ಶಿವಮೊಗ್ಗದ ಮೃತ ಮಂಜುನಾಥ್‌ ಮನೆಯಲ್ಲಿ ನೀರವಮೌನ

| Published : Apr 24 2025, 12:01 AM IST

ಶಿವಮೊಗ್ಗದ ಮೃತ ಮಂಜುನಾಥ್‌ ಮನೆಯಲ್ಲಿ ನೀರವಮೌನ
Share this Article
  • FB
  • TW
  • Linkdin
  • Email

ಸಾರಾಂಶ

ಪಿಯುಸಿಯಲ್ಲಿ ಮಗನಿಗೆ ಶೇ. 97 ಅಂಕ ಲಭಿಸಿದ್ದನ್ನು ಸಂಭ್ರಮಾಚರಿಸಲು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಕುಟುಂಬದಲ್ಲಿ ಈಗ ನೀರವಮೌನ ಆವರಿಸಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಮನೆಯ ಯಾಜಮಾನನನ್ನು ಕಳೆದುಕೊಂಡು ಕುಟುಂಬ ದುಃಖದಲ್ಲಿದೆ.

ಪಿಯುಸಿಯಲ್ಲಿ ಮಗನಿಗೆ ಶೇ.97 ಅಂಕ ಬಂದಿದ್ದಕ್ಕೆ ಸಂಭ್ರಮಾಚರಿಸಲು ಕಾಶ್ಮೀರಕ್ಕೆ ತೆರಳಿದ್ದ ಉದ್ಯಮಿ ಕುಟುಂಬ

ಕಾಶ್ಮೀರ ಪ್ರವಾಸ ಎಂದ ಕೂಡಲೇ ಬೇಡ ಅಂದಿದ್ದೆ: ತಾಯಿ ಸುಮತಿ । ಕಾಶ್ಮೀಕ್ಕೆ ನಾನೇ ಬುಕ್‌ ಮಾಡಿ ಕೊಟ್ಟಿದ್ದೆ: ಸ್ನೇಹಿತ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಿಯುಸಿಯಲ್ಲಿ ಮಗನಿಗೆ ಶೇ. 97 ಅಂಕ ಲಭಿಸಿದ್ದನ್ನು ಸಂಭ್ರಮಾಚರಿಸಲು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದ ಕುಟುಂಬದಲ್ಲಿ ಈಗ ನೀರವಮೌನ ಆವರಿಸಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಮನೆಯ ಯಾಜಮಾನನನ್ನು ಕಳೆದುಕೊಂಡು ಕುಟುಂಬ ದುಃಖದಲ್ಲಿದೆ.

ಶಿವಮೊಗ್ಗ ನಗರದ ವಿಜಯನಗರ ಬಡಾವಣೆಯ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಅವರ ಮಗ ಅಭಿಜೇಯ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದರು. ಇದರ ಸಂಭ್ರಮಾಚರಣೆಗೆ ಪತ್ನಿ ಪಲ್ಲವಿ, ಪುತ್ರ ಅಭಿಜೇಯ ಜೊತೆ ಏ.19 ರಂದು ಟೂರಿಸ್ಟ್ ಏಜೆನ್ಸಿ ಮೂಲಕ ಶಿವಮೊಗ್ಗದಿಂದ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿದ್ದರು. ಏ.24 ರಂದು ವಾಪಾಸ್ ಬರಬೇಕಿತ್ತು. ಆದರೆ ಪ್ರವಾಸದ ವೇಳೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಂಗಡಿಯೊಂದರ ಬಳಿ ತಮ್ಮ ಪುತ್ರನ ಬಯಕೆಯಂತೆ ತಿನಿಸು ಖರೀದಿಸಲು ಹೋದ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ. ಈ ವೇಳೆ ಮಂಜುನಾಥ್ ಅವರ ತಲೆಗೆ ಗುಂಡು ತಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಜುನಾಥ್‌ ರಾವ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಬುಧವಾರ ಬೆಳಗಿನಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ಬಲ್ಕೀಶ್ ಬಾನು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮೊದಲಾದ ರಾಜಕೀಯ ಮುಖಂಡರು, ಅಧಿಕಾರಿಗಳು ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಜಮ್ಮು ಕಾಶ್ಮೀರದಲ್ಲಿ ಆಂತರಿಕ ಭದ್ರತೆಯ ಜೊತೆಗೆ ಪ್ರವಾಸಿಗರ ಭದ್ರತೆ ನೋಡಿಕೊಳ್ಳಬೇಕು. ನಮ್ಮ ರಾಜ್ಯದ ಇಬ್ಬರು ತೀರಿಕೊಂಡಿದ್ದಾರೆ. ಕಣ್ಣೆದುರು ಇಂತಹ ಘಟನೆ ನಡೆದಾಗ ಅಲ್ಲಿ ಗೊಂದಲ, ಆತಂಕ ಇರುತ್ತದೆ. ಈಗಿರುವ ಮಾಹಿತಿ ಪ್ರಕಾರ ಗುರುವಾರ ಬೆಳಿಗ್ಗೆ ಪಾರ್ಥಿವ ಶರೀರ ಶಿವಮೊಗ್ಗ ತಲುಪಲಿದೆ ಎಂದರು.

