ಕ್ರಿಸ್ಮಸ್‌ ಸಡಗರಕ್ಕೆ ಸಿಲಿಕಾನ್‌ ಸಿಟಿ ಸಜ್ಜು

| Published : Dec 23 2024, 01:01 AM IST

ಸಾರಾಂಶ

ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜಾಗುತ್ತಿದ್ದು, ನಗರದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಾಗಿ ಸಿಂಗಾರಗೊಳ್ಳುತ್ತಿವೆ. ಶಿವಾಜಿನಗರ ಸೇರಿ ವಿವಿಧೆಡೆ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್‌ ಉಡುಗೊರೆ, ಅಲಂಕಾರಿಕ ಪರಿಕರ ಖರೀದಿ ಜೋರಾಗಿದೆ. ಬೇಕರಿ, ಹೋಟೆಲ್‌ಗಳು ಕೇಕ್‌, ಚಾಕಲೇಟ್‌ ಸೇರಿ ವೈವಿಧ್ಯಮಯ ಖಾದ್ಯಗಳ ತಯಾರಿಕೆಗೆ ಅಡಿಯಿಟ್ಟಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಸಿಲಿಕಾನ್‌ ಸಿಟಿ ಸಜ್ಜಾಗುತ್ತಿದ್ದು, ನಗರದ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಾಗಿ ಸಿಂಗಾರಗೊಳ್ಳುತ್ತಿವೆ. ಶಿವಾಜಿನಗರ ಸೇರಿ ವಿವಿಧೆಡೆ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್‌ ಉಡುಗೊರೆ, ಅಲಂಕಾರಿಕ ಪರಿಕರ ಖರೀದಿ ಜೋರಾಗಿದೆ. ಬೇಕರಿ, ಹೋಟೆಲ್‌ಗಳು ಕೇಕ್‌, ಚಾಕಲೇಟ್‌ ಸೇರಿ ವೈವಿಧ್ಯಮಯ ಖಾದ್ಯಗಳ ತಯಾರಿಕೆಗೆ ಅಡಿಯಿಟ್ಟಿವೆ.

ಚರ್ಚ್‌ಗಳ ಎದುರು ಯೇಸುವಿನ ಜನನ ಸಾರುವ ಗೋದಲಿ, ಕ್ರಿಸ್ಮಸ್‌ ವೃಕ್ಷ, ಬೃಹದಾಕಾರದ ನಕ್ಷತ್ರ ಆಕಾಶಬುಟ್ಟಿ, ಅಲಂಕೃತ ಶುಭಫಲಕಗಳನ್ನು ಅಳವಡಿಸಲಾಗುತ್ತಿದೆ. ಕ್ರೈಸ್ತ ಸಮುದಾಯದವರು ಮನೆಗಳಲ್ಲಿ ಹಬ್ಬದ ಸಿದ್ಧತೆ ನಡೆಸಿದ್ದಾರೆ. ಐಟಿ ಸೇರಿ ಖಾಸಗಿ ಕಂಪನಿ, ಕಚೇರಿ, ಮಾಲ್‌ ಹಾಗೂ ಮಳಿಗೆಗಳಲ್ಲಿ ಕ್ರಿಸ್ಮಸ್ ಟ್ರೀ, ಸಾಂತಾ ಕ್ಲಾಸ್ ಇಟ್ಟು ವಿದ್ಯುತ್‌ ದೀಪಾಲಂಕಾರ ಮಾಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಶಿವಾಜಿ ನಗರದ ಸೆಂಟ್‌ ಮೇರಿಸ್‌ ಬೆಸಿಲಿಕಾ, ಫ್ರೇಝರ್‌ ಟೌನ್‌ ಸೆಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕೆಥೆಡ್ರಲ್‌ ಚರ್ಚ್‌, ಎಂ.ಜಿ.ರಸ್ತೆಯ ಈಸ್ಟ್‌ ಪರೇಡ್‌, ಚಾಮರಾಜಪೇಟೆ ಸೆಂಟ್‌ ಜೋಸೆಫ್‌ ಚರ್ಚ್‌, ಸೆಂಟ್‌ ಜಾನ್ಸ್‌ ಚರ್ಚ್‌, ಬ್ರಿಗೇಡ್‌ ರಸ್ತೆಯ ಸೆಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಟಸ್ಕರ್‌ ಟೌನ್‌ನ ಸೆಂಟ್‌ ಆ್ಯಂಡ್ರೂಸ್‌ ಸೇರಿ ಹಲವು ಚರ್ಚ್‌ಗಳು ಕ್ರಿಸ್ಮಸ್‌ ಆಚರಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿವೆ.

