ಸಾರಾಂಶ
ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಲಜ್ಜೆಗೆಟ್ಟಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಓಲೈಕೆಗಾಗಿ ರಾತ್ರಿ ವೇಳೆ ಬಂಡಿಪುರದಲ್ಲಿ ವಾಹನ ಸಂಚಾರಕ್ಕೆ ಒಪ್ಪಿದ್ದಾರೆ, ಓಟಿಗಾಗಿ ಮುಸ್ಲಿಮರ ಓಲೈಕೆಗೂ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮರಣ ಪ್ರಮಾಣ ಪತ್ರ ಶುಲ್ಕ ಸೇರಿದಂತೆ ಒಟ್ಟು 48 ವಸ್ತುಗಳ ಬೆಲೆ ಹೆಚ್ಚಿಸಲಾಗಿದೆ. ಇತಿಹಾಸದಲ್ಲಿ ಇದೊಂದು ದಾಖಲೆ ಎಂದರು.
ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ಅವರನ್ನು ಕೇರಳದ ಜನ ಗೆಲ್ಲಿಸಿದರು ಎಂಬ ಕಾರಣಕ್ಕಾಗಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಹಿಂದೆ ಆನೆ ತುಳಿದು ಕೇರಳದ ವ್ಯಕ್ತಿ ಮೃತಪಟ್ಟಿರುವುದಕ್ಕೆ 25 ಲಕ್ಷ ಪರಿಹಾರ ನೀಡಿದ್ದಾರೆ. ರಾಜ್ಯದ ವ್ಯಕ್ತಿ ಮೃತಪಟ್ಟಾಗ ಕೇವಲ 5 ಲಕ್ಷ ಪರಿಹಾರ ನೀಡಿದ್ದಾರೆ. ಇದು ಯಾವ ನೀತಿ ಎಂದು ಅವರು ಪ್ರಶ್ನಿಸಿದರು.ರಾಜ್ಯ ಸರ್ಕಾರ ಎಲ್ಲಾ ಮಾದರಿಯ ತೆರಿಗೆಯನ್ನು ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳನ್ನು ನೀಡಲು ಇಷ್ಟೊಂದು ಸಾಹಸ ಮಾಡುತ್ತಿದ್ದಾರೆ.
ಇತ್ತೀಚೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನನ್ನನ್ನು ಭೇಟಿಯಾಗಿದ್ದರು. ಆಗ ಅವರು ಗ್ಯಾರಂಟಿ ಕೊಡುವುದು ಕಷ್ಟವಾಗಿದೆ ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಹಣೆ ಬರಹ ಎಂದರು. ಗೃಹಲಕ್ಷ್ಮೀ ಯೋಜನೆಗೆ ಹಣ ಕೊಟ್ಟಿಲ್ಲ ಎಂದರೆ ಅದೇನು ಸಂಬಳವೇ ಎನ್ನುತ್ತಾರೆ ಸಿದ್ದರಾಮಯ್ಯ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಮೂರು ತಿಂಗಳಾದರೂ ಆದೇಶಿಸಿಲ್ಲ. ತ್ರಿವಳಿ ತಲಾಕ್, ಆರ್ಟಿಕಲ್ 370 ರದ್ದುಪಡಿಸಿದರೆ ದೇಶದಲ್ಲಿ ರಕ್ತಕೋಕುಳಿ ಹರಿಯುತ್ತದೆ ಎಂದಿದ್ದರು. ನಿಮ್ಮ ತಾತ, ಮುತ್ತಜ್ಜ ಬಂದರೂ ವಕ್ಫ್ ಕಾಯ್ದೆ ಜಾರಿ ತರುವುದನ್ನು ತಡೆಯಲು ಆಗದು ಎಂದಿದ್ದರು. ಈಗ ಏನಾಯಿತು ಎಂದು ಪ್ರಶ್ನಿಸಿದರು.
ಮೋದಿ, ಮೋದಿ ಎಂದ ಜನ:
ವಕ್ಫ್ ಕಾಯ್ದೆಯ ಬಗ್ಗೆ ರಾಜ್ಯಸಭೆಯಲ್ಲಿ ರಾತ್ರಿ 2 ಗಂಟೆವರೆಗೂ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಇದೊಂದು ಐತಿಹಾಸಿಕ ನಿರ್ಣಯ ಎಂದರು. ಆಗ ನೆರೆದಿದ್ದ ಸಭಿಕರು ಮೋದಿ, ಮೋದಿ ಎಂದು ಕೂಗಿದರು.