ಸಾರಾಂಶ
ಆರು ದಶಕಗಳಿಗೂ ಹೆಚ್ಚಿನ ಕಾಲದಿಂದ ಶರಾವತಿ ಸಂತ್ರಸ್ತರ ಬೇಡಿಕೆಯಾಗಿದ್ದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಸೋಮವಾರ ಲೋಕಾರ್ಪಣೆಗೊಳ್ಳುವುದರ ಮೂಲಕ ಐತಿಹಾಸಿಕ ಕ್ಷಣಗಣನೆಗೆ ಸಾಕ್ಷಿಯಾಯಿತು.
ಶಿವಮೊಗ್ಗ: ಆರು ದಶಕಗಳಿಗೂ ಹೆಚ್ಚಿನ ಕಾಲದಿಂದ ಶರಾವತಿ ಸಂತ್ರಸ್ತರ ಬೇಡಿಕೆಯಾಗಿದ್ದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಸೋಮವಾರ ಲೋಕಾರ್ಪಣೆಗೊಳ್ಳುವುದರ ಮೂಲಕ ಐತಿಹಾಸಿಕ ಕ್ಷಣಗಣನೆಗೆ ಸಾಕ್ಷಿಯಾಯಿತು.
ಮಳೆಯ ನಡೆವೆಯೂ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಶರಾವತಿ ಹಿನ್ನೀರಿಗೆ ಬಾಗಿನ ಅರ್ಪಿಸುವುದರ ಮೂಲಕ ನೂತನ ಸೇತುವೆಯನ್ನು ಸಾರ್ವಜನಿಕರಿಗೆ ಅರ್ಪಿಸಿದರು.ಇದಕ್ಕೂ ಮುನ್ನ ನೂತನ ಸೇತುವೆಯ ಮೇಲೆ ಆಯೋಜಿಸಲಾಗಿದ್ದ ಹೋಮ, ಹವನಗಳಲ್ಲಿ ಭಾಗಿಯಾಗಿ ನಿತಿನ್ ಗಡ್ಕರಿಯವರು ಪೂರ್ಣಾಹುತಿಯಲ್ಲಿ ಫಲ ಇತ್ಯಾದಿ ಸಮರ್ಪಣೆ ಮಾಡಿದರು. ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಚಂಡೆ, ಡೊಳ್ಳು, ವಾದ್ಯ, ವೀರಗಾಸೆ ಮುಂತಾದ ಜಾನಪದ ತಂಡಗಳ ಪ್ರದರ್ಶನ ಮೆರಗು ನೀಡಿತ್ತು.ಸೇತುವೆ ಉದ್ಘಾಟನೆ ಬಳಿಕ ಸಾಗರದ ನೆಹರೂ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರ್ ಅವರಿಗೆ ಬೆಳ್ಳಿ ಗದೆ ಮತ್ತು ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಸಿಗಂದೂರು ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದ ಪರಮೇಶ್ವರಪ್ಪ ಅವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲಾದವರು ಸಾತ್ ನೀಡಿದರು.ಶಾಸಕ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಹರತಾಳು ಹಾಲಪ್ಪ, ಟಿ.ಡಿ.ಮೇಘರಾಜ್, ಪ್ರಸನ್ನ ಕೆರೆಕೈ, ಎಸ್.ದತ್ತಾತ್ರಿ ಮೊದಲಾದವರಿದ್ದರು.