ಇಂತಹ ಘಟನೆಗಳು ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ನಾವೆಲ್ಲರೂ ಕುಟುಂಬದವರ ದುಃಖದಲ್ಲಿ ಜೊತೆಗಿದ್ದೇವೆ. ಸಚಿವ ಸಂತೋಷ್ ಲಾಡ್ ಜೊತೆ ಮಾತನಾಡಿದ್ದು, ಕುಟುಂಬಸ್ಥರ ಜೊತೆ ನೀವು ಇರಿ, ಪಾರ್ಥಿವ ಶರೀರವನ್ನು ಕಳಿಸುವ ವ್ಯವಸ್ಥೆ ನಾವು ಮಾಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಉಗ್ರ ಗ್ರಾಮಿಗಳ ಕೃತ್ಯವನ್ನು ಒಟ್ಟಾಗಿ ವಿರೋಧಿಸಬೇಕು.ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಜೊತೆಗೆ ನಾವೆಲ್ಲರೂ ನಿಲ್ಲಬೇಕು. ಮಂಜುನಾಥ್ ರಾವ್ ಕುಟುಂಬದವರು ತೀರ್ಥಹಳ್ಳಿಯಲ್ಲಿ ಕೂಡ ಕೆಲಸ ಮಾಡಿದ್ದಾರೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈ ಘಟನೆಯಿಂದ ಎಲ್ಲರಿಗೂ ನೋವು ಆಗಿದೆ. ಈಗಾಗಲೇ ರಾಜ್ಯದ ಇಬ್ಬರು ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಭಯೋತ್ಪಾದಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಮೃದು ಧೋರಣೆ ಈ ಘಟನೆಗೆ ಕಾರಣ. ಕಾಶ್ಮೀರದಲ್ಲಿ ಕಠಿಣ ಕ್ರಮಕ್ಕೆ ಎರಡೂ ಸರ್ಕಾರ ಮುಂದಾಗಬೇಕು. ಜಮ್ಮು ಕಾಶ್ಮೀರದ ಪೂರ್ಣ ಅಧಿಕಾರ ಕೇಂದ್ರ ಕೈಯಲ್ಲಿ ಇದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಅಲ್ಲಿ ಇಲ್ಲ ಎಂದರು.

ಉಗ್ರರ ದಾಳಿಗೆ ಮಂಜುನಾಥ್ ಬಲಿ ಹಿನ್ನಲೆ ಶಿವಮೊಗ್ಗ ನಗರದ ವಿಜಯನಗರದಲ್ಲಿರುವ ಮಂಜುನಾಥ್ ಮನೆಗೆ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಭೇಟಿ ನೀಡಿ ಮಂಜುನಾಥ್ ಪೋಷಕರ ಜೊತೆ ಮಾತನಾಡಿದರು. ಈ ಸಂದರ್ಭ ರವಿಕಾಂತೇಗೌಡ ಜೊತೆ ಎಸ್ಪಿ ಜಿ.ಕೆ.ಮಿಥುನ್ ಇದ್ದರು.

