ಸಾರಾಂಶ
ಚೆಲುವನಾರಾಯಣಸ್ವಾಮಿಗೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ಚತುರ್ವೀದಿಗಳಲ್ಲಿ ನೆರವೇರಿತು. ರಾತ್ರಿ ಚಂದ್ರಮಂಡಲ ವಾಹನೋತ್ಸವ ಸಹ ಸಂಪ್ರದಾಯದಂತೆ ನಡೆಯಿತು. ಸೋಮವಾರ ರಾತ್ರಿ ಶೇಷವಾಹನೋತ್ಸವ ನೆರವೇರಿತು.
ಮೇಲುಕೋಟೆ:
ಆಷಾಢ ಜಾತ್ರಾ ಮಹೋತ್ಸವ ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವದ 3ನೇ ತಿರುನಾಳ್ ಅಂಗವಾಗಿ ಮಂಗಳವಾರ ಸಂಜೆ ನಾಗವಲ್ಲಿ ಮಹೋತ್ಸವ ನರಂದಾಳಿಕಾರೋಹಣ ಶಾಸ್ತ್ರೋಕ್ತವಾಗಿ ನೆರವೇರಿತು.ಚೆಲುವನಾರಾಯಣಸ್ವಾಮಿಗೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ಚತುರ್ವೀದಿಗಳಲ್ಲಿ ನೆರವೇರಿತು. ರಾತ್ರಿ ಚಂದ್ರಮಂಡಲ ವಾಹನೋತ್ಸವ ಸಹ ಸಂಪ್ರದಾಯದಂತೆ ನಡೆಯಿತು. ಸೋಮವಾರ ರಾತ್ರಿ ಶೇಷವಾಹನೋತ್ಸವ ನೆರವೇರಿತು.
ಇಂದು ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ:ಬುಧವಾರ ರಾತ್ರಿ 7ಕ್ಕೆ ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ. ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆಯ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯಲ್ಲಿ ಮೇಲುಕೋಟೆಗೆ ತಂದು ಹಿರಿಯ ಅಧಿಕಾರಿಗಳು ಸ್ಥಾನೀಕರು ಅರ್ಚಕ-ಪರಿಚಾರಕರ ಸಮಕ್ಷಮ ಪಾರ್ಕಾವಣೆ ಮಾಡಿ ಸ್ವಾಮಿಗೆ ತೊಡಿಸಲಾಗುತ್ತದೆ.
ಹೆಬ್ಬೆಟ್ಟದ ಬಸವೇಶ್ವರನಿಗೆ ವಿಶೇಷ ಪೂಜೆಹಲಗೂರು:
ಬಸವನ ಬೆಟ್ಟದ ಮೇಲೆ ನೆಲೆಸಿರುವ ಆರಾಧ್ಯದೇವ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಗೆ ಆಷಾಢ ಮಾಸದ ಪ್ರಯುಕ್ತ ಸೋಮವಾರ ವಿವಿಧ ರೀತಿಯ ಬಣ್ಣ, ಹೂವುಗಳಿಂದ ಆತ್ಮಲಿಂಗ ಹಾಗೂ ಬಸವೇಶ್ವರ ದೇವರ ಮೂರ್ತಿಗಳಿಗೆ ಶೃಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.ವಿದ್ವಾನ್ ಪ್ರಸಾದ್ ಸಮ್ಮುಖದಲ್ಲಿ ಎಚ್.ಬಸಾಪುರ ಗ್ರಾಮಸ್ಥರು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ದೇವರ ಮೂರ್ತಿಗಳಿಗೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗಿಸಲಾಯಿತು.
ವಿದ್ವಾನ್ ಪ್ರಸಾದ್ ಮಾತನಾಡಿ, ಪುರಾತನ ಚೋಳರ ಕಾಲದ ದೇವಸ್ಥಾನಕ್ಕೆ ಈ ಹಿಂದೆ ಕಾಲ್ನಡಿಗೆಯಲ್ಲಿ ಕಾಡಿನಲ್ಲಿ ನಡೆದುಕೊಂಡು ಭಕ್ತಾದಿಗಳು ಹೋಗಿ ದೇವರ ಪೂಜೆ ಸಲ್ಲಿಸಿ ಬರುತ್ತಿದ್ದರು. ಈಗ ರಸ್ತೆ ಆದ ಮೇಲೆ ದೇವಸ್ಥಾನಕ್ಕೆ ಸಾರಿಗೆ ವ್ಯವಸ್ಥೆ ಇದ್ದು, ಆಷಾಢ ಮಾಸ, ಶ್ರಾವಣ ಮಾಸಗಳಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ ಎಂದರು.