ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ ಇಲ್ಲಿನ ಹೈಕಶಿ ಸಂಸ್ಥೆಯಡಿಯಲ್ಲಿರುವ ಮಹಾದೇವಪ್ಪ ರಾಂಪೂರೆ ವೈದ್ಯ ವಿದ್ಯಾಲಯದಲ್ಲಿ ನಡೆದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಗುಳುಂ ಮಾಡಿರುವ ವಿಷಯದ ಸ್ಟೈಫಂಡ್ ಹಗರಣದ ವಿರುದ್ಧ ಹೈಕಶಿ ಸಂಸ್ಥೆಯ ಹಿಂದಿನ ಅಧ್ಯಕ್ಷ ಡಾ. ಭೀಮಾಶಂಕರ ಬಿಲುಗಂದಿ ವಿರುದ್ಧ ಕೊನೆಗೂ ಪ್ರಥಮ ವರ್ತಮಾನ ವರದಿ ದಾಖಲಾಗಿದೆ.
ಬಹುಕೋಟಿ ರುಪಾಯಿ ಗುಳುಂ ಮಾಡಿರುವ ಶಂಕೆ- ಅನುಮಾನಗಳಿರುವ ಈ ಸ್ಟೈಫಂಡ್ ಹಗರಣದಲ್ಲಿ ಕೊನೆಗೂ ಎಫ್‌ಐಆರ್ ದಾಖಲಾಗಿರೋದು ಅತೀ ಮಹತ್ವದ ಬೆಳವಣಿಗೆಯಾಗಿ ಗಮನ ಸೆಳೆದಿದೆ.ಇಲ್ಲಿನ ಬ್ರಹ್ಮಪೂರ ನಿವಸಿ, ಯುವ ವಕೀಲರಾದ ವಿನೋದ ಕುಮಾರ್ ಜೆನ್ವರಿವರು ಈ ಬಹುಕೋಟಿ ಹಗರಣದಲ್ಲಿ ಎಲ್ಲಾ ದಾಖಲಾತಿ, ಸಾಕ್ಷಿ ಪುರಾವೆಗಳ ಸಮೇತ ನೀಡಿರುವ ದೂರಿನ ಅನ್ವಯ ಕಲಬುರಗಿ ನಗರ ಸೆನ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದೆ.
ಹೈಕಶಿ ಸಂಸ್ಥೆ ಅಧ್ಯಕ್ಷ ಡಾ. ಭೀಮಾಶಂಕರ ಬಿಲುಗಂದಿ ಜೊತೆಗೇ ರಾಂಪೂರೆ ವೈದ್ಯ ವಿದ್ಯಾಲಯದ ಪ್ರಾಚಾರ್ಯ ಡೀನ್ ಡಾ. ಎಸ್ ಎಂ ಪಾಟೀಲ್, ಕಾಲೇಜಿನ ಅಕೌಂಟೆಂಟ್ ಸುಭಾಷ ಜಗನ್ನಾಥ, ರಾಂಪೂರೆ ಕಾಲೇಜಿನ ಕೆನರಾ ಬ್ಯಾಂಕ್ ಮೆನೆಜರ್ ಇವರೆಲ್ಲರೂ ಕೂಡಿಕೊಂಡು 01- 01- 2018 ರಿಂದ 01- 03- 2024 ಅವಧಿ 282 ವಿದ್ಯಾರ್ಥಿಗಳ 81.21 ಕೋಟಿ ರುಪಾಯಿ ಹಗರಣ ಮಾಡಿದ್ದಾರೆ.ಕಾಲೇಜಿನ 282 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿಂದ ಚೆಕ್‌ಗಳ ಮೂಲಕ ಮುಂಗಡವಾಗಿ ವಿದ್ಯಾರ್ಥಿಗಳಿಂದ ಸಹಿ ಪಡೆದು ಅವರ ಗಮನಕ್ಕೆ ಬಾರದಂತೆ ಕಳ್ಳ ದಾರಿಯಲ್ಲಿ, ಅಪ್ರಾಮಾಣಿಕವಾಗಿ ಹಣ ಪಡೆದುಕೊಂಡು ಬಳಸಿಕೊಂಡಿದ್ದಾರೆ, ಇವರೆಲ್ಲ ಮೋಸ, ವಂಚನೆ ಮಾಡಿದ್ದು ಎಲ್ಲರ ವಿರುದ್ಧ ಸೂಕ್ತ ಕನೂನು ಕ್ರಮ ಜರುಗಸುವಂತೆ ವಿನೋದ ಕುಮಾರ್ ದೂರಿನಲ್ಲಿ ಕೋರಿದ್ದಾರೆ.
