ಸಾರಾಂಶ
ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸದ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಏ. 11ರಿಂದ 16ರ ವರೆಗೆ ಪ್ರತಿಷ್ಠಾಪನೆಯ ರಜತ ಮಹೋತ್ಸವ, ಹೋಮ, ಹವನ ಹಾಗೂ ಸಂತ ಮಹಾಂತರ ಸಮಾಗಮ ಕಾರ್ಯಕ್ರಮ ನೆರವೇರಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗಾಯತ್ರಿ ಮೂರ್ತಿಯ ಪ್ರತಿಷ್ಠಾಪನೆಯ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಏ. 9ರಿಂದ ಶ್ರೀ ಗುರುಚರಿತ್ರೆ 108 ಪಾರಾಯಣ ನಡೆಯಲಿದೆ. ಪ್ರತಿದಿನ ಬೆಳಗ್ಗೆ 6.30ಕ್ಕೆ ಕಾಕಡಾರತಿ, 8ಕ್ಕೆ ಪಾರಾಯಣ ಜಪ, ನಾಮಸ್ಮರಣೆ, ಪೂಜೆ, ಹವನ, 9ರಿಂದ 10.30ರ ವರೆಗೆ ವಿವಿಧ ಮಹಿಳಾ ಮಂಡಳಿಯವರಿಂದ ಲಲಿತಾ ಸಹಸ್ರನಾಮ, ದಕ್ಷಿಣಾಮೂರ್ತಿ ಸ್ತೋತ್ರ ಕಲ್ಯಾಣವೃಷ್ಟಿಸ್ತವಃ ನಡೆಯಲಿದೆ. ಬೆಳಗ್ಗೆ 11ರಿಂದ ಮಹಾತ್ಮರಿಂದ ಆಶೀರ್ವಚನ, 12.30ಕ್ಕೆ ಮಹಾಪ್ರಸಾದ, ಮಧ್ಯಾಹ್ನ 3ಕ್ಕೆ ಮಹಿಳಾ ಮಂಡಳಿಗಳಿಂದ ಭಜನೆ, ಸಂಜೆ 4ರಿಂದ ಸತ್ಸಂಗ ಪ್ರವಚನ, ಸಂಜೆ 5ರಿಂದ ಉದಯೋನ್ಮುಖ ಕಲಾವಿದರಿಂದ ಕಾರ್ಯಕ್ರಮ, ಸಂಜೆ 7ರಿಂದ ಸಂಗೀತ ಸೇವೆ ಇತ್ಯಾದಿ ಕಾರ್ಯಕ್ರಮಗಳು ಸಾಗಿ ಬರಲಿವೆ ಎಂದರು.ಕಾರವಾರದ ಪದ್ಮಪುಷ್ಪ ಗುರುಕುಲದ ಕುಲಪತಿ ಶಿವಮೂರ್ತಿ ಜೋಯ್ಸ್ ಮಾತನಾಡಿ, ಏ. 11ರಂದು ಸಿಂದಗಿಯ ದತ್ತಪ್ಪಯ್ಯ ಶ್ರೀ, ಯರಗಲ್ಲ ಸಿದ್ಧರಾಜ ಶ್ರೀ, ಕೆಂಗೇರಿಮುರಗೋಡದ ದಿವಾಕರ ಶಂಕರ ದೀಕ್ಷಿತರು, ಸವದತ್ತಿಯ ಪ್ರಸನ್ನ ದೀಕ್ಷಿತರು, ಆನಂದವನ ಅಗಡಿಯ ಗುರುದತ್ತಮೂರ್ತಿ ಚಕ್ರವರ್ತಿಗಳ ಸಾನ್ನಿಧ್ಯದಲ್ಲಿ ಸಂತ ಸಮಾಗಮ ನಡೆಯಲಿದೆ. ಆನಂತರ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಏ. 12ರಂದು ಬೆಳಗ್ಗೆ 11ರಿಂದ 12ರ ವರೆಗೆ ಮತ್ತು ಸಂಜೆ 5ರಿಂದ 6ರ ವರೆಗೆ ಚೈತನ್ಯ ರಾಜಾರಾಮರ ಕ್ಷೇತ್ರವಾದ ಸಿದ್ದಾಪುರದ ಬ್ರಹ್ಮಾನಂದ ಭಾರತಿ ಶ್ರೀಗಳಿಂದ ಆಶೀರ್ವಚನ, ಸಂಜೆ 6ರಿಂದ ಶ್ರೀಧರ ಚಪ್ಪರಮನೆ ಹಾಗೂ ಬೇಗಾರ್ ಶಿವಕುಮಾರ ಇವರಿಂದ ಮಾಯಾ ಮಂಥರೆ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಏ. 13ರಂದು ಬೆಳಗ್ಗೆ ಬ್ರಹ್ಮಾನಂದ ಶ್ರೀಗಳ ಉಪನ್ಯಾಸ ಮತ್ತು ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ, ಸಂಜೆ 6ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಅನಂತ ಕುಲಕರ್ಣಿ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ ಎಂದರು.