ್ಬರ ವಿರುದ್ದ ವರದಿ ಕೊಟ್ಟಿದ್ದರೆ ಅದು ಸಿಎಂ ಬುಡಕ್ಕೇ ಬರುತ್ತಾ ಇತ್ತು ಎಂದರು.
ಸದನದಲ್ಲಿ ಮುಡಾ ಹಗರಣ ಸಂಬಂಧ ಚರ್ಚಿಸಲು ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ, ಪಾದಯಾತ್ರೆ ಮಾಡಿದ್ದೇವೆ. ಪಾದಯಾತ್ರೆ ಯಶಸ್ಸಿನ ಕುರಿತು ನಡ್ಡಾ ಜೊತೆ ಮಾಹಿತಿ ಹಂಚಿಕೊಂಡಿದ್ದೇನೆ. ನಡ್ಡಾ ಅವರು ಕೂಡ ಸಂತೋಷಪಟ್ಟಿದ್ದಾರೆ. ಹಿಂದೆ ಇದೇ ಸಿದ್ದರಾಮಯ್ಯನವರು ಎಸಿಬಿ ಮೂಲಕ ಕ್ಲೀನ್ ಚಿಟ್ ಪಡೆದುಕೊಂಡ ಇತಿಹಾಸ ಇದೆ. ಹೀಗಾಗಿ, ಮುಡಾ ವಿಚಾರವಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವ ಕುರಿತು ರಾಜ್ಯದ ನಾಯಕರು ಸಲಹೆ ನೀಡಿದ್ದಾರೆ. ಅದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ. ಇವತ್ತಲ್ಲ, ನಾಳೆ ಸಿದ್ದರಾಮಯ್ಯನವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ತಮ್ಮ ಪತ್ನಿಗೆ ಅಕ್ರಮವಾಗಿ 14 ನಿವೇಶನಗಳು ಬಂದಿವೆ ಎಂದು ಅವರೇ ಹೇಳುತ್ತಾರೆ. ಆ ಕಾಲ ಬಂದೇ ಬರುತ್ತೆ ಎಂದು ಹೇಳಿದರು.ಇದೇ ವೇಳೆ, ಯತ್ನಾಳ್ ಬಗ್ಗೆ ಮಾತನಾಡಿ, ಯತ್ನಾಳ್ ಅಥವಾ ಇನ್ಯಾರದೋ ವಿರುದ್ಧ ದೆಹಲಿಯಲ್ಲಿ ದೂರು ಕೊಡಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ. ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅವರ ಕುರಿತು ಇಲ್ಲಿ ನಾನು ಪ್ರಸ್ತಾಪಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ.ಪಕ್ಷದ ಬೆಳವಣಿಗೆಗೆ ಪೂರಕವಿದ್ದರೆ, ರಾಷ್ಟ್ರೀಯ ನಾಯಕರ ಒಪ್ಪಿಗೆ ಇದ್ದರೆ ಇನ್ನೊಂದು ಪಾದಯಾತ್ರೆ ಮಾಡಬಹುದು. ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಬಲ ತುಂಬಲಿದ್ದೇನೆ ಎಂದು ಅವರು ತಿಳಿಸಿದರು.
ಚನ್ನಪಟ್ಟಣ ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ನಡ್ಡಾ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿ, ಈ ಬಗ್ಗೆ ತೀರ್ಮಾನ ಮಾಡೋಣ ಎಂದಿದ್ದಾರೆ ಎಂದರು.