ಕೃಷಿ ಆಧುನಿಕರಣದಲ್ಲಿ ಗಮನಾರ್ಹ ಪ್ರಗತಿ

| Published : Feb 25 2025, 12:46 AM IST

ಕೃಷಿ ಆಧುನಿಕರಣದಲ್ಲಿ ಗಮನಾರ್ಹ ಪ್ರಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಇಂದು ಕೃಷಿಯಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು, ರೈತರಿಗೆ ಆದಾಯ ದ್ವಿಗುಣಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಸದಾ ಸನ್ನದ್ಧರಾಗಿರಬೇಕು ಎಂದು ನಬಾರ್ಡ್ ನಿವೃತ್ತ ಮಹಾಪ್ರಬಂಧಕ ಡಾ.ಆರ್.ಎಂ.ಕಮ್ಮೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಇಂದು ಕೃಷಿಯಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು, ರೈತರಿಗೆ ಆದಾಯ ದ್ವಿಗುಣಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಸದಾ ಸನ್ನದ್ಧರಾಗಿರಬೇಕು ಎಂದು ನಬಾರ್ಡ್ ನಿವೃತ್ತ ಮಹಾಪ್ರಬಂಧಕ ಡಾ.ಆರ್.ಎಂ.ಕಮ್ಮೂರ ಹೇಳಿದರು.

ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಇಂದಿನ ಭಾರತದಲ್ಲಿ ಕೃಷಿ ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಅವಕಾಶಗಳು ಕುರಿತ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತವು ತನ್ನ ಕೃಷಿ ಕ್ಷೇತ್ರವನ್ನು ಆಧುನಿಕರಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಕೃಷಿ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ರೈತರು ಸುಸ್ಥಿರ ಪದ್ಧತಿಗಳು ಮತ್ತು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದರು.ಸಣ್ಣ ಭೂ ಹಿಡುವಳಿಗಳು ಸೀಮಿತ ಭೂಮಿಯಿಂದಾಗಿ, ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಅನೇಕ ರೈತರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಕೆ, ನಿಖರ ಕೃಷಿ ತಂತ್ರಗಳು ಮತ್ತು ತಂತ್ರಜ್ಞಾನ ಹೆಚ್ಚಿಸುವುದು, ಸಾಂಪ್ರದಾಯಿಕ ಬೆಳೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಬೆಳೆ ವೈವಿಧ್ಯೀಕರಣ ಅಳವಡಿಸಿಕೊಳ್ಳುವತ್ತ ಮುಂದೆ ಸಾಗಬೇಕಾಗಿದೆ. ರೈತರು ಬೆಳೆದ ಬೆಳೆಗೆ ಯೋಗ್ಯ ಮಾರುಕಟ್ಟೆಯನ್ನು ಒದಗಿಸಬೇಕಾಗಿರುವುದು ಇಂದಿನ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಜಿ.ಸಿ.ಮಾಟೊಳ್ಳಿ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಾಗಲು ಈಗಿನಿಂದಲೇ ಪ್ರಯತ್ನಿಸಬೇಕು ಎಂದರು.

ಡಾ.ಅಶೋಕ ಕುಲಕರ್ಣಿ ಮಾತನಾಡಿ, ಕೃಷಿ ನವೋದ್ಯಮ ಬೆಳವಣಿಗೆಗಾಗಿ ಕೃಷಿ ವಿದ್ಯಾರ್ಥಿಗಳು ಓದಿನ ಜೊತೆಗೆ, ಕೌಶಲವನ್ನು ಅಳವಡಿಸಿಕೊಳ್ಳಬೇಕು ಎಂದರು.

ಪ್ರಭಾರ ಡೀನ್ ಡಾ.ಎಂ.ಎಂ.ಜಮಾದಾರ್ ಅಧ್ಯಕ್ಷತೆ ವಹಿಸಿದ್ದರು. ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ.ಎಸ್ .ಬಿ.ಜಗ್ಗಿನವರ, ಡಾ.ಎನ್.ಡಿ.ಸುನಿತಾ, ಡಾ.ಎಸ್.ಜಿ.ಅಸ್ಕಿ, ಡಾ.ಮಿಲಿಂದ್ ಪೋತದಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ವೀರೇಶ್ ಹವಾಲ್ದಾರ್, ಕಿಶೋರ್ ಹೆಗಡೆ, ಶಿವರಾಜ್ ಮೇಟಿ, ಅರುಣ್, ಅಮೂಲ್ಯ, ಸೃಷ್ಟಿ ಸೇರಿ ಹಲವರು ಇದ್ದರು.