ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ನಿರ್ಮಾಣ ಕಾಮಗಾರಿಗಳ ಉತ್ಪಾದನಾ ಸಂಸ್ಥೆಯಾದ ಇಟಲಿ ಮೂಲದ ಮೀರ್ ಗ್ರೂಪ್ ಜೊತೆ ಮಂಗಳೂರಿನ ಎಸ್‌ಇಝಡ್ ಕಂಪನಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಮೀರ್ ಗ್ರೂಪ್ ಮಂಗಳೂರಿನಲ್ಲಿ 10 ಎಕರೆ ಪ್ರದೇಶದಲ್ಲಿ 1,500 ಸಾವಿರ ಕೋಟಿ ರು. ಹೂಡಿಕೆ ಮಾಡಲಿದ್ದು, ಸುಮಾರು ಎರಡು ವರ್ಷದಲ್ಲಿ ಮೀರ್ ಗ್ರೂಪ್‌ನ ಪರಿಸರಸ್ನೇಹಿ ಕೈಗಾರಿಕೆ ಮಂಗಳೂರಲ್ಲಿ ಆರಂಭಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತಿಯಲ್ಲಿ ಎಸ್‌ಇಝಡ್ ಸಿಇಒ ಸೂರ್ಯನಾರಾಯಣ ಮತ್ತು ಮಿರ್ ಗ್ರೂಪ್ ಸಿಇಒ ರಫೇಲೆ ಮರಾಝೊ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಇದು ಒಂದು ವಿದೇಶಿ ನೇರ ಹೂಡಿಕೆಯಾಗಿದ್ದು ಮೊದಲ ಹಂತದಲ್ಲಿ ಅವರು ಎಸ್‌ಇಝಡ್‌ನಲ್ಲಿ 10 ಎಕರೆ ಜಾಗ ಕೇಳಿದ್ದು, ಮುಂದೆ ಹಂತ ಹಂತವಾಗಿ ಉದ್ಯಮ ಇನ್ನಷ್ಟು ವಿಸ್ತರಣೆ ಮಾಡುವ ನಿರೀಕ್ಷೆ ಇದೆ. ಮುಂದಿನ ಎರಡು ವರ್ಷಗಳಲ್ಲಿ ಕಂಪನಿ ಕಾರ್ಯಾರಂಭಿಸುವ ಸಾಧ್ಯತೆಗಳಿವೆ ಎಂದರು.ಎಂಎಸ್‌ಇಝಡ್ ಸಿಇಒ ಸೂರ್ಯನಾರಾಯಣ ಮಾತನಾಡಿ, ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಮೂಲಸೌಕರ್ಯ, ಮಂಗಳೂರಿನ ಬಂದರು ಸೌಲಭ್ಯ ಮತ್ತಿತರ ಮಹತ್ವವನ್ನು ಅರಿತುಕೊಂಡಿರುವ ಮೀರ್ ಗ್ರೂಪ್ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಿರ್ಮಿಸುವ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಲಿದೆ ಎಂದರು.ಮೀರ್ ಗ್ರೂಪ್ ಸಿಇಒ ರಫೇಲೆ ಮಾತನಾಡಿ, ಮಂಗಳೂರು ನಮಗೊಂದು ಮುಖ್ಯವಾದ ಸ್ಥಳವಾಗಿದ್ದು, ಇಲ್ಲಿ ನಮ್ಮ ಉತ್ಪಾದನಾ ಘಟಕ ಸ್ಥಾಪಿಸಲಿದ್ದೇವೆ. ಈ ಮೂಲಕ ಮಧ್ಯಪ್ರಾಚ್ಯ, ಆಫ್ರಿಕನ್ ರಾಷ್ಟ್ರಗಳಿಗೆ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ ಎಂದು ಹೇಳಿದರು.
‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ಮೊದಲ ಹೂಡಿಕೆ ಲೋಕಸಭಾ ಚುನಾವಣೆ ವೇಳೆ ನಾನು ಘೋಷಿಸಿದ ‘ಬ್ಯಾಕ್ ಟು ಊರು’ ಎನ್ನುವ ಪರಿಕಲ್ಪನೆಯಲ್ಲಿ ಇದು ಮೊದಲ ಯೋಜನೆಯಾಗಿದೆ. ಮಂಗಳೂರು ಮೂಲದ ನಿತಿಕ್ ರತ್ನಾಕರ್ ಅವರು ಮೀರ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ವಿದೇಶದಲ್ಲಿದ್ದರೂ ತಾಯ್ನಾಡಿನಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಇದನ್ನೇ ಬ್ಯಾಕ್ ಟು ಊರು ಪರಿಕಲ್ಪನೆಯಡಿ ಹೂಡಿಕೆಗೆ ಉತ್ತೇಜಿಸಲಾಗಿದೆ. ಈ ಮೂಲಕ 1,500 ಕೋಟಿ ರು.ಗಳಷ್ಟು ಹೂಡಿಕೆಯಾಗಲಿದ್ದು, 500-600 ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮಂಗಳೂರಿಗ ನಿತಿಕ್ ರತ್ನಾಕರ್ ಮಾತನಾಡಿ, ಮಂಗಳೂರನ್ನು ಹಸಿರು ಇಂಧನದ ಕೇಂದ್ರವನ್ನಾಗಿ ಮಾಡುವ ಗುರಿ ಇದೆ. ಇದು ಕೇವಲ ದೇಶಕ್ಕಷ್ಟೇ ಅಲ್ಲದೆ ಜಾಗತಿಕ ಮಾರುಕಟ್ಟೆಗೂ ನೆರವಾಗಲಿದೆ ಎಂದರು.
-----------------