ರಸೆಲ್‌ ಮಾರುಕಟ್ಟೆ ಬಳಿ ಕ್ರಿಸ್ಮಸ್‌ ಮಾರುಕಟ್ಟೆ ತಲೆ ಎತ್ತಿದೆ. ಕಮರ್ಷಿಯಲ್‌ ಸ್ಟ್ರೀಟ್‌, ಎಂ.ಜಿ.ರಸ್ತೆ, ಗಾಂಧಿ ಬಝಾರ್‌ ಸೇರಿ ಹಲವೆಡೆ ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿದೆ. ಭಾನುವಾರ ಕ್ರೈಸ್ತರು ಮುಗಿಬಿದ್ದು ಇಲ್ಲಿ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಿದರು. ಕ್ರಿಸ್ಮಸ್‌ ಟ್ರೀ ಆರಂಭಿಕ ಬೆಲೆ ₹ 300, ಸಾಂತಾಕ್ಲಾಸ್‌ ಟೋಪಿ ₹ 60, ನಕ್ಷತ್ರ ಆಕಾಶಬುಟ್ಟಿ ₹250 ದರವಿದೆ. ಇಲ್ಲಿ ವಿಶೇಷವಾಗಿ ಗೋದಲಿ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಗುಡಿಸಲು, ಅದರಲ್ಲಿ ಗುಡ್ಡ-ಬೆಟ್ಟ ಹಾಗೂ ಹುಲ್ಲಿನ ಹಾಸು ಸಹಿತ ನೈಸರ್ಗಿಕವಾಗಿ ಆಕರ್ಷಿಸುವ ಸುಂದರ ರಚನೆಗಳಿವೆ. ಗೋದಲಿಗೆ ₹ 400 - ₹5000 ವರೆಗೆ ಬೆಲೆಯಿದೆ ಎಂದು ರಸೆಲ್‌ ಮಾರುಕಟ್ಟೆ ಬಳಿಯ ವರ್ತಕ ಸಂತೋಷ್‌ ತಿಳಿಸಿದರು.

ಯೇಸುವಿನ ತಂದೆ ಜೋಸೆಫ್‌ದೆ ತಾಯಿ ಮರಿಯ, ಬಾಲ ಯೇಸು, ಕುರಿಗಾಹಿಗಳು, ಆಡು-ಕುರಿಗಳು, ದನ-ಕತ್ತೆ, ಒಂಟೆ, ಪೂರ್ವದಿಂದ ಯೇಸುವಿನ ಭೇಟಿಗಾಗಿ ಆಗಮಿಸಿದ ಜ್ಯೋತಿಷಿಗಳು ಹಾಗೂ ದೇವದೂತರ ವಿಗ್ರಹಗಳು ಹೆಚ್ಚಾಗಿ ಮಾರಾಟ ಆಗುತ್ತಿದೆ. ಅದೇ ರೀತಿ ಮೂರ್ತಿಗಳ ಸೆಟ್‌ಗೆ ₹ 1500ವರೆಗೆ ದರವಿದೆ.

ವಿವಿಧ ಶಾಲೆಗಳಿಗೆ 10 ದಿನ ಕ್ರಿಸ್ಮಸ್‌ ರಜೆ

ನಗರದ ಹಲವು ಶಾಲಾ ಕಾಲೇಜುಗಳು ಕ್ರಿಸ್ಮಸ್‌ಗೆ 10 ದಿನಗಳ ರಜೆ ಘೋಷಿಸಿದ್ದು, ಬಹುತೇಕರು ತಮ್ಮೂರುಗಳತ್ತ ಮುಖ ಮಾಡಿದ್ದರೆ ಇನ್ನು ಹಲವರು ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರು ಮಹಾಧರ್ಮ ಕ್ಷೇತ್ರದ ಸಂಪರ್ಕ ಮಾಧ್ಯಮ ಮುಖ್ಯಸ್ಥ ರೆವರೆಂಡ್‌ ಫಾದರ್‌ ಸಿರಿಲ್‌ ವಿಕ್ಟರ್‌ ಮಾತನಾಡಿ, ಕ್ರಿಸ್ಮಸ್‌ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 2025ರನ್ನು ಜ್ಯೂಬಿಲಿ ವರ್ಷವಾಗಿ ‘ ಭರವಸೆಯ ಯಾತ್ರಿಕರು’ ಎಂಬ ಸಂದೇಶದಡಿ ಆಚರಿಸಲಾಗುತ್ತಿದೆ. ಡಿ.29 ರಂದು ನಗರದ ಚರ್ಚ್‌ಗಳಲ್ಲಿ ಈ ಆಚರಣೆ ನಡೆಯಲಿದೆ. ಚರ್ಚುಗಳ ಪ್ರತಿ 25,75, 100 ವರ್ಷಗಳ ಮೈಲಿಗಲ್ಲನ್ನು ಜ್ಯೂಬಿಲಿ ವರ್ಷವಾಗಿ ಆಚರಿಸುತ್ತೇವೆ ಎಂದರು.ಜತೆಗೆ ಕೋವಿಡ್, ಮಧ್ಯಪ್ರಾಚ್ಯ ಸೇರಿ ಹಲವೆಡೆಗಳಲ್ಲಿ ಯುದ್ಧ ಸಂಭವಿಸುತ್ತಿದೆ. ಶಾಂತಿಯ ಕುರಿತು ನಾವು ಭರವಸೆ ಕಳೆದುಕೊಳ್ಳದೆ ಸಾಗಬೇಕು ಎಂಬ ಕಾರಣಕ್ಕೆ ‘ಭರವಸೆ ಯಾತ್ರಿಕರು’ ಸಂದೇಶ ನೀಡಲಾಗುತ್ತಿದೆ ಎಂದರು.