ಮಾದಕ ವ್ಯಸನ ಮುಕ್ತ ಭಾರತಕ್ಕಾಗಿ ಸಹಿ ಸಂಗ್ರಹ ಅಭಿಯಾನ

| Published : Jan 08 2024, 01:45 AM IST

ಸಾರಾಂಶ

ಉತ್ತಮ ಭವಿಷ್ಯ ಕಟ್ಟಿಕೊಂಡು ಪಾಲಕರು, ಸಮಾಜದ ಬೆನ್ನೆಲುಬಾಗಬೇಕಿದ್ದ ಯುವಕ ಯುವತಿಯರು ಮಾದಕ ವಸ್ತುವಿನ ಪಾಲಾಗಿ ಮುಂದೊಂದು ದಿನ ಕುಟುಂಬಕ್ಕೆ,ಸಮಾಜಕ್ಕೆ ಹೊರೆಯಾಗುವ ಆತಂಕ ಕಾಡುತ್ತಿದೆ.

ಶಿರಸಿ: ಶಿರಸಿ ನಗರ ಪೊಲೀಸ್ ಠಾಣೆ ಮತ್ತು ಶಿರಸಿ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧ ಮತ್ತು ವ್ಯಸನದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾಥಾ ಮತ್ತು ಮಾದಕ ವ್ಯಸನ ಮುಕ್ತ ಭಾರತಕ್ಕಾಗಿ ಸಹಿ ಸಂಗ್ರಹ ಅಭಿಯಾನ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದಲ್ಲಿ ಶಿರಸಿ ತಾಲೂಕಿನ ಪತ್ರಕರ್ತರು, ನಗರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳು, ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿಧ್ಯಾರ್ಥಿಗಳು, ಭಾಗವಹಿಸಿದ್ದರು.

ಭಿತ್ತಿ ಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತಾ ಸಹಿ ಸಂಗ್ರಹ ಮತ್ತು ಜಾಥಾ ಅಭಿಯಾನವು ನಗರದ ಬಿಡ್ಕಿ ಸರ್ಕಲ್ ದಿಂದ ಪ್ರಾರಂಭಗೊಂಡು ಡ್ರೈವರ್ ಕಟ್ಟೆ-ಶಿವಾಜಿ ಚೌಕ್ -ಬಿಡ್ಕಿ-ಸಿಪಿ ಬಜಾರ-ಬಾರ್ಕುರ್ ಚೌಕ್‌-ವಾಜಪೇಯಿ ವ್ರತ್ತ -ನಟರಾಜ್ ರಸ್ತೆ ಮೂಲಕ ಸಂಚರಿಸಿ ಹಳೆ ಬಸ್ ನಿಲ್ದಾಣದ ಹತ್ತಿರ ಮುಕ್ತಾಯ ಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿವೈಎಸ್ ಪಿ ಗಣೇಶ ಕೆ ಎಲ್‌., ಮಾದಕ ದೃವ್ಯಕ್ಕೆ ಒಳಗಾಗಿ ಯುವ ಪೀಳಿಗೆ ಹಾಳಾಗುತ್ತಿದೆ. ಯುವ ಜನತೆ ಈ ದುಶ್ಚಟಗಳಿಂದ ದೂರ ಇರಬೇಕೆಂದರೆ ಅವರಿಗೆ ಸೂಕ್ತ ಮಾಹಿತಿ ನೀಡಿ ಎಚ್ಚಿರಸಬೇಕಾಗಿದೆ ಎಂದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ಮಾತನಾಡಿ, ಪೊಲೀಸ್ ಇಲಾಖೆ ಮಾದಕ ವಸ್ತುಗಳ ಸೇವನೆ, ಸಾಗಾಟ ತಂಡದ ಮೇಲೆ ದಾಳಿ ನಡೆಸಿದಾಗ ಇನ್ನೂ ಹದಿಹರೆಯದಲ್ಲಿರುವವರೇ ಸಿಕ್ಕಿಬೀಳುತ್ತಿದ್ದಾರೆ. ಉತ್ತಮ ಭವಿಷ್ಯ ಕಟ್ಟಿಕೊಂಡು ಪಾಲಕರು, ಸಮಾಜದ ಬೆನ್ನೆಲುಬಾಗಬೇಕಿದ್ದ ಯುವಕ ಯುವತಿಯರು ಮಾದಕ ವಸ್ತುವಿನ ಪಾಲಾಗಿ ಮುಂದೊಂದು ದಿನ ಕುಟುಂಬಕ್ಕೆ,ಸಮಾಜಕ್ಕೆ ಹೊರೆಯಾಗುವ ಆತಂಕ ಕಾಡುತ್ತಿದೆ.ಇದನ್ನು ತಪ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಿಪಿಐ ರಾಮಚಂದ್ರ ನಾಯಕ, ನಗರ ಠಾಣೆ ಪಿಎಸ್ಐ ನಾಗಪ್ಪ ಬಿ, ಮಹಾಂತೇಶ ಕುಂಬಾರ, ಪತ್ರಕರ್ತರಾದ ಪ್ರದೀಪ ಶೆಟ್ಟಿ, ನರಸಿಂಹ ಅಡಿ, ಮಂಜುನಾಥ ಸಾಯೀಮನೆ, ರಾಜೇಂದ್ರ ಹೆಗಡೆ, ಮಂಜುನಾಥ ಈರ್ಗೊಪ್ಪ, ಹುಲಿಗೇಶ್, ಗಣೇಶ ಆಚಾರ್ಯ, ಗುರುಪ್ರಸಾದ ಶಾಸ್ತ್ರಿ ಇತರರಿದ್ದರು.