ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ 1999ರಲ್ಲಿ ಸ್ಥಾಪನೆಯಾದ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ (ಎಂ.ಸಿ.ಎಚ್.ಪಿ.) ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ನಾಲ್ಕು ಕ್ಯಾಂಪಸ್‌ಗಳಲ್ಲಿ ವೃತ್ತಿಪರ ಆರೋಗ್ಯ ಶಿಕ್ಷಣ ನೀಡುವ, 22 ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ಏಷ್ಯಾದ ಮೊದಲ, ಅತೀ ದೊಡ್ಡ ಈ ಸಂಸ್ಥೆಗೆ ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯದಿಂದ ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಮಾನ್ಯತೆ ದೊರಕಿದೆ. 2024-2025 ರ ಸಾಲಿನಲ್ಲಿ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನವನ್ನು ಮಾಹೆಯ ಸಹ ಕುಲಪತಿ - ಮಾಹೆಯ ಹಳೆ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕಾಧ್ಯಕ್ಷ ಡಾ.ಶರತ್ ಕೆ ರಾವ್ ಉದ್ಘಾಟಿಸಿದರು, ಆರೋಗ್ಯ ವ್ಯವಸ್ಥೆಯಲ್ಲಿ ಅರ್ಹ ಮತ್ತು ಸಮರ್ಥ ವೃತ್ತಿಪರರನ್ನು ಸೃಷ್ಟಿಸುವ ಮತ್ತು ಗುಣಮಟ್ಟದ ಶಿಕ್ಷಣ, ಅಂತರ ಶಿಸ್ತಿನ ಸಂಶೋಧನೆಗಾಗಿ ಸಂಸ್ಥೆಯನ್ನು ಅಭಿನಂದಿಸಿದರು. ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ ಚೆರಿಯನ್ ವರ್ಗೀಸ್, ಮಾಹೆಯ ಹಳೆಯ ವಿದ್ಯಾರ್ಥಿಗಳ ಸಂಬಂಧಗಳ ನಿರ್ದೇಶಕ ಡಾ. ರೋಹಿತ್ ಸಿಂಗ್ ಸಂಸ್ಥೆಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.ಎಂ.ಸಿ.ಎಚ್.ಪಿ. ಡೀನ್ ಡಾ. ಜಿ. ಅರುಣ್ ಮಯ್ಯ , 25 ವರ್ಷಗಳಲ್ಲಿ ಸಂಸ್ಥೆಯು ಹುಟ್ಟು, ಗಮನಾರ್ಹ ವಿಸ್ತರಣೆ, ಬೆಳವಣಿಗೆಯನ್ನು, ಶೇ 70 ಕ್ಕಿಂತ ಹೆಚ್ಚು ಹಳೆಯ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಸ್ಥಾನ ಪಡೆದಿರುವುದನ್ನು ಹೆಮ್ಮೆಯಿಂದ ಹೇಳಿದರು.ಈ ಪುನರ್ಮಿಲನದಲ್ಲಿ ಪ್ರಪಂಚದ ವಿವಿಧ ಭಾಗಗಳಿಂದ 500 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಎಂ.ಸಿ.ಎಚ್.ಪಿ. ಯ ಪ್ರಮುಖ ಹಳೆಯ ವಿದ್ಯಾರ್ಥಿಗಳಲ್ಲಿನ ಸಾಧಕರನ್ನು ಸನ್ಮಾನಿಸಲಾಯಿತು.
ಎಂ.ಸಿ.ಎಚ್.ಪಿ.ಯ ಹಳೆಯ ವಿದ್ಯಾರ್ಥಿಗಳ ಸಂಬಂಧಗಳ ಮುಖ್ಯಸ್ಥ ಡಾ. ಶೋವನ್ ಸಹಾ ಮತ್ತು ಅಸೋಸಿಯೇಟ್ ಡೀನ್ ಡಾ ವೆಂಕಟರಾಜ್ ಐತಾಳ್ ಅವರು ಹಳೆಯ ವಿದ್ಯಾರ್ಥಿಗಳ ಚಟುವಟಿಕೆಯ ಅವಲೋಕನವನ್ನು ಒದಗಿಸಿದರು. ಡಾ. ಶೀಲಾ ವಂದಿಸಿದರು.