ಸಾರಾಂಶ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿ ಜನಗಣತಿ ದಾಳ ಪ್ರಯೋಗಿಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯ ವಿಚಾರದಲ್ಲಿ ಅವರಲ್ಲಿಯೇ ಒಗ್ಗಟ್ಟಿಲ್ಲ. ಅದರ ಸಾಧಕ-ಬಾಧಕಗಳು ಏನಾಗುತ್ತವೆ ಅನ್ನುವುದರ ಅರಿವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಹಾಗೂ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಈ ದಾಳ ಪ್ರಯೋಗಿಸುತ್ತಿದ್ದಾರೆ. ಸ್ವಾರ್ಥ ಸಾಧನೆಗೆ ಸಚಿವ ಸಂಪುಟದಲ್ಲಿ ಜಾತಿ ಜನಗಣತಿ ವರದಿ ಮಂಡಿಸುತ್ತಿರುವ ಮುಖ್ಯಮಂತ್ರಿಗಳ ನಡೆ ಖಂಡನೀಯ. ಜಾತಿ ಗಣತಿಯ ಮೂಲಕ ರಾಜ್ಯದ ಜನತೆಯ ಮೇಲೆ ಗದಾಪ್ರಹಾರ ಮಾಡಲು ಹೊರಟಿದ್ದಾರೆ ಎಂದರು.
ಸಿಎಂ ಮತ್ತು ಡಿಸಿಎಂ ನೇತೃತ್ವದ ಸರ್ಕಾರ ಯಾವುದೇ ಗೊತ್ತು ಗುರಿ ಇಲ್ಲದ ಕಾರ್ಯಕ್ರಮವನ್ನು ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ. ಸರ್ಕಾರದ ಬಳಿ ದುಡ್ಡು ಖಾಲಿಯಾಗಿದ್ದು, ದುಖಾನ್ ಬಂದ್ ಆಗಿದೆ. ಸರ್ಕಾರದ ಸ್ಥಿತಿಯನ್ನು ರಾಜ್ಯದ ಜನರು ಬೀದಿಯಲ್ಲಿ ನಿಂತು ಮಾತನಾಡುವಂತಾಗಿದೆ ಎಂದರು.
ರೈತರ ಬಗ್ಗೆ ಕಾಳಜಿ ಇಲ್ಲ
ಬೇಸಿಗೆ ಕಾಲ ಆರಂಭವಾಗಿದ್ದು, ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಅವರದೇ ಆದ ಮನಸ್ಥಿತಿಯನ್ನು ಇಟ್ಟುಕೊಂಡು ಜನರ ದಿಕ್ಕು ಬೇರೆಡೆಗೆ ಸೆಳೆಯುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಿ. ಸೋಮಣ್ಣ ಹರಿಹಾಯ್ದರು.
ಯಾವುದೇ ಪೈಪೋಟಿ ಇಲ್ಲ
ರಾಜ್ಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಷಯದಲ್ಲಿ ಯಾವುದೇ ರೀತಿಯ ಪೈಪೋಟಿಯಿಲ್ಲ. ರಾಜ್ಯ ಸರ್ಕಾರ ಸೂಕ್ತ ಸ್ಥಳದ ಬಗ್ಗೆ ಸೂಚನೆ ನೀಡಿದಲ್ಲಿ, ಕೇಂದ್ರ ಸರ್ಕಾರದ ಅದರ ಅನುಷ್ಠಾನ ಕಾರ್ಯ ಕೈಗೊಳ್ಳಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕು ಎಂಬ ಕೂಗು ಇದೆ. ಆದರೆ, ವಿಮಾನ ನಿಲ್ದಾಣದಲ್ಲಿ ಉತ್ತರ- ಮಧ್ಯ ಕರ್ನಾಟಕ ಎಂಬ ಪ್ರಶ್ನೆ ಬರುವುದಿಲ್ಲ. ಹೊಸೂರಿನಲ್ಲಿ ತಮಿಳುನಾಡು ಸರ್ಕಾರ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುತ್ತಿದೆ. ಇದರಿಂದ ಆಗುವ ಕೆಲ ಅನನುಕೂಲಗಳನ್ನು ಪರಿಗಣಿಸಲಾಗುವುದು ಎಂದ ಅವರು, ರಾಜ್ಯ ಸರ್ಕಾರ ಸ್ಥಳ ಗುರುತಿಸುವ ವಿಷಯದಲ್ಲಿ ಯಾವುದೇ ಪೈಪೋಟಿ ಮಾಡದೇ ಸಾಧಕ- ಬಾಧಕವನ್ನು ಪರಿಶೀಲಿಸಿ, ಎಲ್ಲರಿಗೂ ಅನುಕೂಲವಾಗುವಂತೆ ಸ್ಥಳ ನಿಗದಿ ಮಾಡಬೇಕು ಎಂದು ಸಚಿವ ಸೋಮಣ್ಣ ಸಲಹೆ ನೀಡಿದರು.
ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಗಲಿದೆ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಇದು ಮುಂದೆ ಕಾಂಗ್ರೆಸ್ ಸರ್ಕಾರದ ಪತನಕ್ಕೂ ಕಾರಣವಾಗಲಿದೆ ಎಂದು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಆರೋಪಿದರು.
ಪರ್ಸೆಂಟೇಜ್ ವಿಚಾರದಲ್ಲಿ ಗುತ್ತಿಗೆದಾರರ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಪರ್ಸೆಂಟೆಜ್ ಆರೋಪ ಮಾಡಿ, ಚುನಾವಣೆಯಲ್ಲಿ ಸೋಲಿಗೆ ಕಾರಣರಾದರು. ಈಗ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರವಿದೆ ಎಂದು ಗುತ್ತಿಗೆದಾರರೇ ಆರೋಪಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿರುವ ಸಲಹೆಗಾರರೇ ನಂಬರ್ ಒನ್ ಭ್ರಷ್ಟ ಸರ್ಕಾರ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬಾರದು. ಸಿದ್ದರಾಮಯ್ಯ ಆಡಳಿತ ವ್ಯವಸ್ಥೆಯಲ್ಲಿ ಈ ರೀತಿಯಾಗಿ ನಡೆದುಕೊಳ್ಳುತ್ತಾರೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನಾನು ಸಹ ಸಿದ್ದರಾಮಯ್ಯ ಜತೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಹಳೆ ಸಿದ್ದರಾಮಯ್ಯರಂತೆ ಈಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.