ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಕಂಡು ಜನರು ಚೀ... ತೂ..., ಅಂತ ಮುಖಕ್ಕೆ ಉಗಿಯುತ್ತಿದ್ದಾರೆ. ಸಿಎಂ ಪೊಲೀಸರ ಸರ್ಪಗಾವಲಿನಲ್ಲಿ ಬಂದು ಕಾರ್ಯಕ್ರಮ ಮಾಡುತ್ತಾರೆ. ಸಿದ್ದರಾಮಯ್ಯರಿಗೆ ಸಿಎಂ ಸೀಟ್ ಬಿಡುವ ಮನಸ್ಸು ಇಲ್ಲ. ಜನರೇ ಇವರನ್ನು ಎಷ್ಟೋತ್ತಿಗೆ ತೊಲಗುತ್ತಾರೋ ಅನ್ನೋ ಸ್ಥಿತಿ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಗರಡಿಯಲ್ಲಿ ಪಳಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕೆಲಸ ಕಲಿತಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತು. ಆದರೆ, ಅವರು ಕೇವಲ ಪಾಲಿಟಿಕ್ಸ್ ಮಾತ್ರ ಕಲಿತರು. ಹೀಗಾಗಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡ್ತಾರೆ ಎಂಬುದು ಗ್ಯಾರಂಟಿ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷ ಒಳ್ಳೆಯ ಕೆಲಸ ಮಾಡಿದ್ರೆ ಸಿದ್ದರಾಮಯ್ಯ ಮುಂದುವರಿಲಿ ಅಂತ ಜನರೇ ಧ್ವನಿ ಎತ್ತುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಒಲೈಕೆ ಮಾಡಿಕೊಂಡು ಎಲ್ಲರೊಂದಿಗೆ ಗುರ್ ಅನ್ನೋದು ಬಿಟ್ಟರೆ ಪಾಲಿಟಿಕ್ಸ್ ಅನ್ನು ಮಾತ್ರ ಚೆನ್ನಾಗಿ ಮಾಡುತ್ತಾರೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಕಂಡು ಜನರು ಚೀ... ತೂ..., ಅಂತ ಮುಖಕ್ಕೆ ಉಗಿಯುತ್ತಿದ್ದಾರೆ. ಸಿಎಂ ಪೊಲೀಸರ ಸರ್ಪಗಾವಲಿನಲ್ಲಿ ಬಂದು ಕಾರ್ಯಕ್ರಮ ಮಾಡುತ್ತಾರೆ. ಸಿದ್ದರಾಮಯ್ಯರಿಗೆ ಸಿಎಂ ಸೀಟ್ ಬಿಡುವ ಮನಸ್ಸು ಇಲ್ಲ.

ಜನರೇ ಇವರನ್ನು ಎಷ್ಟೋತ್ತಿಗೆ ತೊಲಗುತ್ತಾರೋ ಅನ್ನೋ ಸ್ಥಿತಿ ಇದೆ ಎಂದು ಟೀಕಿಸಿದರು.

ಮೂಲ ಕಾಂಗ್ರೆಸ್ ನಿಯಮದ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು. ಸರ್ಕಾರ ಬಂದಿದ್ದರಿಂದ ಮೊದಲು ಡಿಕೆಶಿ ಸಿಎಂ ಆಗಬೇಕಿತ್ತು. ಎಸ್.ಎಂ.ಕೃಷ್ಣ ಕೂಡ ಆಗೆ ಸಿಎಂ ಆಗಿದ್ದರು. 2013ರಲ್ಲಿ ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆದರೆ, ಅವರಿಗೆ ಅವಕಾಶ ಸಿಗುತ್ತದೆ ಅಂತ ಸ್ವ-ಜಾತಿಯವರನ್ನು ಚೂ ಬಿಟ್ಟು ಸೋಲಿಸಿ ತಾವೇ ಸಿಎಂ ಆದರು ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.

2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸಲು ಆಗಲಿಲ್ಲ. ಡಿಕೆಶಿ ಹುಟ್ಟು ಹೋರಾಟಗಾರ, ರಾಜಕಾರಣ ಚೆನ್ನಾಗಿ ಮಾಡುತ್ತಾರೆ. ಎದುರಿಸಲು ಶಕ್ತಿ ಇರುವ ಮನುಷ್ಯ ಇವರನ್ನು ಸೋಲಿಸಕ್ಕಾಗಲ್ಲ.

