ಗಾಂಧೀಜಿಯ ಜೀವನ ಮೌಲ್ಯಗಳಾದ ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಚ್ಛತೆ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗಗಳಾಗಬೇಕೆಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಗಾಂಧೀಜಿಯ ಜೀವನ ಮೌಲ್ಯಗಳಾದ ಸತ್ಯ, ಅಹಿಂಸೆ, ಸರಳತೆ ಮತ್ತು ಸ್ವಚ್ಛತೆ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗಗಳಾಗಬೇಕೆಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಗಾಂಧೀಜಿ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ದೇಶದ ಭದ್ರತೆ ಮತ್ತು ಕೃಷಿಯ ಮಹತ್ವವನ್ನು ಸಾರಿದ ಮಹಾನ್ ದೇಶಭಕ್ತರಾಗಿದ್ದರು. ಅವರ ಜೈ ಜವಾನ್, ಜೈ ಕಿಸಾನ್ ಘೋಷಣೆ ಇಂದಿಗೂ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.ಆಡಳಿತಾಧಿಕಾರಿ ಮೋಹನರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಬಸವಲಿಂಗ ಸ್ವಾಮೀಜಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಇದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸ್ವಚ್ಛತೆ ಕುರಿತಾದ ನಾಟಕ, ರೂಪಕ ನೆರೆದವರ ಮನ ಸೆಳೆದವು. ಮಹಾತ್ಮ ಗಾಂಧೀಜಿ ವೇಷ ಧರಿಸಿದ್ದ ಚಿಣ್ಣರು ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿದ್ದರು.