ಸಂತೋಷ ದೈವಜ್ಞ

ಮುಂಡಗೋಡ: ಹಿಂದು ಧರ್ಮದ ಶ್ರೇಷ್ಠ ಹಬ್ಬಗಳಲ್ಲೊಂದಾದ ನವರಾತ್ರಿ ಉತ್ಸವದ ವಿಜಯದಶಮಿ ಹಬ್ಬವನ್ನು ರಾಜ್ಯ ಹಾಗೂ ದೇಶದ ಮೂಲೆ ಮೂಲೆಯಲ್ಲಿ ಒಂದೊಂದು ರೀತಿಯಾಗಿ ಆಚರಿಸಲಾಗುತ್ತದೆ. ಇದೇ ಹಬ್ಬವನ್ನು ದನಗರ ಗೌಳಿ ಜನಾಂಗ ಸಿಲೋಗನಾ ಎಂಬ ಹೆಸರಿನಲ್ಲಿ ಆಚರಿಸುವುದು ವಿಶೇಷ.

ಪಾಂಡುರಂಗನ ಆರಾಧ್ಯ ಭಕ್ತರಾದ ದನಗರ ಗೌಳಿಗರು ಮೂಲ ಹೈನುಗಾರರು. ಹಾಲು, ಮೊಸರು ವ್ಯಾಪಾರವೇ ಇವರ ಕುಲಕಸುಬು. ಅರಣ್ಯ ಪ್ರದೇಶದಲ್ಲಿ ವಾಸಿಸುವ ಗೌಳಿಗರು ಅತಿಕ್ರಮಣ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ದನಕರುಗಳನ್ನೇ ಅವಲಂಬಿಸಿ ಜೀವನ ಸಾಗಿಸುವ ಇವರನ್ನು ದನಗರ ಗೌಳಿಗರು ಎಂದು ಕರೆಯಲಾಗುತ್ತದೆ.

ಕಾಯಂ ಅರಣ್ಯವಾಸಿಯಾಗಿರುವ ಗೌಳಿಗರು ಕಾಡುಪ್ರಾಣಿಗಳಿಂದ ತಮ್ಮನ್ನು ಜಾನುವಾರುಗಳೇ ರಕ್ಷಿಸುತ್ತವೆ ಎಂಬ ನಂಬಿಕೆ ಇವರದ್ದು. ಹಾಗಾಗಿ ದನಕರುಗಳಿಗೆ ಮೇವು ಒದಗಿಸುವ ಅರಣ್ಯ ಪ್ರದೇಶದ ಗಿಡ ಮರಗಳನ್ನು ದೇವರೆಂದೇ ಭಾವಿಸಿ ಪೂಜಿಸುತ್ತಾರೆ. ವರ್ಷಪೂರ್ತಿ ಹೈನುಗಾರಿಕೆಯಲ್ಲಿ ನಿರತರಾಗಿರುವ ಗೌಳಿಗರಿಗೆ ವಿಜಯದಸಮಿ ಹಬ್ಬ ಬಂದರೆ ಸಂಭ್ರಮವೋ ಸಂಭ್ರಮ.

೧೦ ದಿನ ಹಬ್ಬ: ಗೌಳಿಗರು ವಿಜಯದಶಮಿ ಹಬ್ಬವನ್ನು ೧೦ ದಿನಗಳ ಕಾಲ ಆಚರಿಸಿದರು. ನಿತ್ಯ ಗೌಳಿ ದೊಡ್ಡಿಗಳಲ್ಲಿ ಧಾರ್ಮಿಕ ವಿಧಾನದೊಂದಿಗೆ ಹೋಮ ಹವನ ಪೂಜೆ ಪುನಸ್ಕಾರ ನಡೆದವು. ಮೊದಲೆಂಟು ದಿನಗಳ ಕಾಲ ಗೌಳಿಗರ ದೊಡ್ಡಿಯ ಪ್ರತಿಯೊಂದು ಮನೆಯಲ್ಲಿ ಒಬ್ಬರು ಉಪವಾಸ ವ್ರತ ಆಚರಿಸಿದರು. ಈ ವೇಳೆ ನಿತ್ಯ ಮರಾಠಿ ಭಾಷಿಕ ಗೀತೆಯೊಂದಿಗೆ ಗಜ್ಜಾ ಕುಣಿತ ಹಾಗೂ ಪುಗುಡಿ ನೃತ್ಯ ನಡೆದವು.


ಎಲ್ಲ ಗೌಳಿಗರು ಕಡ್ಡಾಯವಾಗಿ ತಲೆಗೆ ಪಗೋಡಾ (ಪೇಟಾ) ಧರಿಸಿಕೊಂಡು ಕುಣಿದರು. ರಾತ್ರಿ ವೇಳೆ ಪಂಜಿನ ಮೆರವಣಿಗೆ ನಡೆದವು. ೯ ದಿನ ತಮ್ಮ ತಮ್ಮ ಮನೆಯಲ್ಲಿ ಹಬ್ಬ ಆಚರಿಸಿ ೧೦ನೇ ದಿನ ಗೌಳಿ ದೊಡ್ಡಿಯ ಗೌಳಿಗರೆಲ್ಲ ಸಾಮೂಹಿಕವಾಗಿ ಸೇರಿ ಹಬ್ಬ ಆಚರಿಸಿದರು. ೧೧ನೇ ದಿನಕ್ಕೆ ಸುತ್ತಮುತ್ತಲಿನ ದೊಡ್ಡಿಯ ಗೌಳಿಗರೆಲ್ಲ ಒಂದು ಕಡೆ ಸೇರಿ ಸಿಲೋಗನಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸವರು.

ಮೈಮೇಲೆ ಮಜ್ಜಿಗೆ ಸುರಿದುಕೊಂಡು ಸ್ನಾನ ಮಾಡಿ ತಮ್ಮ ಆರಾಧ್ಯ ದೈವ ಪಾಂಡುರಂಗ(ವಿಠೋಬ) ದೇವರನ್ನು ಜಪಿಸಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ ಸುತ್ತಮುತ್ತಲಿನ ಅರಣ್ಯದ ಗಿಡ ಮರಗಳಿಗೆ ಹಾಗೂ ಸಾಕುದನ ಎಮ್ಮೆ ಕರುಗಳಿಗೆ ಪೂಜೆ ಸಲ್ಲಿಸುವರು. ಬಳಿಕ ಬನ್ನಿ ಮುಡಿದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವರು. ಹಾಲು, ಬೆಣ್ಣೆಯಿಂದ ತಯಾರಿಸಲಾದ ಸಿಹಿ ತಿನಿಸುಗಳೊಂದಿಗೆ ಸಾಮೂಹಿಕವಾಗಿ ಭೋಜನ ಸೇವಿಸುವರು. ನಂತರ ಹಬ್ಬದ ಸಮಾರೋಪ ಗೀತೆಯೊಂದಿಗೆ ನವರಾತ್ರಿ ಉತ್ಸವ(ಸಿಲೋಗನಾ) ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ವಿಶೇಷ ಹಬ್ಬ: ದನಗರ ಗೌಳಿ ಸಮುದಾಯಕ್ಕೆ ವಿಜಯದಶಮಿ (ಸಿಲೋಗನಾ) ಎಂದರೆ ವಿಶೇಷ ಹಬ್ಬವಾಗಿದ್ದು, ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ದನಗರ ಗೌಳಿ ಯುವ ಮುಖಂಡ ಬಮ್ಮು ಥೋರತ್ ಕುದುರೆನಾಲ ತಿಳಿಸಿದರು.