ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಮಸೀದಿಗಳಲ್ಲಿ ಮೌನ ಪ್ರತಿಭಟನೆ

| Published : Mar 29 2025, 12:35 AM IST

ಸಾರಾಂಶ

ಚಿಕ್ಕಮಗಳೂರು, ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ನಗರದ ಷರೀಫ್ ಗಲ್ಲಿಯ ಮದೀನಾ ಮಸೀದಿ ಸೇರಿದಂತೆ ವಿವಿಧ ಬಡಾವಣೆ ಗಳಲ್ಲಿರುವ ಮಸೀದಿಗಳ ಮುಂಭಾಗದಲ್ಲಿ ಕಮಿಟಿ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ಮಸೀದಿಗಳ ಮುಂಭಾಗದಲ್ಲಿ ಕಮಿಟಿ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಹೋರಾಟ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ನಗರದ ಷರೀಫ್ ಗಲ್ಲಿಯ ಮದೀನಾ ಮಸೀದಿ ಸೇರಿದಂತೆ ವಿವಿಧ ಬಡಾವಣೆ ಗಳಲ್ಲಿರುವ ಮಸೀದಿಗಳ ಮುಂಭಾಗದಲ್ಲಿ ಕಮಿಟಿ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಿಸಾಲ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಮೂಲ ನಿವಾಸಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತರ ಏಳಿಗೆ ಹತ್ತಿಕ್ಕಲು ವಿವಿಧ ಕಾಯ್ದೆ, ಕಾನೂನುಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಕೇಂದ್ರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್‌ಬೋರ್ಡ್‌ನ ಆಸ್ತಿ ಹಾಗೂ ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡಿದೆ. ವಕ್ಫ್ ಬೋರ್ಡ್ ಆಸ್ತಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ತಡೆಯುವ ಹುನ್ನಾರ ಈ ಮಸೂದೆಯಲ್ಲಿದೆ ಎಂದು ಹೇಳಿದರು.ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗಲು ಬಿಡಬಾರದು, ಈ ಮಸೂದೆ ವಿರುದ್ಧ ಸಮುದಾಯದ ಜನತೆ ನಗರ ಸೇರಿದಂತೆ ದೇಶಾದ್ಯಂತ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರಕಾರ ಏಕ ಪಕ್ಷೀಯವಾಗಿ ಮಸೂದೆ ಜಾರಿಗೆ ಸಂಚು ರೂಪಿಸಿದೆ ಎಂದರು.ಈ ದೇಶದ ಮುಸಲ್ಮಾನರು ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡಿದ್ದಾರೆ. ಪ್ರಧಾನಿ ಮೋದಿ ಆಡಳಿತದಿಂದಾಗಿ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ. ದೇಶದ ಆರ್ಥಿಕ ಪ್ರಗತಿ ಕುಂಟಿತಗೊಂಡಿದೆ. ಹಿಂದೂ-ಮುಸ್ಲೀಂ ಉತ್ತಮ ಸಂಬಂಧ ಹಾಳುಗೆಡವುತ್ತಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಮದೀನಾ ಮಸೀದಿ ಕಮಿಟಿ ಅಧ್ಯಕ್ಷ ಅಸ್ಲಾಂ, ಉಪಾಧ್ಯಕ್ಷ ಇಬ್ರೋಜ್, ಕಾರ್ಯದರ್ಶಿ ಅಬ್ದುಲ್ ವಾಹೀದ್, ಸದಸ್ಯರಾದ ಅಸ್ಲಾಂ, ಏಜಾಜ್, ಶೋಯೆಬ್, ಮಜರ್, ಅಜೀಮ್, ರಿಯಾನ್ ಹಾಗೂ ಮುಸ್ಲೀಂ ಸಮುದಾಯದವರು ಪಾಲ್ಗೊಂಡಿದ್ದರು.

28 ಕೆಸಿಕೆಎಂ 2ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ಚಿಕ್ಕಮಗಳೂರಿನ ಷರೀಫ್ ಗಲ್ಲಿಯ ಮದೀನಾ ಮಸೀದಿ ಎದುರು ಮುಸ್ಲಿಂ ಸಮುದಾಯದವರು ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.