ಸಿದ್ದು ‘ನಾನೇ ಸಿಎಂ’ ಹೇಳಿಕೆಯಿಂದ ಸಂಚಲನ! ರಹಸ್ಯ ಮಾತುಕತೆ

| N/A | Published : Jul 11 2025, 12:32 AM IST / Updated: Jul 11 2025, 11:48 AM IST

Congress President Mallikarjun Kharge (File Photo/ANI)
ಸಿದ್ದು ‘ನಾನೇ ಸಿಎಂ’ ಹೇಳಿಕೆಯಿಂದ ಸಂಚಲನ! ರಹಸ್ಯ ಮಾತುಕತೆ
Share this Article
  • FB
  • TW
  • Linkdin
  • Email

ಸಾರಾಂಶ

  5 ವರ್ಷ ನಾನೇ ಸಿಎಂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ನ ಕೇಂದ್ರ ಸ್ಥಾನ ದೆಹಲಿಯಲ್ಲೇ ಘಂಟಾಘೋಷವಾಗಿ ಹೇಳಿದ ಬೆನ್ನಲ್ಲೇ ನಗರದಲ್ಲಿ ಸಿಎಂ ಆಪ್ತ ಸಚಿವರ ದಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ  

 ಬೆಂಗಳೂರು :  ಅಧಿಕಾರ ಹಂಚಿಕೆಯ ಎಲ್ಲ ಗೊಂದಲ ಹಿನ್ನೆಲೆಯಲ್ಲಿ 5 ವರ್ಷ ನಾನೇ ಸಿಎಂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ನ ಕೇಂದ್ರ ಸ್ಥಾನ ದೆಹಲಿಯಲ್ಲೇ ಘಂಟಾಘೋಷವಾಗಿ ಹೇಳಿದ ಬೆನ್ನಲ್ಲೇ ನಗರದಲ್ಲಿ ಸಿಎಂ ಆಪ್ತ ಸಚಿವರ ದಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಹುಟ್ಟುಹಾಕಿದೆ.

ದೆಹಲಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಆಪ್ತ ಸಚಿವರಾದ ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಜಮೀರ್ ಆಹ್ಮದ್‌, ದಿನೇಶ್ ಗುಂಡೂರಾವ್‌ ಅವರು ಖರ್ಗೆ ಮನೆಗೆ ದೌಡಾಯಿಸಿದರು. ಕೆಲ ಕಾಲದ ನಂತರ ಗೃಹ ಸಚಿವರ ಡಾ.ಜಿ.ಪರಮೇಶ್ವರ್‌ ಸಹ ಖರ್ಗೆ ನಿವಾಸಕ್ಕೆ ಆಗಮಿಸಿದರು.

ಇದೇ ವೇಳೆ ಖರ್ಗೆ ಅವರ ಆಪ್ತ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಶರಣ ಪ್ರಕಾಶ್ ಪಾಟೀಲ್ ಅವರು ಖರ್ಗೆ ಮನೆಯಲ್ಲೇ ಇದ್ದ ಕಾರಣ ಸಚಿವರ ದೊಡ್ಡ ದಂಡು ಖರ್ಗೆ ಅವರೊಂದಿಗೆ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿತು. ಸಚಿವರು ಈ ರೀತಿ ಗುಂಪು-ಗುಂಪಾಗಿ ಖರ್ಗೆ ಅವರನ್ನು ಭೇಟಿ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಯಾವ ಸಚಿವರೂ ನೇರ ಉತ್ತರ ನೀಡಿಲ್ಲ. ತಮ್ಮ ಇಲಾಖೆ ವಿಚಾರಗಳ ಬಗ್ಗೆ ಚರ್ಚಿಸಲು ಖರ್ಗೆ ಅವರನ್ನು ಭೇಟಿಯಾಗಿದ್ದಾಗಿ ಹಾರಿಕೆಯ ಉತ್ತರಗಳನ್ನೇ ನೀಡಿದರು.

