ಪಾದಚಾರಿ ಮಾರ್ಗ ಅತಿಕ್ರಮಣ, ಕಾನೂನು ಬಾಹಿರ ಜಾಹೀರಾತು ತೆರವುಗೊಳಿಸಿ

| Published : Feb 04 2025, 12:33 AM IST

ಪಾದಚಾರಿ ಮಾರ್ಗ ಅತಿಕ್ರಮಣ, ಕಾನೂನು ಬಾಹಿರ ಜಾಹೀರಾತು ತೆರವುಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪುಟ್‌ಪಾತ್ ಮೇಲೆ ಬೈಕ್ ಮತ್ತು ಕಾರು ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ವಾಹನ ನಿಲ್ಲಿಸದಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ವಾಹನ ನಿಲ್ಲಿಸಿದರೆ ದಂಡ ವಿಧಿಸಬೇಕು.

ಹುಬ್ಬಳ್ಳಿ:

ಹು-ಧಾ ಅವಳಿ ನಗರಗಳಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಮತ್ತು ಕಾನೂನು ಬಾಹಿರ ಜಾಹೀರಾತು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಸುಭಾಷ್ ಅಡಿ ಸೂಚಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ವಿಭಾಗ, ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತ ಹಮ್ಮಿಕೊಳ್ಳಳಾಗಿದ್ದ ಸಭೆಯಲ್ಲಿ ಮಾತನಾಡಿದರು.

ಪುಟ್‌ಪಾತ್ ಮೇಲೆ ಬೈಕ್ ಮತ್ತು ಕಾರು ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ವಾಹನ ನಿಲ್ಲಿಸದಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ವಾಹನ ನಿಲ್ಲಿಸಿದರೆ ದಂಡ ವಿಧಿಸಬೇಕು. ಡಿಜಿಟಲ್ ಜಾಹೀರಾತು ಫಲಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅನಧಿಕೃತವಾಗಿ ಜಾಹೀರಾತು ಬಿತ್ತರಿಸುವವರ ವಿರುದ್ಧ ಸೂಕ್ತ ರೀತಿಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಹಾನಗರಗಳಲ್ಲಿ ಒಳಂಚರಂಡಿಯ ಒಟ್ಟಾರೆ ಉದ್ದ, ಪೂರ್ಣಗೊಂಡ ಒಳಚರಂಡಿ ಕಾಮಗಾರಿ ಮತ್ತು ಉಳಿದ ಕಾಮಗಾರಿಯ ಮಾಹಿತಿ, ತಪ್ಪಿ ಹೋಗಿರುವ ಒಳಚರಂಡಿ ಸಂಪರ್ಕ, ಮನೆ-ಮನೆಯಿಂದ ಸಂಗ್ರಹವಾಗುವ ತ್ಯಾಜ್ಯ, ಘನ ತ್ಯಾಜ್ಯ, ಕೊಳಚೆ ನೀರಿನ ಸಂಸ್ಕರಣ ಘಟಕದ ಕಾರ್ಯ ಸೇರಿದಂತೆ ಇತರ ಮಾಹಿತಿಗಳನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಆ ಮೂಲಕ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿವೆ ಎಂದರು.

ಮೂಲದಲ್ಲಿಯೇ ತ್ಯಾಜ್ಯ ವಸ್ತುಗಳನ್ನು ಹಸಿ ಕಸ, ಒಣ ಕಸ ಮತ್ತು ಗೃಹ ಬಳಕೆಯ ಹಾನಿಕಾರಕ ತ್ಯಾಜ್ಯ ಎಂದು ವಿಂಗಡಿಸಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ಈ ಕುರಿತು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದು ಹೇಳಿದರು.

ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆ:

ಪ್ರತಿ ವಲಯದಲ್ಲಿ ಏಷ್ಟು ಆಸ್ಪತ್ರೆಗಳಿವೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎನ್ನುವುದರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಆಸ್ಪತ್ರೆಗಳ ಅಧಿಕಾರಿಗಳು, ವೈದ್ಯರ ಸಭೆ ನಡೆಸಬೇಕು ಎಂದರು.

ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಒಳ ಚರಂಡಿ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹ. ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು, ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಯಂತ್ರಣಕ್ಕೆ ತರುವುದಾಗಿ ತಿಳಿಸಿದರು.

ಸಭೆಯಲ್ಲಿ ಪರಿಸರ ಅಧಿಕಾರಿ ಜಗದೀಶ, ಪಾಲಿಕೆ ವಲಯ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.