ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರೋದು ಪ್ರಜಾಪ್ರಭುತ್ವದ ಕಗ್ಗೊಲೆ. ರಾಜ್ಯ ಸರ್ಕಾರದ ನಡೆಯನ್ನು ಜನ ಗಮನಿಸಿದ್ದಾರೆ. ರಾಜ್ಯಪಾಲರು ಸಂವಿಧಾನಾತ್ಮಕವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಹೋಗಿದ್ದಾರೆ. ಶಾಸಕರ ಗೂಂಡಾ ರೀತಿ ವರ್ತನೆ ಖಂಡನೀಯ.
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರೋದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡೆಯನ್ನು ಜನ ಗಮನಿಸಿದ್ದಾರೆ. ರಾಜ್ಯಪಾಲರು ಸಂವಿಧಾನಾತ್ಮಕವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಹೋಗಿದ್ದಾರೆ. ಶಾಸಕರ ಗೂಂಡಾ ರೀತಿ ವರ್ತನೆ ಖಂಡನೀಯ ಎಂದರು.
ಚಾಮುಂಡಿಬೆಟ್ಟದ ಪ್ರಸಾದ್ ಯೋಜನೆ ಕಾಮಗಾರಿ ವಿಚಾರದ ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ. ಅಲ್ಲಿ ಗ್ರಾಮಸ್ಥರು ವಿರೋಧಿಸಿದ್ದಾರೆ. ಬೆಟ್ಟದ ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದೆ. ಸುತ್ತಮುತ್ತಲ ಕಾಮಗಾರಿಯಿಂದ ಗೋಪುರಕ್ಕೆ ತೊಂದರೆ ಆಗಬಹುದು. ಈ ಹಿಂದೆ ಯಾವ ರೀತಿ ಕಾಮಗಾರಿ ಮಾಡಿದ್ದಾರೆ ಎಂಬುದನ್ನು ತಿಳಿಯಲಿ. ನಂತರ ಕಾಮಗಾರಿ ಮುಂದುವರೆಸಲಿ, ಚಾಮುಂಡಿಬೆಟ್ಟದ ಅಭಿವೃದ್ಧಿ ಕೂಡ ಆಗಬೇಕಿದೆ ಎಂದರು.ನನ್ನ ಅನುಮತಿಗಿಂತ ಕಾಮಗಾರಿಗೆ ವಿರೋಧ ಮಾಡಿರುವವರ ಅನುಮತಿ ತುಂಬಾ ಮುಖ್ಯ. ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ಕೈಗೊಂಡಿರುವುದು ಯಾಕೆ ಎಂಬುದು ಗೊತ್ತಿಲ್ಲ. ಜನರ ಅಭಿಪ್ರಾಯಪಡೆದು ಕಾಮಗಾರಿ ಮುಂದುವರೆಸಲಿ ಎಂದರು.
ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಸರಿಯಾಗಿ ಪತ್ರ ವ್ಯವಹಾರ ನಡೆದಿಲ್ಲ. ಈಗಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಆದರೆ ರಾಜ್ಯದ ಸ್ತಬ್ಧಚಿತ್ರ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಇರುವುದಿಲ್ಲ. ಮೈಸೂರು - ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತವಾಗಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರಿಸಿಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ರೈಲ್ವೆ ಇಲಾಖೆ ಗಮನಕ್ಕೆ ತಂದಿದ್ದೇನೆ. ಈ ಭಾಗಕ್ಕೆ ರೈಲ್ವೆ ಯೋಜನೆ ಅಗತ್ಯವಿದೆ ಎಂದರು.ಮೈಸೂರು ಕೊಡಗು ಜನರ ಹಿತದೃಷ್ಟಿಯಿಂದ ಯೋಜನೆ ಅನುಷ್ಠಾನಗೊಳ್ಳಬೇಕು. ಮತ್ತೊಮ್ಮೆ ಕೇಂದ್ರದ ಗಮನ ಸೆಳೆಯುತ್ತೇನೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಸಹಕಾರ ನೀಡಲಿ ಎಂದರು.
ಬಳ್ಳಾರಿ ಗಲಾಟೆ ವಿಷಯದಲ್ಲಿ ಹೇಳುವುದಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಹೋರಾಟ ಕೂಡ ನಡೆಸಲಾಗಿದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ತೀರ್ಮಾನ ಕೈಗೊಳ್ಳಬೇಕು.