ಏ. 14ರಂದು ಶಿರಹಟ್ಟಿ ಫಕ್ಕೀರ ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ಆಶೀರ್ವಚನ ಕಾರ್ಯಕ್ರಮ ನೆರವೇರಲಿದೆ. ಇದೇ ವೇಳೆ ಹುಬ್ಬಳ್ಳಿ ಅದ್ವೈತಾಶ್ರಮದ ಪ್ರಣವಾನಂದತೀರ್ಥ ಶ್ರೀಗಳು, ಬದರಿನಾಥ ಹಿಮಾಲಯದ ಮಹಂತ ಧರಣಿಧರದಾಸ ಮಹಾರಾಜರ ಸಾನ್ನಿಧ್ಯದಲ್ಲಿ ಸಂಜೆ 5ರಿಂದ ಉಮಾಕಾಂತ ಕೆರಕೈ ಇವರಿಂದ ಪ್ರವಚನ, ಸಂಜೆ 6ಕ್ಕೆ ಗಾಯಕ ವಿಜಯಕುಮಾರ ಪಾಟೀಲರಿಂದ ಭಕ್ತಿ ಸಂಗೀತ ಸುಧೆ ಹರಿದು ಬರಲಿದೆ ಎಂದರು.
ಶೋಭಾಯಾತ್ರೆ: ಏ. 15ರಂದು ಬೆಳಗ್ಗೆ 8.30ಕ್ಕೆ ಹನುಮಾನಚಾಲೀಸಾ ಸೇರಿದಂತೆ ವಿವಿಧ ಪಾರಾಯಣಗಳು ನಡೆಯಲಿವೆ. ಸಂಜೆ 4 ಗಂಟೆಗೆ ತಡಸ ಕ್ರಾಸ್‌ನಿಂದ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಶ್ರೀಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 6ಕ್ಕೆ ಸುಜಯ ಶಾನಭಾಗ ಇವರ ಕಲಾಸುಜಯ ತಂಡದಿಂದ ನಾಟ್ಯ ಪ್ರಸ್ತುತಿಗೊಳ್ಳಲಿದೆ. ಏ. 16ರಂದು ಶ್ರೀಗಳಿಂದ ಇಲ್ಲಿಯ ವರೆಗೆ ಸಾಗಿ ಬಂದ ಎಲ್ಲ ಹೋಮಗಳ ಪೂರ್ಣಾಹುತಿ ನಡೆಯಲಿದೆ. ದೇಶದ ಎಲ್ಲ ಪವಿತ್ರನದಿಗಳಿಂದ ತರಲಾದ ಪವಿತ್ರ ಜಲದಿಂದ ಗಾಯತ್ರಿಮಾತೆಗೆ ಕುಂಭಾಭಿಷೇಕ, ತದನಂತರ ಶೃಂಗೇರಿಯ ಜ. ವಿಧುಶೇಖರ ಭಾರತಿ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ ಎಂದು ಮಾಹಿತಿ ನೀಡಿದರು.ರಜತ ಮಹೋತ್ಸವದಲ್ಲಿ ಹವನಗಳು: ಋಗ್ವೇದ ಸಂಹಿತಾ ಮತ್ತು ಯಜುರ್ವೇದ ಸಂಹಿತಾ ಸ್ವಾಹಾಕಾರ ಹೋಮ, ಗಣಪತಿ ಹೋಮ, ಶತಚಂಡಿಯಾಗ, ಸುಬ್ರಮಣ್ಯ ಹೋಮ, ಅನ್ನಪೂರ್ಣೇಶ್ವರಿ ಹೋಮ, ಸುದರ್ಶನ ಹೋಮ, ಮಹಾರುದ್ರಯಾಗ, ದತ್ತ ಹವನ, ಶ್ರೀರಾಮತಾರಕ ಹೋಮ, ಧನ್ವಂತರಿ ಹೋಮ, ಪುರುಷಸೂಕ್ತ ಹೋಮ, ಶ್ರೀಸೂಕ್ತ ಹವನ, ಅರುಣ ಹೋಮ, ಶ್ರೀಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀ ಪವಮಾನ ಹೋಮ, ಕುಂಕುಮಾರ್ಚನೆ ಸೇರಿದಂತೆ ಅನೇಕ ಹೋಮ ಹವನಾದಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ, ಬಾಬುರಾವ್ ಘಂಟಸಾಲಾ, ನೀಲಕಂಠ ಆಕಳವಾಡಿ, ಅರವಿಂದ ಮುತಗಿ ಸೇರಿದಂತೆ ಹಲವರಿದ್ದರು.