ಸಾರಾಂಶ
ಯಮಕನಮರಡಿ ಸಮೀಪದ ಹೆಬ್ಬಾಳ ಗ್ರಾಮದ ವಾರ್ಡ್ ನಂ.3 ಹಾಗೂ ವಾರ್ಡ ನಂ.4ರಲ್ಲಿ 20 ದಿನಗಳಿಂದ ಕುಡಿಯುವ ನೀರು ಬಾರದ್ದರಿಂದ ಮಂಗಳವಾರ ವಾರ್ಡನ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಹೆಬ್ಬಾಳ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಸಮೀಪದ ಹೆಬ್ಬಾಳ ಗ್ರಾಮದ ವಾರ್ಡ್ ನಂ.3 ಹಾಗೂ ವಾರ್ಡ ನಂ.4ರಲ್ಲಿ 20 ದಿನಗಳಿಂದ ಕುಡಿಯುವ ನೀರು ಬಾರದ್ದರಿಂದ ಮಂಗಳವಾರ ವಾರ್ಡನ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಹೆಬ್ಬಾಳ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಖಾಲಿ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಜಮಾಯಿಸಿದ ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಡಕಲ್ಲ ಜಲಾಶಯದಿಂದ ನೀರು ಸರಬರಾಜು ವ್ಯವಸ್ಥೆ ಹದಗೆಟ್ಟಿದ್ದು, ಸರಿಯಾಗಿ ನಿರ್ವಹಣೆ ಇಲ್ಲ, ಪರಿಣಾಮ ಕಳೆದ 20 ದಿನಗಳಿಂದ ಕುಡಿಯುವ ನೀರು ನಳಗಳಿಗೆ ಬಂದಿಲ್ಲ. ಕೆಲವೆಡೆ ಕೊಳವೆಬಾವಿ ನೀರು ಪೂರೈಸುತ್ತಿದ್ದರೂ ಕುಡಿಯಲು ಯೋಗ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪಂಚಾಯತಿಗೆ ದಿಕ್ಕಿಲ್ಲದಂತಾಗಿದೆ. ಹಲವಾರು ಸಮಸ್ಯೆಗಳಿದ್ದರೂ ಆ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಗ್ರಾಮದಲ್ಲಿನ ನೀರಿನ ಸಮಸ್ಯೆಯಂತೂ ವಿಕೋಪಕ್ಕೆ ಹೋಗಿದೆ. 15 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ 20 ದಿನಗಳಾದರೂ ನೀರು ಪೂರೈಕೆ ಇಲ್ಲವೆಂದರೆ ಹೇಗೆ ? ನೀರಿನ ಸಮಸ್ಯೆ ನೀವಾರಿಸಬೇಕಾದವರು ಯಾರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಗ್ರಾಪಂ ಕಾರ್ಯಾಲಯಕ್ಕೆ ಬೀಗ:
ಗಂಟೆಯಾದರೂ ಪಿಡಿಒ ಅಥವಾ ಅಧಿಕಾರಿಗಳು ಬಾರದ್ದರಿಂದ ಆಕ್ರೋಶಗೊಂಡ ಮಹಿಳೆಯರು, ಕೆಲವು ಗ್ರಾಮಸ್ಥರು ಕಾರ್ಯಾಲಯದೊಳಗೆ ಕಾರ್ಯನಿರ್ವಹಿಸುತ್ತಿದ್ದ ಪಂಚಾಯತಿ ಕಾರ್ಯದರ್ಶಿ, ಸಿಬ್ಬಂದಿಯನ್ನು ಹೊರಹಾಕಿ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ರಸ್ತೆ, ಚರಂಡಿ ವ್ಯವಸ್ಥೆ ಯಾವುದೂ ಸರಿಯಿಲ್ಲ. ಕೇವಲ ಲಾಭದ ಕೆಲಸ ಮಾತ್ರ ಮಾಡಲಾಗುತ್ತಿದೆ ಎಂದು ಮುಖಂಡರಾದ ರಾವಸಾಹೇಬ ಪಾಟೀಲ ಆರೋಪಿಸಿದರು.ಕೆಲವು ಅಧಿಕಾರಿಗಳು ಬೀಗ ತೆರೆಯಲು ಪ್ರತಿಭಟನಾಕಾರರ ಮನವೊಲಿಸಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಜನರು ಪಟ್ಟು ಹಿಡಿದು ಬೀಗ ಕೊಡಲು ಒಪ್ಪಲಿಲ್ಲ.ಪ್ರತಿಭಟನೆಯಲ್ಲಿ ಮಹಾದೇವಿ ಮಠಪತಿ, ಗೌರಿ ಗಣಾಚಾರಿ, ಮಹಾದೇವಿ ಅಮ್ಮಣಗಿ, ಮಹಾದೇವಿ ಮಠಪತಿ, ಸವಿತಾ ಪಾಟೀಲ, ರಾವಸಾಹೇಬ ಪಾಟೀಲ, ರಾಜು ಮಠಪತಿ ಹಾಗೂ ಗ್ರಾಮದ ಸುಮಾರು 100ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.