ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಬೈರೇಗೌಡ, ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ರೈತಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಜೊತೆಗೆ, ಚಳವಳಿ ನಿರತ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
2013ರ ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಿಡುಗಡೆ ಹಾಗೂ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಸಂಘಟನೆಯ ಮುಖಂಡರು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂದಿನ ಬೃಹತ್ ಗೇಟಿನ ಮುಂಭಾಗ ಜಮಾಯಿಸಿದ ಸಂಘಟನೆಯ ಮುಖಂಡರು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಚಳವಳಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಬೈರೇಗೌಡ, ಮಹದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ರೈತಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಜೊತೆಗೆ, ಚಳವಳಿ ನಿರತ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.2013ರಲ್ಲಿ ಉತ್ತರ ಕರ್ನಾಟಕದ ರೈತರ ಬಹುದಿನಗಳ ಕನಸಾಗಿದ್ದ ಹಾಗೂ ಬೇಡಿಕೆಯಾಗಿದ್ದ ಮಹದಾಯಿ ಹಾಗೂ ಕಳಸ ಬಂಡೂರಿ ನೀರಿನ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಹೋರಾಟದ ವಿಚಾರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು. ಅವರ ಬಿಡುಗಡೆಗಾಗಿ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
ರಾಜ್ಯದ ರೈತರಿಗೆ ನೀರು ಜೀವನಾಧಾರವಾಗಿದೆ. ರೈತರು ನೀರಿಗಾಗಿ, ತಾವು ಬೆಳೆದ ಬೆಳೆಗೆ ನ್ಯಾಯುತವಾದ ಬೆಲೆಗೆ ಆಗ್ರಹಿಸಿಕೊಂಡು ಸಂಘಟನೆ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ, ರಾಜ್ಯ ಸರ್ಕಾರ ರೈತರ ಮೇಲೆ ಪ್ರಕರಣ ದಾಖಲಿಸುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಆನಂದ್, ಶ್ರೀನಿವಾಸ್ ರೆಡ್ಡಿ, ನಾಗರಾಜು, ನರಸಿಂಹಮೂರ್ತಿ, ಜಯಮ್ಮ, ಅಶ್ವಥ್, ಶಿವಲಿಂಗಯ್ಯ, ಮಲ್ಲೇಶಯ್ಯ, ನಂಜಪ್ಪ ಮತ್ತಿತರರು ಭಾಗವಹಿಸಿದ್ದರು.