ಕಾರ್ಗಿಲ್‌ ವಿಜಯದ ರಜತ ಮಹೋತ್ಸವ: ಯುವ ಬ್ರಿಗೇಡ್‌ನಿಂದ ತ್ರಿವರ್ಣ ಧ್ವಜ ಜಾಥಾ

| Published : Jul 24 2024, 12:23 AM IST

ಕಾರ್ಗಿಲ್‌ ವಿಜಯದ ರಜತ ಮಹೋತ್ಸವ: ಯುವ ಬ್ರಿಗೇಡ್‌ನಿಂದ ತ್ರಿವರ್ಣ ಧ್ವಜ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಬ್ರಿಗೇಡ್‌ನ ಸಂಚಾಲಕ ಚಂದ್ರಶೇಖರ್ ಅವರು ತ್ರಿವರ್ಣ ಧ್ವಜದೊಂದಿಗ ಕೊಟ್ಟೂರು ಸ್ವಾಮಿ ಮಠದ ಆವರಣಕ್ಕೆ ಬಂದಾಗ ವಿದ್ಯುತ್ ಸಂಚಾರವಾದ ಅನುಭವವಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕಾರ್ಗಿಲ್ ಯುದ್ಧದಲ್ಲಿ ಭಾರತ, ಪಾಕಿಸ್ತಾನವನ್ನು ಮಣಿಸಿ ವಿಜಯೋತ್ಸವ ಆಚರಿಸಿದ ರಜತ ಮಹೋತ್ಸವ ಪ್ರಯುಕ್ತ ಯುವ ಬ್ರಿಗೇಡ್‌ ವತಿಯಿಂದ ರಾಜ್ಯಾದ್ಯಂತ ತ್ರಿವರ್ಣ ಧ್ವಜ ಜಾಥಾ ನಡೆಸಲಾಗುತ್ತಿದ್ದು, ಮಂಗಳವಾರ ಹೊಸಪೇಟೆಗೆ ಆಗಮಿಸಿದ ಜಾಥಾಕ್ಕೆ ಪತಂಜಲಿ ಯೋಗ ಪರಿವಾರದಿಂದ ಭವ್ಯ ಸ್ವಾಗತ ನೀಡಲಾಯಿತು.

ಯುವ ಬ್ರಿಗೇಡ್‌ನ ಸಂಚಾಲಕ ಚಂದ್ರಶೇಖರ್ ಅವರು ತ್ರಿವರ್ಣ ಧ್ವಜದೊಂದಿಗ ಕೊಟ್ಟೂರು ಸ್ವಾಮಿ ಮಠದ ಆವರಣಕ್ಕೆ ಬಂದಾಗ ವಿದ್ಯುತ್ ಸಂಚಾರವಾದ ಅನುಭವವಾಯಿತು. ನಿವೃತ್ತ ಯೋಧರಾದ ಅಶೋಕ್‌ ಚಿತ್ರಗಾರ್‌, ಸತೀಶ್ ರಾವ್ ಪಾವಂಜೆ ಮತ್ತು ಶ್ರೀನಿವಾಸನ್ ಅವರು ಧ್ವಜವನ್ನು ಎತ್ತಿ ಹಿಡಿದು ವೇದಿಕೆಯತ್ತ ತಂದಾಗ ನೆರೆದಿದ್ದವರು ಹೂಮಳೆಗರೆದರು. ಯೋಗ ಗುರು, ಗೋಕರ್ಣದ ನಾಗೇಂದ್ರ ಭಟ್‌ ಮತ್ತು ಇತರ ಹಲವು ಹಿರಿಯರು ನಿವೃತ್ತ ಯೋಧರೊಂದಿಗೆ ಧ್ವಜ ಎತ್ತಿ ಹಿಡಿದರು.

ಚಂದ್ರಶೇಖರ್ ಮಾತನಾಡಿ, ಭಾರತವು ಪಾಕಿಸ್ತಾನದೊಂದಗೆ ಸ್ನೇಹ ಬಯಸಿ ಒಪ್ಪಂದ ಮಾಡಕೊಂಡ ಬಳಿಕ ಆ ದೇಶದ ಮೇಲೆ ನಂಬಿಕೆ ಇಟ್ಟಿತ್ತು. ಆದರೆ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತು. ಕಾರ್ಗಿಲ್‌, ಡ್ರಾಸ್‌ನ ಅತ್ಯಂತ ಕಠಿಣ ಬೆಟ್ಟ ಪ್ರದೇಶಗಳಲ್ಲಿ ನಮ್ಮ ವೀರ ಯೋಧರು ದೇಶಕ್ಕಾಗಿ ಬಹುದೊಡ್ಡ ಬಲಿದಾನ ಮಾಡಿ ಮಹೋನ್ನತ ವಿಜಯ ತಂದುಕೊಟ್ಟರು. ಅಂತಹ ಹುತಾತ್ಮರನ್ನು ನಾವೆಲ್ಲ ನೆನೆಯಬೇಕು, ಗಡಿಯಲ್ಲಿ ಜೀವದ ಹಂಗು ತೊರೆದು ದೇಶ ಸೇವೆ ಮಾಡುತ್ತಿರುವ ಯೋಧರಿಂದಾಗಿಯೇ ನಾವೆಲ್ಲ ನೆಮ್ಮದಿಯಿಂದ ಇದ್ದೇವೆ, ಅವರನ್ನು ಸದಾ ಸ್ಮರಿಸುವ ಕೆಲಸವಾಗಲಿ ಎಂದರು.

ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಹಿರಿಯ ಯೋಗ ಸಾಧಕರಾದ ಶಿವಮೂರ್ತಿ, ವಿಠೋಬಣ್ಣ, ಮಂಗಳಮ್ಮ, ಪ್ರಮೀಳಮ್ಮ, ರಾಜೇಶ್‌ ಕರ್ವಾ, ಅನಂತ ಜೋಶಿ, ಶ್ರೀರಾಮ ಸೇರಿದಂತೆ ಅನೇಕ ಹಿರಿಯ ಯೋಗಸಾಧಕರು ಪಾಲ್ಗೊಂಡಿದ್ದರು.