ಸಾರಾಂಶ
ಹಾವೇರಿ: ಆಧ್ಯಾತ್ಮಿಕ ಶಿಸ್ತಿನ ಮೊದಲ ಹೆಜ್ಜೆಯೇ ಮೌನ ಅನುಷ್ಠಾನ. ಅನುಷ್ಠಾನದಿಂದ ಪಡೆದ ವಿಶೇಷ ಶಕ್ತಿಯು ಶಿವತ್ವ ಸಾಧನೆಯಾಗಿದೆ. ಈ ಸಾಧನೆಯಿಂದ ಶಿಷ್ಯರನ್ನು ಅಜ್ಞಾನದಿಂದ ಸಂಸ್ಕಾರದ ಕಡೆಗೆ ಸಾಗಿಸುವುದೇ ಗುರು ಪರಂಪರೆಯ ಆದ್ಯ ಕರ್ತವ್ಯವಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಹುಕ್ಕೇರಿಮಠ ಶಿವಾನುಭವದಲ್ಲಿ ಹಮ್ಮಿಕೊಂಡಿದ್ದ ಸದಾಶಿವ ಸ್ವಾಮೀಜಿಗಳ ಮೌನ ಅನುಷ್ಠಾನ ಮಂಗಲ ಹಾಗೂ ಗುರು ಪೂರ್ಣಿಮೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಜಗತ್ತಿನಲ್ಲಿ ಯಾವುದೇ ದೇಶದಲ್ಲಿಯೂ ಕಂಡುಬರದ ಗುರುಕುಲ ಶಿಕ್ಷಣ ಪದ್ಧತಿಯು ನಮ್ಮ ದೇಶದಲ್ಲಿದೆ. ವ್ಯಾಸ ಮಹರ್ಷಿಯ ಪೂರ್ಣಿಮೆಯು ಗುರು ಪೂರ್ಣಿಮೆಯಾಗಿದ್ದು, ಧಾರ್ಮಿಕ ಪರಂಪರೆಯ ಗುರು ಸಾನ್ನಿಧ್ಯವು ಮಾಂಸ ದೇಹವನ್ನು ಮಂತ್ರ ದೇಹವನ್ನಾಗಿ ಮಾಡುವ ಶಕ್ತಿ ಇದೆ. ಶಿಷ್ಯನು ದೊಡ್ಡ ಸ್ಥಾನಕ್ಕೆ ಹೋದಾಗ ಗುರುವಿನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇದು ಗುರು ಶಿಷ್ಯ ಪರಂಪರೆಯ ಪವಿತ್ರ ಸಂಬಂಧವಾಗಿದೆ ಎಂದು ಹೇಳಿದರು.ನಿವೃತ್ತ ಪ್ರಾಧ್ಯಾಪಕ ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ಮೌನ ಅನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸುವ ಪರಂಪರೆಯು ಹಾವೇರಿಯ ಹುಕ್ಕೇರಿಮಠದ ಆಧ್ಯಾತ್ಮಿಕ ಸಂಪತ್ತು ಆಗಿದೆ ಎಂದು ಹೇಳಿದರು. ಆಧ್ಯಾತ್ಮದಲ್ಲಿ ಉನ್ನತ ಸಾಧನೆ ಮಾಡುವಲ್ಲಿ ಮೌನವು ಅತೀ ಪ್ರಮುಖ ಪಾತ್ರ ವಹಿಸುತ್ತದೆ. ಗುರುವಿನ ಮೌನ ಅನುಷ್ಠಾನವು ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಜೀವನದಲ್ಲಿ ನೊಂದವರ ಮನಸ್ಸಿಗೆ ನೆಮ್ಮದಿ ನೀಡುವ ಸಂಜೀವಿನಿ ಈ ಮೌನ ಅನುಷ್ಠಾನಕ್ಕಿದೆ. ಸದಾಶಿವ ಶ್ರೀಗಳ ಅನುಷ್ಠಾನವು ಭಕ್ತ ಜನರ ಉದ್ಧಾರಕ್ಕಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಿವಾನಂದ ನಾಗನೂರ ಅವರು ವಿರಚಿತ ಕವನ ಸಂಕಲನ ಸ್ವಾತಂತ್ರö್ಯ ಮರ ಲೋಕಾರ್ಪಣೆಗೊಳಿಸಲಾಯಿತು. ನಿವೃತ್ತಿ ಹೊಂದಿದ ಮುಖ್ಯಶಿಕ್ಷಕಿ ರೇಣುಕಾ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಗುರು ಪೂರ್ಣಿಮೆ ನಿಮಿತ್ತ ಸದಾಶಿವ ಶ್ರೀಗಳ ಪಾದಪೂಜೆಯನ್ನು ಪ್ರಾತಃಕಾಲ ಭಕ್ತರು ನೆರವೇರಿಸಿದರು. ಶಿವಯೋಗ ಮಂದಿರದ ಟ್ರಸ್ಟಿ ಎಂ.ಬಿ. ಹಂಗರಕಿ ಹಾಗೂ ಗದಗನ ಶಿವಯೋಗಿ ದೇವರು ಮಾತನಾಡಿದರು.ಸಮಾರಂಭದಲ್ಲಿ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಆಸಂಗಿಯ ವೀರಬಸವ ದೇವರು, ಶಿವಪ್ರಕಾಶ ದೇವರು, ಚಂದ್ರಶೇಖರ ದೇವರು, ವೀರಣ್ಣ ಅಂಗಡಿ, ಬಿ.ಬಸವರಾಜ, ಆನಂದ ಅಟವಾಳಗಿ, ಪ್ರಾಚಾರ್ಯ ಎಸ್.ವಿ.ಹಿರೇಮಠ, ಟಾ.ಸವಿತಾ ಹಿರೇಮಠ, ದಾಕ್ಷಾಯಣಿ ಗಾಣಗೇರ, ಅಮೃತಮ್ಮ ಶೀಲವಂತರ, ಎಸ್.ಎಂ. ಹಾಲಯ್ಯನವರಮಠ, ಮಾದನಹಿಪ್ಪರಗಿ ಹಾಗೂ ಶ್ಯಾಗೋಟಿ ಭಕ್ತರು ಉಪಸ್ಥಿತರಿದ್ದರು.ಅಕ್ಕನ ಬಳಗ ಸದಸ್ಯರು ಪ್ರಾರ್ಥಿಸಿದರು. ಎಸ್.ಎಸ್.ಮುಷ್ಠಿ ಸ್ವಾಗತಿಸಿದರು. ಉದ್ಯಮಿ ಪಿ.ಡಿ. ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್.ಮಳೆಪ್ಪನವರ ನಿರ್ವಹಿಸಿದರು. ವಿ.ವಿ. ಅಂಗಡಿ ವಂದಿಸಿದರು.