ಡಿಕೆಶಿ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಅಧಿಕಾರ ಕಬಳಿಸಿದರು. ನ್ಯಾಯಯುತವಾಗಿ ಡಿಕೆಶಿಗೆ ಅಧಿಕಾರ ಸಿಗಬೇಕಿತ್ತು ಎಂದರು.

ಮೊದಲಿನ ಕಾಂಗ್ರೆಸ್ ಈಗಿಲ್ಲ. ರಾಹುಲ್ ಗಾಂಧಿ, ಸೋನಿಯಗಾಂಧಿ ವೀಕ್ ಇಲ್ಲದಿದ್ದರೆ ಮೊದಲಿಗೆ ಡಿಕೆಶಿ ಸಿಎಂ ಆಗುತ್ತಿದ್ದರು. ಈಗ ಎಲ್ಲರಿಗೂ ಹೆದರಿಕೊಳ್ಳುವ ಕಾಂಗ್ರೆಸ್ ಹೈಕಮಂಡ್ ಆಗಿದೆ. ಅದಕ್ಕಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ಈಗ ನವೆಂಬರ್ ಕ್ರಾಂತಿ ಮಾತ್ರ ಶುರುವಾಗಿದೆ. ಡಿಸೆಂಬರ್‌ನಲ್ಲಿ ಬ್ರಾಂತಿ ಹಾಗುತ್ತದೆ. ಕ್ರಾಂತಿ, ಬ್ರಾಂತಿ ಬಿಟ್ಟರೆ ಬೇರೆ ಏನು ಮಾಡ್ತಿಲ್ಲ. ಸರ್ಕಾರಕ್ಕೆ ಎರಡೂವರೆ ವರ್ಷವಾಗಿದ್ದು, ಸಿದ್ದರಾಮಯ್ಯ, ಡಿಕೆಶಿ ಪರ ವಿರೋಧ ಚರ್ಚೆ ನಡೆಯುತ್ತಿವೆ. ಸಚಿವ ಸತೀಶ್ ಜಾರಕಿಹೋಳಿ ಎತ್ತು ಕಟ್ಟುವುದು. ಶಾಸಕರ ಹಿಡಿದಿಟ್ಟುಕೊಳ್ಳುವ ಕೆಲಸ ಮಾತ್ರ ಆಗುತ್ತಿದೆ. ಅಭಿವೃದ್ಧಿ ಎಂಬುದು ಶೂನ್ಯವಾಗಿದೆ ಎಂದರು.

ರಾಜ್ಯದಲ್ಲಿ ಎರಡೂವರೆ ವರ್ಷ ಯಾವುದೇ ಕೆಲಸಗಳು ಆಗಿಲ್ಲ. ಕಾಂಗ್ರೆಸ್ ಸರ್ಕಾರ ಸತ್ತೋಗಿದೆ. ಸತ್ತೋಗಿರುವ ಸರ್ಕಾರವನ್ನು ಸಿದ್ದರಾಮಯ್ಯ ಎತ್ತಿಕೊಂಡು ಹೋಗುತ್ತಿದ್ದಾರೆ. ಡಿಕೆಶಿ ಹಿಂದೆ ಹೊರುತ್ತಿದ್ದಾರೆ. ಮುಂದಿನ ಎರಡೂವರೆ ವರ್ಷ ಸಿಎಂ ಸ್ಥಾನ ಡಿಕೆಶಿಗೆ ಬಿಟ್ಟು ಕೊಟ್ಟು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಒನ್‌ ನೇಷನ್, ಒನ್ ಎಲೆಕ್ಷನ್ ಎಂಬುದು ಪ್ರಧಾನಿ ಮೋದಿಯವರ ಅಪೇಕ್ಷೆಯಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿದರೆ ಕೇಂದ್ರ ಸರ್ಕಾರವೂ ಎಲ್ಲ ರಾಜ್ಯಗಳ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತದೆ ಎಂದು ಸಮಸ್ಯೆಗಳನ್ನು ಬಿಟ್ಟು ಚುನಾವಣೆ ಕಡೆಗೆ ಪ್ರಧಾನಿ, ಸಚಿವರು ಗಮನ ಹರಿಸಿದ್ದಾರೆಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.