ಸಹೋದರಿ ಕಣ್ಣೀರು

ಮಂಜುನಾಥ್ ನನ್ನ ದೊಡ್ಡಮ್ಮನ ಮಗ. ಅವನಿಗೆ ಗಾಯ ಆಗಿದೆ ಎಂದಷ್ಟೇ ದೊಡ್ಡಮ್ಮನಿಗೆ ಹೇಳಿದ್ದೇನೆ. ಮನೆಗೆ ಎಲ್ಲರೂ ಬಂದರೆ ಪ್ಯಾನಿಕ್ ಆಗುತ್ತಾರೆ ಎಂದು ತಿಳಿದು ಅವರ ಮನೆಗೆ ಬಂದಿದ್ದೇನೆ. ಮಗ ಪಿಯುಸಿಯಲ್ಲಿ ಶೇ.97 ಅಂಕ ಪಡೆದಿದ್ದ ಎಂಬ ಕಾರಣಕ್ಕೆ ಪ್ರವಾಸ ಹೋಗಿದ್ದರು. ಅವರು ಖುಷಿಯಿಂದಲೇ ವಾಪಸ್ ಬರುತ್ತಾರೆ ಎಂದು ನಿರೀಕ್ಷಿಸಿದ್ದೆವು ಎಂದು ಮಂಜುನಾಥ್ ಸಹೋದರಿ ದೀಪಾ ಕಣ್ಣೀರಾದರು.

ಪಲ್ಲವಿಗೆ ಬೆಳಿಗ್ಗೆ ಪೋನ್ ಕರೆ ಮಾಡಿ ಧೈರ್ಯ ಹೇಳಿದ್ದೇನೆ. ಕಾಶ್ಮೀರದ ಪ್ರವಾಸದ ಬಗ್ಗೆ ಅಣ್ಣ ಮಂಜುನಾಥ್ ಜೊತೆ ಮಾತನಾಡಿದ್ದೆ. ಕಣ್ಣೆದುರುಗಡೆ ನಡೆದಿರುವ ಘಟನೆ ನೋಡಿ ಎಷ್ಟು ತಾನೆ ಧೈರ್ಯ ತೆಗೆದುಕೊಳ್ಳುವುದಕ್ಕೆ ಆಗುತ್ತೆ ಎಂದು ಅಳಲು ತೋಡಿಕೊಂಡರು.

ಅಂತಿಮ ಸಂಸ್ಕಾರಕ್ಕೆ ಸಿದ್ದತೆ

ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಪಾರ್ಥಿವ ಶರೀರ ಬೆಂಗಳೂರಿಗೆ ತಡರಾತ್ರಿ ತಲುಪಲಿದೆ. ನಂತರ ಆ್ಯಂಬುಲೆನ್ಸ್‌ನಲ್ಲಿ ರಸ್ತೆ ಮೂಲಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತರಲಾಗುತ್ತದೆ. ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗ ತಲುಪುವ ನಿರೀಕ್ಷೆ ಇದೆ.

ಗುರುವಾರ ಮಧ್ಯಾಹ್ನ 12.30ಕ್ಕೆ ಅಂತ್ಯ ಸಂಸ್ಕಾರ ವಿಧಿವಿಧಾನ ಆರಂಭಗೊಳ್ಳಲಿದ್ದು, ಜಿಲ್ಲಾಡಳಿತ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಮಂಜುನಾಥ್ ಅವರ ನಿವಾಸದ ಎದುರು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಇದಾದ ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಮಂಜುನಾಥ್ ಅವರ ಅಂತ್ಯ ಸಂಸ್ಕಾರ ನಗರದ ತುಂಗಾ ನದಿ ಬಳಿಯ ರೋಟರಿ ಚಿತಾಗಾರದಲ್ಲಿ ನಡೆಯಲಿದೆ. ಇದೇ ವೇಳೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾಹಿತಿ ನೀಡಿದರು.

