ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಚುನಾವಣೆಯಲ್ಲಿ ಮತ ಕೇಳುವುದಕ್ಕೆ ಸಿಂಪ್ಲಿಸಿಟಿ ಇದ್ರೆ ಮಾತ್ರ ಸಾಕಾಗುವುದಿಲ್ಲ, ಮಾಡಿದ ಕೆಲಸಗಳನ್ನು ಕೂಡ ತೋರಿಸ್ಬೇಕಾಗುತ್ತದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಸಿಂಪಲ್ ಇಮೇಜ್ ಬಗ್ಗೆ ಪರೋಕ್ಷವಾಗಿ ಕಾಲೆಳೆದಿದ್ದಾರೆ.ಮಂಗಳವಾರ ಉಡುಪಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಮಾತನಾಡುವವರು ಜನಪ್ರತಿನಿಧಿಯಾಗಬೇಕು, ತಮ್ಮ ನಾಯಕನ ಹೆಸರಿನಲ್ಲಿ ಪ್ರತಿಸಲ ಮತ ಕೇಳುವವರಲ್ಲ, ನಾಯಕನ ಹೆಸರಿನಲ್ಲಿ ಮತ ಸಿಗುತ್ತದೆ ಅಂತಾದರೇ ಅವರು ಜನರ ಕೆಲಸ ಮಾಡುವುದಿಲ್ಲ ಎಂದು ಮೋದಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿಗೆ ಟಾಂಗ್ ನೀಡಿದರು.ನನಗೆ ಟಿಕಟ್ ಸಿಕ್ಕಿದರೆ ನಾನು ನನ್ನ ಹೆಸರಿನಲ್ಲಿಯೇ ಮತ ಕೇಳುತ್ತೇನೆ, ನಮ್ಮ ಪಕ್ಷದ ನಾಯಕನ ಹೆಸರಿನಲ್ಲಿ ಮತ ಕೇಳುವುದಿಲ್ಲ, ನನಗೆ ನಾಯಕ ಯಾರು ಅಂತ ಮುಖ್ಯ ಅಲ್ಲ, ಇಲ್ಲಿ ಸಂಸದ ಯಾರು ಎನ್ನುವುದು ಮುಖ್ಯ. ಇದು ಅಮೆರಿಕಾದಂತೆ ಅಧ್ಯಕ್ಷೀಯ ಮಾದರಿಯ ಚುನಾವಣೆ ಅಲ್ಲ, ಅಧ್ಯಕ್ಷನನ್ನು ಜನರು ಆಯ್ಕೆ ಮಾಡುವುದಲ್ಲ, ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದರು.ಜಾತಿ ಇಲ್ಲಿ ನಡೆಯುವುದಿಲ್ಲ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಂಟ್ ಬಿಲ್ಲವ ಸ್ಪರ್ಧೆಯ ಬಗ್ಗೆ ಮಾತನಾಡಿದ ಹೆಗ್ಡೆ, ಎಲ್ಲ ಬಂಟರ ಮತಗಳು ನನಗೆ ಸಿಗಲಿಕ್ಕಿಲ್ಲ, ಎಲ್ಲ ಬಿಲ್ಲವರ ಮತಗಳು ಕೋಟ ಅವರಿಗೆ ಸಿಗಲಿಕ್ಕಿಲ್ಲ. ನಮ್ಮದು ಜಾತ್ಯತೀತ ಸಮಾಜ, ಅದನ್ನು ಜನರು ಮತದಾನದ ಮೂಲಕ ತಿಳಿಸಲಿದ್ದಾರೆ. ರಾಜಕೀಯದಲ್ಲಿ ಜಾತಿ ಕ್ರೋಢೀಕರಣ ಹಿಂದೆ ಒಂದು ಹಂತದಲ್ಲಿ ಇತ್ತು. ಇಂದು ಅದು ಬದಲಾಗಿದೆ ಎಂಬ ಭರವಸೆಯನ್ನು ಅವರು ವ್ಯಕ್ತಡಿಸಿದರು.ಮತಯಾಚನೆಗೆ ಪಕ್ಷದ ನಾಯಕರು ಕರೆದಲ್ಲಿ ಹೋಗುತ್ತೇನೆ, ಕೇಂದ್ರ ಸರ್ಕಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ, ಸ್ಥಳೀಯ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.ನಾನೂ ಆಕಾಂಕ್ಷಿ: ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಚಿಕ್ಕಮಗಳೂರಿನ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಸುಧೀರ್ ಮರೊಳ್ಳಿ, ಅಭ್ಯರ್ಥಿ ಘೋಷಣೆ ಆಗುವ ತನಕ ನಾನು ಆಕಾಂಕ್ಷಿ, ನಾನು ಆಕಾಂಕ್ಷಿ ಎನ್ನುವುದರಲ್ಲಿ ಯಾವುದೇ ತಕರಾರು ಇಲ್ಲ. ಪಕ್ಷ ಅಭ್ಯರ್ಥಿ ಆಯ್ಕೆ ಮಾಡುವವರೆಗೆ ನಾನು ಟಿಕೆಟ್ ಗಾಗಿ ಸ್ಪರ್ಧಿಸುತ್ತೇನೆ. ಅಭ್ಯರ್ಥಿ ಘೋಷಣೆಯಾದ ನಂತರ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದರು.