ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ಪೊಲೀಸ್ ಹಾಗೂ ಜಂಬೂ ಸ್ಟಾರ್ ಸೆಕ್ಯುರಿಟಿ ಆ್ಯಂಡ್ ಫೆಸಿಲಿಟಿ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಉಡುಪಿ ನಗರ ಠಾಣಾ ವ್ಯಾಪ್ತಿಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ವಾರ್ಡ್‌ನಲ್ಲಿ ಶನಿವಾರ ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ದೃಷ್ಟಿ ಯೋಜನೆಯನ್ನು ಎಸ್ಪಿ ಹರಿರಾಂ ಶಂಕರ್ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಎಎಸ್ಪಿಗಳಾದ ಸುಧಾಕರ ನಾಯಕ್ ಮತ್ತು ಶ್ರೀ ಪರಮೇಶ್ವರ್ ಹೆಗಡೆ, ಜಂಬೋ ಸ್ಟಾರ್ ಸೆಕ್ಯುರಿಟಿ ಆ್ಯಂಡ್ ಫೆಸಿಲಿಟಿ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ವಿಜಯ್ ಫರ್ನಾಂಡಿಸ್, ಸುಬ್ರಹ್ಮಣ್ಯ ನಗರ ವಾರ್ಡ್‌ನ ಸದಸ್ಯೆ ಜಯಂತಿ ಹಾಗೂ ಉಡುಪಿ ಉಪವಿಭಾಗ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ ವಿ. ಬಡಿಗೇರ ಉಪಸ್ಥಿತರಿದ್ದರು.ಸೆಕ್ಯುರಿಟಿಗೆ ಸಂಬಂಧಿಸಿದಂತೆ ಸದರಿ ಏಜೆನ್ಸಿ ಅವರ ಬೋಲೆರೋ ವಾಹನ ಮತ್ತು ಬೈಕ್‌ಗೆ ಪುಷ್ಪಾರ್ಚನೆ ಮಾಡಿ ಗಸ್ತಿಗೆ ಪೊಲೀಸ್ ಅಧಿಕಾರಿ ಚಾಲನೆ ನೀಡಿದರು.ಪ್ರತೀ ಠಾಣಾ ವ್ಯಾಪ್ತಿಯು ದೊಡ್ಡದಾಗಿದ್ದು, ಪ್ರತೀ ಠಾಣಾ ವ್ಯಾಪ್ತಿಯಲ್ಲಿ ಅಂದಾಜು 80 ಸಾವಿರದಿಂದ 1 ಲಕ್ಷದ ವರೆಗೆ ಜನಸಂಖ್ಯೆ ಇದೆ. ಅಷ್ಟೂ ಜನಸಂಖ್ಯೆ ಇರುವ ಪ್ರದೇಶವನ್ನು ಕೇವಲ 40-60 ಜನ ಪೊಲೀಸರು ನಿರ್ವಹಿಸುತ್ತಿರುತ್ತಾರೆ. ಅಂದರೆ ಪ್ರತೀ ಪೊಲೀಸರಿಗೆ ಸುಮಾರು 1700 ರಿಂದ 1800 ಜನರ ಜವಾಬ್ದಾರಿಯು ಬರುತ್ತದೆ. ಈ ದೆಸೆಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತೀ ಬೀಟ್‌ನಲ್ಲಿ ಸುಮಾರು 80-100 ಮನೆಗಳ ಒಂದು ವೆಲ್‌ಫೇರ್ ಕಮಿಟಿಗಳನ್ನು ರಚಿಸಿ, ಅವರ ವ್ಯಾಪ್ತಿಯ ಮನೆಗಳಿಗೆ ರಕ್ಷಣೆಯನ್ನು ಕೊಡುವಂತೆ ಮಾಡಲಾಗಿದೆ. ಅಲ್ಲದೇ ಈ ಪ್ರೈವೇಟ್ ಏಜೆನ್ಸಿಯಲ್ಲಿ ಮಾಜಿ ಸೈನಿಕರಿದ್ದು, ಅವರು ಈ ಬೀಟ್‌ಗಳಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ಮಾಡುತ್ತಾರೆ.ಎಸ್ಪಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಪ್ರಭು ಡಿ.ಟಿ. ಅವರ ನೇತೃತ್ವದಲ್ಲಿ ನಗರಸಭಾ ಸದಸ್ಯೆ ಜಯಂತಿ ಕೌನ್ಸಿಲರ್, ಉಡುಪಿ ನಗರ ಬೀಟ್ ಉಸ್ತುವಾರಿ ಅಧಿಕಾರಿ ಹರೀಶ್, ಬೀಟ್ ಕಾನ್ಸ್‌ಟೇಬಲ್‌ಗಳಾದ ರಾಘವೇಂದ್ರ ಬನ್ನಿಹಳ್ಳಿ ಮತ್ತು ಸ್ಪೂರ್ತಿ ಸಭೆಗಳನ್ನು ಏರ್ಪಡಿಸಿ, ಈ ಕುರಿತು ಸುಬ್ರಹ್ಮಣ್ಯ ನಗರ ವಾರ್ಡ್‌ನ ನಿವಾಸಿಗಳಿಗೆ ಈ ಯೋಜನೆಯ ಬಗ್ಗೆ ಮನವರಿಕೆ ಮಾಡಿದ್ದು, ಈ ದೃಷ್ಠಿ ಯೋಜನೆಯನ್ನು ಜಾರಿಗೆ ತರಲು ಶ್ರಮಿಸಿರುತ್ತಾರೆ.