ಅಳಿಯ ನಮ್ಮನ್ನು ಬಿಟ್ಟು ಹೋಗಿದ್ದಾರೆ ಅಂತ ಗೊತ್ತೇ ಇರಲಿಲ್ಲ

ಅಳಿಯ ನಮ್ಮನ್ನು ಬಿಟ್ಟು ಹೋಗಿದ್ದಾರೆ ಅಂತ ಶಿವಮೊಗ್ಗಕ್ಕೆ ಬಂದ ಮೇಲೆಯೇ ನಮಗೆ ಗೊತ್ತಾಗಿದ್ದು ಎಂದು ಮಂಜುನಾಥ್ ಅತ್ತೆ ಗೀತಾ ಕಣ್ಣೀರಿಟ್ಟರು.

ನಮಗೆ ವಿಷಯ ಗೊತ್ತೇ ಇಲ್ಲ ವಿಡಿಯೋ ನೋಡುವುದಕ್ಕೆ ಬಿಡಲಿಲ್ಲ. ಕಾಶ್ಮೀರದ ಪ್ರವಾಸದ ಬಗ್ಗೆ ಮಗಳು ಪಲ್ಲವಿ ಫೋನ್ ಮಾಡಿ ಮಾಹಿತಿ ಕೊಟ್ಟಿದ್ಲು. ನಿನ್ನೆ ನನ್ನ ಸೊಸೆ ಕಾಶ್ಮೀರದಲ್ಲಿ ಅಟ್ಯಾಕ್ ಆಗಿದೆ ಅಂತ ಹೇಳಿದಳು. ಗುಂಡಿನ ದಾಳಿ ಬಳಿಕ ನಮ್ಮ ಜೊತೆ ಪಲ್ಲವಿ ಪೋನ್ ಮಾಡಿ ಯಾರು ಇಲ್ಲಿಗೆ ಬರಬೇಡಿ, ಇಲ್ಲಿಗೆ ಬರುವುದಕ್ಕಾಗುವುದಿಲ್ಲ. ನಾವೇ ಬರುತ್ತೇವೆ ಅಂತ ಹೇಳಿದ್ದಳು ಎಂದು ಭಾವುಕರಾದರು.

ಕಾಶ್ಮೀರ ಪ್ರವಾಸ ಎಂದ ಕೂಡಲೇ ಬೇಡ ಅಂದಿದ್ದೆ

ಉಗ್ರರ ದಾಳಿಗೆ ಮೃತರಾದ ಶಿವಮೊಗ್ಗದ ಮಂಜುನಾಥ್ ರಾವ್ ತಾಯಿ ಸುಮತಿ ಮಗನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಘಟನೆ ಕೇಳಿ ಶಾಕ್ ಆಯ್ತು, ಮೊಮ್ಮಗನ ಖುಷಿಗೆ ತೆರಳಿದ್ದ ನನ್ನ ಕುಟುಂಬ ಈಗ ಮಗನನ್ನೇ ಕಳೆದುಕೊಂಡಿದೆ. ಪ್ರವಾಸ ಮುಗಿಸಿ ಗುರುವಾರ ಇಲ್ಲಿಗೆ ಬರಬೇಕಿತ್ತು, ಅಷ್ಟರಲ್ಲಿ ಹೀಗೆ ಆಗಿದೆ ಎಂದು ಸುಮತಿ ಕಣ್ಣೀರಿಟ್ಟರು.

ಮಂಜುನಾಥ್‌ಗೆ ಹೊರರಾಜ್ಯಗಳ ಪ್ರವಾಸ ಮಾಡುವುದೆಂದರೆ ತುಂಬಾ ಇಷ್ಟ. ಕಾಶ್ಮೀರ ಪ್ರವಾಸದ ಬಗ್ಗೆ ನನಗೆ ಮಗ ಹೇಳಿರಲಿಲ್ಲ, ನನ್ನ ತಮ್ಮನಿಗೆ ಪ್ರವಾಸದ ಬಗ್ಗೆ ಹೇಳಿದ್ದ, ಕಾಶ್ಮೀರ ಪ್ರವಾಸ ಎಂದ ಕೂಡಲೇ ನನ್ನ ಎದೆ ಧಸಕ್ ಎಂದಂತಾಯ್ತು. ಕಾಶ್ಮೀರಕ್ಕೆ ಬೇಡ ಎಂದು ಹೇಳಿದೆ, ಆದರೆ ಇಲ್ಲ ಅಮ್ಮ, ಕಾಶ್ಮೀರ ಮೊದಲಿನ ರೀತಿಯಲ್ಲಿಲ್ಲ. ಘಟನೆ ನಡೆಯುವ ಇಂದಿನ ದಿನ ನನ್ನ ಜೊತೆ ಮಾತನಾಡಿ ಆರಾಮಾಗಿದ್ದೀನಿ ಅಂತ ಹೇಳಿದ್ದ. ನಾವು ಪ್ರಾರ್ಥನೆ ಮಾಡ್ತಾ ಇದ್ವಿ ಆದ್ರೆ ಹೀಗಾಗುತ್ತೆ ಅಂತ ಗೊತ್ತಿರಲಿಲ್ಲ ಎಂದು ದುಃಖಿತರಾದರು.

