ಸ್ವಂತ ಮನೆಗೆ ಒತ್ತಾಯಿಸಿ ಮೌನ ಪ್ರತಿಭಟನೆ

| Published : Mar 12 2025, 12:46 AM IST

ಸಾರಾಂಶ

ಮಂಡ್ಯ ನಗರ ವ್ಯಾಪ್ತಿಯಲ್ಲಿ ಸ್ವಂತ ಮನೆ ಇಲ್ಲದವರ ಪಟ್ಟಿ ತಯಾರಿಸುವಂತೆ ಆಗ್ರಹಿಸಿ, ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ನಿವೇಶನ ರಹಿತರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರ ವ್ಯಾಪ್ತಿಯಲ್ಲಿ ಸ್ವಂತ ಮನೆ ಇಲ್ಲದವರ ಪಟ್ಟಿ ತಯಾರಿಸುವಂತೆ ಆಗ್ರಹಿಸಿ, ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ನಿವೇಶನ ರಹಿತರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು ಸ್ವಂತ ಮನೆ ಇಲ್ಲದವರಿಗೆ ಮನೆ ಹಾಗೂ ನಿವೇಶನ ರಹಿತರಿಗೆ ಕೂಡಲೇ ನಿವೇಶನ ದೊರಕಿಸಿಕೊಡುವಂತೆ ಒತ್ತಾಯಿಸಿದರು.

ಕರ್ನಾಟಕ ಅಭಿಮಾನಿ ಸಮ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಸುಮಾರು ೫,೦೦೦ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ ಎಂದು ಅಂದಾಜು ಮಾಡಲಾಗಿದೆ. ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೆವು. ಅದನ್ನು ಪರಿಶೀಲಿಸಿ ಆದ್ಯತೆ ಮೇರೆಗೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಪತ್ರವನ್ನು ಕೂಡ ಕಳಿಸಿದ್ದಾರೆ ಎಂದು ತಿಳಿಸಿದರು.

ಸ್ವಂತ ಮನೆ ಇಲ್ಲದವರ ಪಟ್ಟಿ ಬಿಡುಗಡೆ ಮಾಡಿ ಎಂದು ಕೂಡ ಆಗ್ರಹಿಸಿ ಚಳವಳಿ ಆರಂಭಿಸಿದ್ದೇವೆ. ಯಾವ ದತ್ತಾಂಶದ ಆಧಾರದಲ್ಲಿ ಪಟ್ಟಿ ತಯಾರಿಸಿದ್ದೀರಿ. ನಿಮ್ಮ ಬಳಿ ಇರುವ ಮಾಹಿತಿಯನ್ನು ನಮಗೆ ನೀಡುವಂತೆ ಒತ್ತಾಯಿಸಿದರು.

ರಾಜಕಾರಣಿಗಳ ಹಿಂಬಾಲಕರು, ಬೆಂಬಲಿಗರಿಗೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಹಿತ ಕಾಯಲು ಮನೆಗಳನ್ನು ನೀಡಿದ್ದಾರೆ. ಆದರೆ, ಅರ್ಹ ಬಡವರಿಗೆ ಮನೆಗಳನ್ನು ನೀಡುವುದಕ್ಕೆ ಪರಿಗಣಿಸಿಲ್ಲ. ಇದರಿಂದ ದಶಕಗಳಿಂದಲೂ ಬಡವರು ಸ್ವಂತ ಮನೆಯನ್ನು ಹೊಂದಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ನಾವು ದ್ರಾವಿಡ ಕನ್ನಡಿಗರು ಚಳುವಳಿಯ ಮುಖ್ಯಸ್ಥ ಅಭಿ ಒಕ್ಕಲಿಗ, ಪ್ರಗತಿಪರ ಹೋರಾಟಗಾರರಾದ ಎಂ.ವಿ.ಕೃಷ್ಣ, ಕರವೇ ಜಿಲ್ಲಾಧ್ಯಕ್ಷ ಎಚ್.ವಿ.ಜಯರಾಂ ಹಾಗೂ ನಿವೇಶನ ರಹಿತರು ಹಾಜರಿದ್ದರು.