ಆದರೆ, ಹೀಗೆ ಸಿದ್ದರಾಮಯ್ಯ ಅವರ ದಾಢಸಿತನದ ಹೇಳಿಕೆಯ ನಂತರ ಅವರ ಆಪ್ತ ಸಚಿವರು ಖರ್ಗೆ ಅವರನ್ನು ಭೇಟಿ ಮಾಡಿದ್ದಕ್ಕೆ ರಾಜಕೀಯ ಕಾರಣಗಳನ್ನು ನೀಡಲಾಗುತ್ತಿದೆ. ಮೂಲಗಳ ಪ್ರಕಾರ ತಾವೇ ಐದು ವರ್ಷ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡುವಂತಹ ಪ್ರಸಂಗ ಬರಲು ಕಾರಣವೇನು? ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಯಾವ ಚಿಂತನೆಯಿದೆ ಎಂಬುದನ್ನು ಖರ್ಗೆ ಅವರಿಂದಲೇ ಅರಿತುಕೊಳ್ಳುವ ಪ್ರಯತ್ನವನ್ನು ಈ ಸಚಿವರು ನಡೆಸಿದರು ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೆ ಪಟ್ಟು?:

ಮತ್ತೊಂದು ಮೂಲಗಳ ಪ್ರಕಾರ, ಅಧಿಕಾರ ಹಸ್ತಾಂತರ ವಿಚಾರ ಪದೇಪದೇ ಪ್ರಸ್ತಾಪವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರೆಸಬೇಕು ಎಂಬ ಪ್ರತಿಪಾದನೆ ಹಾಗೂ ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರ ನೇಮಕದ ಬಗ್ಗೆ ಹೈಕಮಾಂಡ್‌ ಯಾವ ಚಿಂತನೆ ನಡೆಸಿದೆ ಎಂದು ಪ್ರಶ್ನಿಸಲು ಹಾಗೂ ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಡ ನಿರ್ಮಾಣದ ಪ್ರಯತ್ನವನ್ನು ಈ ಸಚಿವರು ನಡೆಸಿದರು ಎನ್ನಲಾಗಿದೆ.

ಮಹದೇವಪ್ಪ-ಜಾರಕಿಹೊಳಿ ಸಭೆ:

ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹಾಗೂ ಎಚ್.ಸಿ.ಮಹದೇವಪ್ಪ ಅವರು ರಹಸ್ಯ ಸಮಾಲೋಚನೆ ನಡೆಸಿದರು.

ಇದಕ್ಕೂ ಮೊದಲು ದೆಹಲಿಯಲ್ಲಿ ಚಟುವಟಿಕೆ ಬಿರುಸುಗೊಂಡ ಬೆನ್ನಲ್ಲೇ ಗುರುವಾರ ಬೆಳಗ್ಗೆಯೇ ಸಚಿವ ಸತೀಶ್ ನಿವಾಸಕ್ಕೆ ಶಾಸಕರಾದ ಡಾ.ರಂಗನಾಥ್, ಎಚ್.ಸಿ. ಬಾಲಕೃಷ್ಣ, ಅನಿಲ್ ಚಿಕ್ಕಮಾದು, ಬಸವಂತಪ್ಪ, ಯೂಸುಫ್ ಪಠಾಣ್, ತರೀಕೆರೆ ಶ್ರೀನಿವಾಸ್, ಧ್ರುವ ನಾರಾಯಣ್, ಶಾಂತನಗೌಡ, ಪರಿಷತ್‌ ಸದಸ್ಯ ರಾಜೇಂದ್ರ ಸೇರಿ ಹಲವರು ಭೇಟಿ ನೀಡಿದ್ದರು. ಬಿಜೆಪಿಯ ರೆಬೆಲ್‌ ತಂಡದ ಸದಸ್ಯ ಹಾಗೂ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಅವರೂ ಆಗಮಿಸಿದ್ದರು. ಹೀಗೆ ಸಚಿವರು ಹಾಗೂ ಶಾಸಕರು ನಗರದಲ್ಲಿ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದ್ದು, ಸಂಚಲನ ಮೂಡಿಸಿದೆ.

Read more Articles on