ಕೊಪ್ಪಳದಲ್ಲಿ ಸಿಗ್ನಲ್ ರಹಿತ್‌ ಸರ್ಕಲ್ ನಿರ್ಮಾಣ

| Published : Aug 31 2025, 02:00 AM IST

ಸಾರಾಂಶ

ಇದು ಅತ್ಯಾಧುನಿಕ ಮಾದರಿಯಾಗಿದ್ದು ವೃತ್ತದಲ್ಲಿ ಸಿಗ್ನಲ್ ಇಲ್ಲದೆ ನಿರಂತರವಾಗಿ ಸಂಚರಿಸುವ ಮಾರ್ಗೋಪಾಯವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುವ ಪ್ರಶ್ನೆಯೇ ಇರುವುದಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ನಗರದಲ್ಲಿ ವಾಹನಗಳ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಸರ್ಕಲ್‌ನಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಲ್‌ಗಳ ಅಗಲೀಕರಣ ಮತ್ತು ಸಿಗ್ನಲ್ ರಹಿತ ಸರ್ಕಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ.

ಈಗಾಗಲೇ ನಗರದ ಅಶೋಕ ವೃತ್ತ, ಬಸವೇಶ್ವರ ವೃತ್ತ ಹಾಗೂ ಗಡಿಯಾರಕಂಬ ವೃತ್ತದ ಅಭಿವೃದ್ಧಿಗೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧವಾಗಿತ್ತು. ಈ ಹಿಂದಿನ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ವೃತ್ತಗಳ ಅಗಲೀಕರಣ ಮತ್ತು ವೃತ್ತಗಳ ನಿರ್ಮಾಣಕ್ಕೆ ಅಸ್ತು ಎಂದಿದ್ದ ಆಧಾರದಲ್ಲಿ ಯೋಜನೆ ಸಿದ್ಧಗೊಂಡು ಟೆಂಡರ್ ಅನುಮೋದನೆ ಬಾಕಿ ಇತ್ತು. ಆದರೆ, ನೂತನ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಈ ವೃತ್ತ ಅಗಲೀಕರಣ ಮತ್ತು ವೃತ್ತ ನಿರ್ಮಾಣಕ್ಕೆ ಬ್ರೇಕ್ ಹಾಕಿ, ಸಿಗ್ನಲ್ ರಹಿತ ವೃತ್ತಗಳನ್ನು ಹೊಸ ತಂತ್ರಜ್ಞಾನ ಹಾಗೂ ಮಾರ್ಗೋಪಾಯದಡಿ ನಿರ್ಮಿಸೋಣ ಎಂದು ಈ ಹಿಂದೆ ಟೆಂಡರ್ ಪ್ರಕ್ರಿಯೆಗೆ ಬಂದಿದ್ದ ಯೋಜನೆಯನ್ನು ವಾಪಸ್ ಕಳುಹಿಸಿದ್ದಾರೆ. ಜತೆಗೆ ಹೊಸ ಮಾದರಿ ಸಿಗ್ನಲ್ ರಹಿತ ವೃತ್ತ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದ್ದಾರೆ.

ಏನಿದು ಸಿಗ್ನಲ್ ರಹಿತ ವೃತ್ತ:

ಇದು ಅತ್ಯಾಧುನಿಕ ಮಾದರಿಯಾಗಿದ್ದು ವೃತ್ತದಲ್ಲಿ ಸಿಗ್ನಲ್ ಇಲ್ಲದೆ ನಿರಂತರವಾಗಿ ಸಂಚರಿಸುವ ಮಾರ್ಗೋಪಾಯವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುವ ಪ್ರಶ್ನೆಯೇ ಇರುವುದಿಲ್ಲ. ಇಂಥ ಮಾದರಿಯನ್ನು ನಗರದಲ್ಲಿ ಅಳವಡಿಸಿಕೊಂಡು ಸರ್ಕಲ್ ನಿರ್ಮಿಸೋಣ ಎಂದು ಜಿಲ್ಲಾಧಿಕಾರಿ ಹೇಳಿದ್ದರಿಂದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರವೂ ಹಳೆಯ ಮಾದರಿ ಕೈಬಿಟ್ಟು, ಹೊಸ ಮಾದರಿಯಂತೆ ಯೋಜನೆ ರೂಪಿಸಲು ಮುಂದಾಗಿದೆ.

ಸಿಗ್ನಲ್‌ ರಹಿತ್‌ ವೃತ್ತಕ್ಕೆ ಹೆಚ್ಚಿನ ಜಾಗ ಬೇಕಾಗಿದ್ದು ಈಗಿರುವ ವೃತ್ತವನ್ನು ಅಗಲೀಕರಣ ಮಾಡುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಸದ್ಯ ಇರುವ ಮಾಹಿತಿ ಪ್ರಕಾರ ನಗರದ ಪ್ರಮುಖ 3 ವೃತ್ತದ ಸುತ್ತಳತೆಯನ್ನು 100 ಅಡಿ ವ್ಯಾಪ್ತಿಯಲ್ಲಿ ನಿರ್ಮಿಸುವುದು ಮೊದಲ ಪ್ರಕ್ರಿಯೆಯಾಗಿದೆ. ಇದಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಸಹ ಅಸ್ತು ಎಂದಿದ್ದಾರೆ ಎನ್ನಲಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಸಹ ಹೊಸ ಮಾದರಿ ಅಳವಡಿಸುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ ತಿಳಿದು ಬಂದಿದೆ.ಹುಲಿಕೆರೆ ಅಭಿವೃದ್ಧಿ

ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಹುಲಿಕೆರೆಯನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಲು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಇದಕ್ಕೂ ಸಹ ಅಗತ್ಯ ಅನುದಾನ ನೀಡಿದ್ದು, ಇನ್ನೇನು ನೂತನ ಯೋಜನೆ ಜಾರಿಯಾಗಬೇಕಾಗಿದೆ. ಕೆರೆಯ ಸುತ್ತ ಕಾಂಪೌಂಡ್, ಕ್ರೀಡಾ ಬೋಟಿಂಗ್, ಸಾಮಾನ್ಯ ಬೋಟಿಂಗ್ ಸೇರಿದಂತೆ ಗಾರ್ಡನ್ ಅಭಿವೃದ್ಧಿಪಡಿಸಿ ವಿಹಾರತಾಣವನ್ನಾಗಿ ಮಾಡುವ ಯೋಜನೆಯೂ ಸಹ ಇದೆ ಎನ್ನಲಾಗುತ್ತಿದೆ.ವೃತ್ತಗಳ ಅಭಿವೃದ್ಧಿಗೆ ಈಗಾಗಲೇ ನಾವು ಸಿದ್ಧವಾಗಿದ್ದೆವು. ಆದರೆ, ಹೊಸ ಮಾದರಿಯಲ್ಲಿ ಸಿಗ್ನಲ್ ರಹಿತ ವೃತ್ತ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಮುಂದಾಗಿದ್ದರಿಂದ ಹೊಸ ಮಾದರಿ ಯೋಜನೆ ಸಿದ್ಧವಾಗುತ್ತಿದೆ.

ಶ್ರೀನಿವಾಸ ಗುಪ್ತಾ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