ಸಿದ್ದು ರಾಜೀನಾಮೆ ನೀಡಿ, ನೈತಿಕತೆ ಇರುವ ನಾಯಕನನ್ನು ಸಿಎಂ ಮಾಡಲಿ: ಎಸ್ ಆರ್ ಹಿರೇಮಠ

| Published : Oct 01 2024, 01:37 AM IST

ಸಿದ್ದು ರಾಜೀನಾಮೆ ನೀಡಿ, ನೈತಿಕತೆ ಇರುವ ನಾಯಕನನ್ನು ಸಿಎಂ ಮಾಡಲಿ: ಎಸ್ ಆರ್ ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ತಮ್ಮ ನಂತರ ರಾಜ್ಯವನ್ನು ಸರಿಯಾದ ದಿಸೆಯಲ್ಲಿ ಕೊಂಡಯ್ಯುವ ನೈತಿಕತೆ, ಜವಾಬ್ದಾರಿಯುಳ್ಳ ಉತ್ತಮ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಪ್ರಮುಖ ಪಾತ್ರವಹಿಸಬೇಕು ಎಂದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.

ಹುಬ್ಬಳ್ಳಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅವರ ನೇತೃತ್ವದಲ್ಲಿಯೇ ನೈತಿಕತೆ, ಜವಾಬ್ದಾರಿಯುಳ್ಳ ಮತ್ತೋರ್ವ ನಾಯಕನನ್ನು ಗುರುತಿಸಿ ಮುಖ್ಯಮಂತ್ರಿಯನ್ನಾಗಿಸಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಎಕರೆ ಜಮೀನಿಗೆ ₹56 ಕೋಟಿ ಮೌಲ್ಯದ 14 ಬದಲಿ ಸೈಟ್‌ ಕೊಟ್ಟಿರುವುದಕ್ಕೆ ಅರ್ಥವಿದೆಯೇ? ರಾಜ್ಯದಲ್ಲಿ ಭೂಮಿ ಕಳೆದುಕೊಂಡವರಿಗೆ ಇಷ್ಟೊಂದು ಪ್ರಮಾಣದಲ್ಲಿ ಪರಿಹಾರ ಕೊಟ್ಟ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ತಮ್ಮ ನಂತರ ರಾಜ್ಯವನ್ನು ಸರಿಯಾದ ದಿಸೆಯಲ್ಲಿ ಕೊಂಡಯ್ಯುವ ನೈತಿಕತೆ, ಜವಾಬ್ದಾರಿಯುಳ್ಳ ಉತ್ತಮ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಪ್ರಮುಖ ಪಾತ್ರವಹಿಸಬೇಕು. ಸದ್ಯ ಉಪಮುಖ್ಯಮಂತ್ರಿ ಯಾರಿದ್ದಾರೆ, ಅವರು ಈ ಹಿಂದೆ ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅಂತಹವರು ಸಾರ್ವಜನಿಕ ಜೀವನದಲ್ಲಿ ಇರಬಾರದು, ಜೈಲಿನಲ್ಲಿ ಇರಬೇಕು. ಅಂತಹವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರೆ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೂಕ್ತ ತನಿಖೆಯಾಗಲಿ

ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ನೈತಿಕತೆ ಅತ್ಯವಶ್ಯಕ. ಮತ್ತೊಬ್ಬರ ರಾಜೀನಾಮೆ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗೂ ಇಲ್ಲ. ದೇಶದಲ್ಲಿ ಚುನಾವಣೆ ಬಾಂಡ್ ಅಸಂವಿಧಾನಿಕವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಹಗರಣದಲ್ಲಿ ಎಲ್ಲ ಪಕ್ಷಗಳಿಗೂ ಹಣ ಹೋಗಿದ್ದು, ಅದರಲ್ಲಿ ಸಿಂಹಪಾಲು ಹಣ ಬಿಜೆಪಿಗೆ ಹೋಗಿದೆ. ಈ ಹಗರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಸೂಕ್ತ ತನಿಖೆಯಾಗಲಿ ಎಂದರು.

ಜನಪ್ರತಿನಿಧಿಯಾಗಲು ಯೋಗ್ಯರಲ್ಲ:

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಂತಹ ಪಾಳೇಗಾರ ಸಂಸ್ಕೃತಿಯ ಮಂತ್ರಿಯನ್ನು ರಾಜ್ಯದ ಜನತೆ ನೋಡಿಲ್ಲ. ಸಾಕಷ್ಟು ಎಕರೆ ಗೋಮಾಳ ಭೂಮಿ ಮತ್ತು ಬಡವರ ಜಮೀನನ್ನು ಕೊಳ್ಳೆ ಹೊಡೆದಿದ್ದಾರೆ. ಇಂತಹವರು ಜನಪ್ರತಿನಿಧಿಯಾಗಲು ಯೋಗ್ಯರಲ್ಲ ಎಂದು ಟೀಕಿಸಿದರು.

