ಸಾರಾಂಶ
ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಊಟ ಸೇವಿಸಿ ಗುಣಮಟ್ಟ ಪರಿಶೀಲಿಸಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಶಾಸಕರು ಆಲಿಸಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಪಟ್ಟಣದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ತಾವೇ ಹಾಸ್ಟೆಲ್ ಊಟ ಸೇವಿಸಿ, ಆಹಾರದ ಗುಣಮಟ್ಟ ಪರಿಶೀಲನೆ, ಊಟದ ರುಚಿ ಪರಿಶೀಲನೆ ಮಾಡಿದರು.ಮೆಟ್ರಿಕ್ ನಂತರದ ಬಾಲಕರ ಪರಿಶಿಷ್ಟ ಜಾತಿ ವಸತಿ ನಿಲಯಕ್ಕೆ ಇತ್ತೀಚೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಪರಿಶಿಷ್ಟ ವಸತಿ ನಿಲಯಗಳಿಗೆ ದೊರೆಯಬೇಕಾದ ನಿಯಮನುಸಾರ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ನಿಂಗರಾಜ ಅವರಿಗೆ ಆದೇಶಿಸಿದರು.
ವಸತಿ ನಿಲಯದಲ್ಲಿ ಅಡುಗೆ ಮಾಡುವ ಸಿಬ್ಬಂದಿಗೆ ಮತ್ತು ಕಾವಲುಗಾರರಿಗೆ ಸರಿಯಾಗಿ ಕಾರ್ಯನಿರ್ವಹಿಸುವ ಹಾಗೂ ವಸತಿ ನಿಲಯದ ವ್ಯವಸ್ಥೆಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. ವಸತಿ ನಿಲಯಕ್ಕೆ ಸರಬರಾಜಾಗುತ್ತಿರುವ ಆಹಾರ ಧಾನ್ಯ, ಕೋಣೆಗಳ ಸ್ವಚ್ಚತೆ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಪರಿಶೀಲಿಸಿದರು.ಸೂಕ್ತ ಬೆಳಕಿನ ವ್ಯವಸ್ಥೆ, ಮಕ್ಕಳಿಗೆ ಕಲಿಕಾ ವಾತಾವರಣ ನಿರ್ಮಾಣ, ಓದಲು ಪುಸ್ತಕ, ದಿನಪತ್ರಿಕೆಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ವಸತಿ ನಿಲಯ ಮೇಲ್ವಿಚಾರಕ ಗುಂಡಪ್ಪಾ ಅವರಿಗೆ ಹಾಸ್ಟೆಲ್ ಸ್ವಚ್ಛವಾಗಿ ಇಡುವಂತೆ ಹಾಗೂ ಸಮಯಕ್ಕೆ ಊಟ, ಉಪಹಾರ ನೀಡುವ ಮೂಲಕ ಮಕ್ಕಳ ಆರೋಗ್ಯದ ಕಡೆಗೂ ಗಮನಹರಿಸುವಂತೆ ಸೂಚನೆ ನೀಡಿದರು.