ಹೈಕಶಿ ಸಂಸ್ಥೆಯಡಿಯಲ್ಲಿರುವ ರಾಂಪೂರೆ ವೈದ್ಯ ವಿದ್ಯಾಲಯ ಕಲ್ಯಾಣ ನಾಡಿನ ಪ್ರತಿಷ್ಠೆಯ ಕಾಲೇಜಾಗಿರೋದರಿಂದ ಇದೀಗ ಈ ಸಂಸ್ಥೆಯಲ್ಲಿನ ಹಗರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಗಮನ ಸೆಳೆದಿದೆ.ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಗಳಿಗೆ ಮೆಡಿಕ್ಲ್ ಕೌನ್ಸಿಲ್ ಆಫ್ ಇಂಡಿಯಾ ಷರತ್ತಿನಂತೆ, ನಿಯಮಗಳಂತೆ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸರಕಾರ ನೀಡುವ 40ರಿಂದ 55 ಸಾವಿರ ರು. ಸ್ಟೈಫಂಡ್ ಕಾಲೇಜು ಮಕ್ಕಳಿಗೆ ಕೊಡಲೇಬೇಕು. ಇದು ಕಡ್ಡಾಯ ಕೂಡಾ ಆಗಿದ್ದರೂ ರಾಂಪೂರೆ ಕಾಲೇಜಲ್ಲಿ ಈ ಹಣವನ್ನೇ ವಿದ್ಯಾರ್ಥಿಗಳಿಗೆ, ಮುಂಗಡ ಪಡೆದ ಚೆಕ್‌ಗಳನ್ನು ಆಡಳಿತದವರೇ ಬ್ಯಾಂಕ್‌ಗೆ ಹಾಕಿ ನಗದೀಕರಣ ಮಾಡಿಕೊಂಡು, ದನ್ನು ವಿದ್ಯಾರ್ಥಿಗಳಿಗೆ ನೀಡದೇ ಗುಳುಂ ಮಾಡಿಕೊಂಡಿರೋದರಿಂದಲೇ ನೊಂದ ವಿದ್ಯಾರ್ಥಿಗಳು ಹೋರಾಟ ನಡೆಸಿ ಗಮನ ಸೆಳೆದಿದ್ದರು.
ಹೈಕಶಿ ಸಂಸ್ಥೆಯ ಹಿಂದಿನ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ವಿರುದ್ಧ ಕೇಳಿ ಬಂದಿದ್ದ ಕೋಟ್ಯಂತರ ರು. ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಇದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ವಿದ್ಯಾರ್ಥಿಗಳು ಹೋರಾಟ ಮಾಡಿ, ಕಮಿಷನರ್ ಕಛೇರಿಗೆ ಬಂದು ಪ್ರಕರಣ ದಾಖಲಿಸಲು ಆಗ್ರಹಿಸಿದ್ದರೂ ಕೂಡಾ ತಿಂಗಳಾದರೂ ಪ್ರಕರಣ ದಾಖಲಾಗಿರಲಿಲ್ಲ.ಏತನ್ಮಧ್ಯೆ ಹೈಕಶಿ ಸಂಸ್ಥೆಗೆ ಚುನಾವಣೆ ನಡೆದು ಹಳೆ ಆಡಳಿತ ಮಂಡಳಿಯ ಬದಲು ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಎಂಎಲ್‌ಸಿ ಶಶಿಲ್ ನಮೋಶಿ ಅಧ್ಯಕ್ಷತೆ, ರಾಜಾ ಬೀಮಳ್ಳಿ ಉಪಾಧ್ಯಕ್ಷತೆಯಲ್ಲಿ ಹೊಸ ಆಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಮರು ದಿನವೇ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಹೈಕಶಿ ಸಂಸ್ಥೆ ಮಾಜಿ ಅದ್ಯಕ್ಷ ಭೀಮಾಶಂಕರ ಬಿಲಗುಂದಿ , ಪ್ರಿನ್ಸಿಪಾಲ್ ಅಕೌಂಟೆಂಟ್, ಹಾಗೂ ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ದ ಎಫ್ಐಆರ್ ದಾಖಲಾಗಿ ಮತ್ತೆ ರಾಂಪೂರೆ ವೈದ್ಯ ಕಾಲೇಜಿನಲ್ಲಿ ನಡೆದಿದೆ ನ್ನಲಾಗಿರುವ ವಿದ್ಯಾರ್ಥಿಗಳ ಬಹುತಕೋಟಿ ಸ್ಟೈಫಂಡ್ ಹಣ ಗುಳುಂ ಸ್ವಾಹಾ ಮಾಡಿರುವ ಹಗರಣ ಮತ್ತೊಂದು ಸುತ್ತು ಸಾರ್ವಜನಿಕವಾಗಿ ಚರ್ಚೆಯ ಮುನ್ನೆಲೆಗೆ ಬಂದು ಗಮನ ಸೆಳೆದಿದೆ.