ನಾನೇ ಬುಕ್‌ ಮಾಡಿ ಕೊಟ್ಟಿದ್ದ: ಸ್ನೇಹಿತ ಗಣೇಶ್‌

ನನ್ನ ಆತ್ಮೀಯ ಸ್ನೇಹಿತ ಇವತ್ತು ಇಲ್ಲ ಅಂದ್ರೆ ನನಗೆ ನಂಬಲೇ ಆಗುತ್ತಿಲ್ಲ. ಘಟನೆ ನಡೆದ ಸ್ಥಳದಲ್ಲಿ ಕುದುರೆ ರೈಡ್ ಮಾಡದಂತೆ ಹೇಳಿದ್ದೆ, ಮಧ್ಯಾಹ್ನದ ನಂತರ ಪೆಹಲ್ಗಾಮ್ ಪ್ರವಾಸ ಬೇಡ ಅಂತ ಹೇಳಿದ್ದೆ ಎಂದು ಮಂಜುನಾಥ್ ಆತ್ಮೀಯ ಸ್ನೇಹಿತ ಗಣೇಶ್‌ ತಿಳಿಸಿದರು.

ಕಾಶ್ಮೀರ ಪ್ರವಾಸಕ್ಕೆ ಟ್ರಾವೆಲ್ ಏಜೆನ್ಸಿ ಸೇರಿದಂತೆ ಎಲ್ಲವನ್ನು ವ್ಯವಸ್ಥೆ ಮಾಡಿಕೊಟ್ಟಿದ್ದು ನಾನೇ. ನಾನು ಕಳೆದ ವಾರ ಕಾಶ್ಮೀರ ಪ್ರವಾಸ ಕೈಗೊಂಡು ವಾಪಸ್ ಬಂದಿದ್ದೆ. ನಾನು ಮತ್ತು ಮಂಜುನಾಥ್‌ ರಾವ್‌ ಕುಟುಂಬ ಒಟ್ಟಿಗೆ ಹೋಗಬೇಕಾಗಿತ್ತು, ರಜೆ ಕಾರಣ ಮಂಜುನಾಥ್ ಈ ವಾರ ಪ್ರವಾಸ ಕೈಗೊಂಡಿದ್ದರು. ಕಾಶ್ಮೀರದ ಪ್ರವಾಸದ ಬಗ್ಗೆ ನಿತ್ಯವೂ ನನ್ನ ಜೊತೆಗೆ ಮಂಜುನಾಥ್ ಕುಟುಂಬ ಫೋನ್ ಸಂಪರ್ಕದಲ್ಲಿತ್ತು. ಮಂಜುನಾಥ್ ಕಾಶ್ಮೀರ ಪ್ರವಾಸ ಮುಗಿಸಿ ಗುರುವಾರ ಶಿವಮೊಗ್ಗಕ್ಕೆ ಬರಬೇಕಾಗಿತ್ತು. ಗುಡ್ಡಗಾಡು ಪ್ರದೇಶದಲ್ಲಿ ಸೆಕ್ಯೂರಿಟಿ ಕಡಿಮೆ ಇರುತ್ತೆ ಹೀಗಾಗಿ ಘಟನೆ ನಡೆದ ಸ್ಥಳದಲ್ಲಿ ಕುದುರೆ ರೈಡ್ ಮಾಡದಂತೆ ಹೇಳಿದ್ದೆ ಎನ್ನುತ್ತ ಭಾವುಕರಾದರು.