ಮತಗಳ್ಳತನ ವಿರುದ್ಧ ದ.ಕ. ಜಿಲ್ಲಾದ್ಯಂತ ಸಹಿ ಸಂಗ್ರಹ: ಐವನ್‌ ಡಿಸೋಜ

| Published : Oct 12 2025, 01:02 AM IST

ಮತಗಳ್ಳತನ ವಿರುದ್ಧ ದ.ಕ. ಜಿಲ್ಲಾದ್ಯಂತ ಸಹಿ ಸಂಗ್ರಹ: ಐವನ್‌ ಡಿಸೋಜ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅ.13 ಮತ್ತು 14ರಂದು ಈ ಅಭಿಯಾನ ನಡೆಯಲಿದೆ. ಅ.13ರಂದು ಸಂಜೆ 4 ಗಂಟೆಗೆ ಉರ್ವ ಜಂಕ್ಷನ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಿ ಸಹಿ ಸಂಗ್ರಹ, ಸಂಜೆ 5.30ಕ್ಕೆ ಉರ್ವ ಸ್ಟೋರ್‌, 6.30ಕ್ಕೆ ಕುದ್ರೋಳಿ, ಅ.14ರಂದು ಸಂಜೆ 3 ಗಂಟೆಗೆ ಶಕ್ತಿನಗರ, 4.30ಕ್ಕೆ ಬಿಕರ್ನಕಟ್ಟೆ, 6 ಗಂಟೆಗೆ ಕದ್ರಿ ಮಾರುಕಟ್ಟೆ ಬಳಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಐವನ್‌ ಡಿಸೋಜ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಂಗ್ರೆಸ್‌ ವರಿಷ್ಠ ನಾಯಕ ರಾಹುಲ್‌ ಗಾಂಧಿ ಕೈಗೆತ್ತಿಕೊಂಡಿರುವ ಮತಗಳ್ಳತನ ಹೋರಾಟಕ್ಕೆ ಬೆಂಬಲವಾಗಿ ದ.ಕ. ಜಿಲ್ಲೆಯಲ್ಲಿ ಬೃಹತ್‌ ಅಭಿಯಾನ ನಡೆಸಿ, ಕನಿಷ್ಠ 1.80 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ 1862 ಬೂತ್‌ಗಳಿದ್ದು, ಪ್ರತಿ ಬೂತ್‌ನಲ್ಲಿ ಕನಿಷ್ಠ 100ರಂತೆ ಸಹಿ ಸಂಗ್ರಹ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅ.13 ಮತ್ತು 14ರಂದು ಈ ಅಭಿಯಾನ ನಡೆಯಲಿದೆ. ಅ.13ರಂದು ಸಂಜೆ 4 ಗಂಟೆಗೆ ಉರ್ವ ಜಂಕ್ಷನ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಿ ಸಹಿ ಸಂಗ್ರಹ, ಸಂಜೆ 5.30ಕ್ಕೆ ಉರ್ವ ಸ್ಟೋರ್‌, 6.30ಕ್ಕೆ ಕುದ್ರೋಳಿ, ಅ.14ರಂದು ಸಂಜೆ 3 ಗಂಟೆಗೆ ಶಕ್ತಿನಗರ, 4.30ಕ್ಕೆ ಬಿಕರ್ನಕಟ್ಟೆ, 6 ಗಂಟೆಗೆ ಕದ್ರಿ ಮಾರುಕಟ್ಟೆ ಬಳಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಐವನ್‌ ಡಿಸೋಜ ಹೇಳಿದರು.ದ.ಕ.ದಲ್ಲೂ ಮತಗಳ್ಳತನ!:

ದ.ಕ.ದಲ್ಲೂ ಮತಗಳ್ಳತನ ನಮ್ಮ ಅರಿವಿಗೆ ಬಂದಿದೆ. ಕೆಲವೆಡೆ ಒಂದೇ ಮನೆ ನಂಬ್ರದಲ್ಲಿ ಹೊರ ಜಿಲ್ಲೆ- ರಾಜ್ಯಗಳ 30-35ರಷ್ಟು ಮತದಾರರ ನೋಂದಣಿ ಆಗಿದೆ. ಕೆಲವು ಅಂಗಡಿ ಡೋರ್‌ ನಂಬ್ರದಲ್ಲೂ ಇಂಥದ್ದು ನಡೆದಿರುವುದು ಗಮನಕ್ಕೆ ಬಂದಿದೆ ಎಂದ ಅವರು, ಶೀಘ್ರದಲ್ಲೇ ಈ ಕುರಿತು ದಾಖಲೆಯೊಂದಿಗೆ ಬಹಿರಂಗಪಡಿಸುತ್ತೇನೆ ಎಂದರು.

ಸಾಮಾಜಿಕ ನ್ಯಾಯ ವಿರೋಧಿಗಳು:

ರಾಜ್ಯದ ಜನರ ನೈಜ ಪರಿಸ್ಥಿತಿ ಅರಿತು ಅದಕ್ಕೆ ಪೂರಕವಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ನಡೆಯುತ್ತಿರುವ ಸಮೀಕ್ಷೆಯನ್ನು ಯಶಸ್ವಿಗೊಳಿಸುವುದು ಎಲ್ಲ ಜನಪ್ರತಿನಿಧಿಗಳ ಕರ್ತವ್ಯ. ಇದಕ್ಕೆ ವಿರೋಧ ಮಾಡುವವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ದ.ಕ.ದಲ್ಲಿ ಈಗಾಗಲೇ ಶೇ.80ರಷ್ಟು ಸಮೀಕ್ಷೆ ನಡೆದಿದೆ. ಜನರು ವಿರೋಧ ಮಾಡದೆ, ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್‌ ಸಾಲ್ಯಾನ್‌, ನಾಗೇಂದ್ರ ಕುಮಾರ್‌, ಸತೀಶ್‌ ಪೆಂಗಲ್‌, ಭಾಸ್ಕರ್‌, ಪ್ರೇಮ್‌ ಬಳ್ಳಾಲ್‌ಬಾಗ್‌, ಮೀನಾ ಟೆಲ್ಲಿಸ್‌, ಚಂದ್ರಹಾಸ್‌, ಇಮ್ರಾನ್‌, ಗಣೇಶ್‌ ಇದ್ದರು.