ಪಶ್ಚಿಮಘಟ್ಟಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಲಿ

ಹುಬ್ಬಳ್ಳಿ: ಇಂದು ಪಶ್ಚಿಮ ಘಟ್ಟಗಳ ಮೇಲೆ ನಿರಂತರ ಆಕ್ರಮಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೀವಸಂಕುಲಕ್ಕೆ ಆಪತ್ತು ಬಂದಿದೆ. ಪ್ರಜ್ಞಾವಂತರು, ಪರಿಸರ ಕಾಳಜಿಯುಳ್ಳ ಪ್ರತಿಯೊಬ್ಬರೂ ಪಶ್ಚಿಮ ಘಟ್ಟಗಳ ಮಹತ್ವ, ರಕ್ಷಣೆಯ ಕುರಿತು ನಾಡಿನ ಜನತೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಮುಖ್ಯಸ್ಥ ಎಸ್‌.ಆರ್. ಹಿರೇಮಠ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ದಟ್ಟಾರಣ್ಯಗಳಲ್ಲಿ ಅತಿ ಅಪರೂಪದ ಮತ್ತು ಜಗತ್ತಿನ ಬೇರೆಲ್ಲೂ ಕಾಣಸಿಗದ ಅಮೂಲ್ಯ ಜೀವವೈವಿಧ್ಯದ ಭಂಡಾರವಿದೆ. ಪಶ್ಚಿಮ ಘಟ್ಟಗಳ ವಿಶಿಷ್ಟ ಭೌಗೋಳಿಕ ಮತ್ತು ಹವಾಮಾನ ವೈಶಿಷ್ಟ್ಯಗಳಿಂದ ವೈವಿಧ್ಯಮಯ ಮತ್ತು ವ್ಯಾಪಕ ಶ್ರೇಣಿಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ವಿಕಸನ ಹೊಂದಿವೆ. ಆದರೆ, ಅಭಿವೃದ್ಧಿ ಹೆಸರಲ್ಲಿ ಪಶ್ಚಿಮ ಘಟ್ಟವನ್ನು ಕ್ರಮೇಣ ಹಾಳು ಮಾಡಲಾಗುತ್ತಿದೆ, ಇದು ನಿಲ್ಲಬೇಕು. ಗಣಿಗಾರಿಕೆ ಸಂಪೂರ್ಣ ಬಂದ್ ಆಗಬೇಕು. ಗಿಡಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಹೊಸದಾಗಿ ಕಾರ್ಖಾನೆ, ಕೈಗಾರಿಕೆ, ರೆಸಾರ್ಟ್, ಉದ್ಯಮ ಆರಂಭಿಸಲು ಅವಕಾಶ ನೀಡಬಾರದು ಎಂದರು.ವಿರೋಧ:

ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಕುರಿತು ಹೊರಡಿಸಿರುವ 6ನೇ ಅಧಿಸೂಚನೆಯ ಕರಡನ್ನು ಎಲ್ಲ ಸಂಸದರು ಹಾಗೂ ಶಾಸಕರು ವಿರೋಧಿಸಿದ್ದಾರೆ. ಈ ಅಧಿಸೂಚನೆ ಅವೈಜ್ಞಾನಿಕ ಎಂದು ಟೀಕಿಸಿದ್ದಾರೆ. 6ನೇ ಅಧಿಸೂಚನೆ ಕುರಿತು ಚರ್ಚಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈಚೆಗೆ ಪಶ್ಚಿಮ ಘಟ್ಟ ಪ್ರದೇಶದ ಸಂಸದರ ಹಾಗೂ ಶಾಸಕರನ್ನು ಮಾತ್ರ ಆಹ್ವಾನಿಸಿದ್ದರು. ಆದರೆ, ಪಶ್ಚಿಮ ಘಟ್ಟದ ಬಗ್ಗೆ ವಿಸ್ತೃತ ಜ್ಞಾನ ಹಾಗೂ ಕಾಳಜಿ ಇರುವ ವ್ಯಕ್ತಿಗಳನ್ನು ಸಭೆಗೆ ಆಹ್ವಾನಿಸಬೇಕು. ಅವರೊಂದಿಗೆ 2 ದಿನ ಸಮಾಲೋಚನಾ ಸಭೆ ನಡೆಸಬೇಕು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರಸ್ತುತ ಸ್ಥಿತಿಗತಿ, ಸ್ಥಳೀಯರ ಜೀವನೋಪಾಯದ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕಿದೆ ಎಂದರು.ಪಶ್ಚಿಮ ಘಟ್ಟ ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿದೆ. ಈ ಎಲ್ಲ ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ನಡೆಸಿ ಪಶ್ಚಿಮಘಟ್ಟ ಉಳಿವಿಗೆ ಕ್ರಮ ಕೈಗೊಳ್ಳಬೇಕಿದೆ. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ರಾಷ್ಟ್ರೀಯ ಸಮಿತಿ, ಇತರ ಸಹಮನಸ್ಕರ ಹಾಗೂ ಸಂಘ- ಸಂಸ್ಥೆಗಳು ಪಶ್ಚಿಮ ಘಟ್ಟ ಉಳಿಸಲು ಸಲ್ಲಿಸಿರುವ ಅರ್ಜಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಈ ವೇಳೆ ಎಂ.ಸಿ. ಹಾವೇರಿ, ಲಕ್ಷ್ಮಣ ಬಕ್ಕಾಯಿ, ರಾಘವೇಂದ್ರ ಕುಷ್ಟಗಿ ಸೇರಿದಂತೆ ಹಲವರಿದ್ದರು.