ಸಾರಾಂಶ
ಧಾರವಾಡ: ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಹಿಂದೂಗಳ ಹತ್ಯೆ ಖಂಡಿಸಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ಮೇಣದ ದೀಪದೊಂದಿಗೆ ಸೋಮವಾರ ರಾತ್ರಿ ಮೌನ ಮೆರವಣಿಗೆ ನಡೆಸಿತು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೌನ ಪ್ರತಿಭಟನೆಯೊಂದಿಗೆ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ, ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ನೈತಿಕ ಬೆಂಬಲ ನೀಡಲಾಯಿತು.ದೇಶದ ಐಕ್ಯತೆಗೆ ದಕ್ಕೆ ಬಂದಾಗ ಭಾರತದ ಸರ್ವಜನಾಂಗ ಒಗ್ಗಟ್ಟನ್ನು ಪ್ರದರ್ಶಿಸುತ್ತಾ ಬಂದಿದೆ. ಈಗಲೂ ಕಾಶ್ಮೀರದ ಪಹಲ್ಗಾಮ್‌ದಲ್ಲಿ ನಡೆದ ಬಯೋತ್ಪಾದಕ ದಾಳಿಗೆ ದೇಶದ ಜನತೆ ಒಕ್ಕೊರಲಿನಿಂದ ಪ್ರತಿಭಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೇ ಆಗಲಿ ರಾಜಕೀಯವಾಗಲಿ, ಧಾರ್ಮಿಕವಾಗಲಿ, ಟೀಕೆ-ಟಿಪ್ಪಣಿಗಳನ್ನು ಮಾಡುವುದು ಸರ್ವತಾ ಒಳ್ಳೆಯದಲ್ಲ. ಇಂದು ದೇಶದ ಹೊರಗಿನ ದುಷ್ಟಶಕ್ತಿಗಳಿಗೆ ದೇಶದ ಜನತೆಯ ಶಕ್ತಿಯನ್ನು ಮತ್ತು ದೃಢಸಂಕಲ್ಪದ ನಡೆಯನ್ನು ತೋರಿಸುವ ಕಾಲ. ಈ ಮೂಲಕ ದೇಶದ ಗಡಿ ರಕ್ಷಿಸುತ್ತಿರುವ ಸೈನಿಕರಿಗೆ, ದೇಶವನ್ನು ಮುನ್ನಡೆಸುತ್ತಿರುವ ನಾಯಕರಿಗೆ ಮನೋಸ್ಥೈರ್ಯ ನೀಡುವ ಕರ್ತವ್ಯವಾಗಲಿ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಮೌನ ನಡೆಯ ಪ್ರಾರಂಭದಲ್ಲಿ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ, ಹಿರಿಯ ಸಾಹಿತಿ ವೆಂಕಟೇಶ ಮಾಚಕನೂರ, ಆಕಾಶವಾಣಿಯ ನಿವೃತ್ತ ಅಧಿಕಾರಿ ಸಿ.ಯು. ಬೆಳ್ಳಕ್ಕಿ, ಅನಿತಾ ಚಿಕ್ಕಮಠ ಹಾಗೂ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಭಯೋತ್ಪಾದಕತೆಯನ್ನು ಕಠೋರ ಮಾತುಗಳಲ್ಲಿ ಖಂಡಿಸಿ, ಪ್ರತಿಭಟನಾ ನಡೆಗೆ ಚಾಲನೆ ನೀಡಿದರು.ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ನೇತೃತ್ವದ ಮೌನ ಪ್ರತಿಭಟನಾ ನಡಿಗೆಯಲ್ಲಿ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.