ಸಾರಾಂಶ
ಯಲ್ಲಾಪುರ: ಪುಸ್ತಕಗಳು ನೀಡುವ ಜ್ಞಾನದ ಸಂಪತ್ತನ್ನು ಯಾರಿಂದಲೂ ಕಸಿಯಲಾಗದು. ಆ ನಿಟ್ಟಿನಲ್ಲಿ ಪ್ರಮೋದ ಹೆಗಡೆ ಮೌನ ಗ್ರಂಥಾಲಯದ ಮೂಲಕ ತಾಲೂಕಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಪಟ್ಟಣದ ಪ್ರಮೋದ ಹೆಗಡೆ ಅವರ ನಿವಾಸದ ಬಳಿ ಭಾನುವಾರ ನೂತನವಾಗಿ ಪ್ರಾರಂಭಿಸಲಾದ ಗ್ರಂಥಾಲಯದ ಕುರಿತು ಅವರು ಮಾತನಾಡಿದರು. ಆಧುನಿಕತೆಯ ನಡುವೆಯೂ ಪುಸ್ತಕಗಳ ಪ್ರಕಟಣೆ, ಬರಹಗಾರರ ಹಾಗೂ ಓದುಗರ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದೆ. ಅದಕ್ಕಾಗಿ ಪ್ರಮೋದ ಹೆಗಡೆ ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಪುಸ್ತಕಗಳು ನಮ್ಮ ನಾಗರಿಕತೆಯ ಸಾಕ್ಷಿಯಾಗಿದೆ. ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಪುಸ್ತಕಗಳ ಅಗತ್ಯತೆಯಿದೆ. ಪುಸ್ತಕಗಳಿಗಿಂತ ಉತ್ತಮ ಸ್ನೇಹಿತ ಇನ್ನೊಂದಿಲ್ಲ ಎಂಬ ಮಾತಿನಂತೆ ಸಮಾಜಕ್ಕೆ ಕೊಡುಗೆಯಾಗಿ ಈ ಗ್ರಂಥಾಲಯವನ್ನು ನೀಡಿದ್ದಾರೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಲಿ. ಗ್ರಂಥಾಲಯ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಶುಭ ಹಾರೈಸಿದರು.ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ನನ್ನ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ಮೌನ ಗ್ರಂಥಾಲಯವನ್ನು ಪುನಃ ಪ್ರಾರಂಭಿಸುವುದಾಗಿ ತಿಳಿಸಿದ್ದೆ. ಇಂದು ಮೋದಿ ಅವರು ಮೂರನೇ ಬಾರಿ ಭಾರತದ ಪ್ರಧಾನಮಂತ್ರಿಯಾಗುತ್ತಿರುವ ಶುಭ ಸಂದರ್ಭದಲ್ಲಿ ಗ್ರಂಥಾಲಯ ಪುನರಾರಂಭಗೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ. ಈ ಹಿಂದೆ ೩೦ ಸಾವಿರ ಪುಸ್ತಕಗಳುಳ್ಳ ಗ್ರಂಥಾಲಯವಿತ್ತು. ಮ್ಯಾಂಗನೀಸ್ ಅದಿರಿನ ಧೂಳನ್ನು ನಿಯಂತ್ರಿಸಲಾಗದೇ, ನಿರ್ವಹಣೆ ಕಷ್ಟವಾಗಿದ್ದರಿಂದ ಅದನ್ನು ಶಾಲೆಯೊಂದಕ್ಕೆ ನೀಡಿದ್ದೇನೆ. ಮತ್ತೆ ಇಂದು ಆರಂಭಿಸಿದ್ದೇನೆ. ಇಲ್ಲಿಯೇ ಎಲ್ಲ ರೀತಿಯ ಪುಸ್ತಕಗಳನ್ನು ಸಂಗ್ರಹಿಸಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡುವ ಉದ್ದೇಶ ಹೊಂದಿದ್ದೇನೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಮುಖರಾದ ಪ್ರಸಾದ ಹೆಗಡೆ ಹಾಗೂ ಗಣಪತಿ ಬೋಳುಗುಡ್ಡೆ ಉಪಸ್ಥಿತರಿದ್ದರು.